ಮುಂಬಯಿ: ಚಿತ್ತಗಾಂಗ್‌ನಲ್ಲಿ ಸದ್ಯ ಸಾಗುತ್ತಿರುವ ಬಾಂಗ್ಲಾದೇಶ ತಂಡದೆದುರಿನ ಟೆಸ್ಟ್ ಸರಣಿ ಮುಗಿದ ಬಳಿಕ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯ ತಂಡವು ಭಾರತಕ್ಕೆ ಆಗಮಿಸಲಿದೆ. ಸೆ. 17ರಂದು ಚೆನ್ನೈಯಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ.
ಇನ್ನುಳಿದ ಪಂದ್ಯಗಳು ಅನುಕ್ರಮವಾಗಿ ಕೋಲ್ಕತಾ (ಸೆ. 21), ಇಂಧೋರ್ (ಸೆ. 24), ಬೆಂಗಳೂರು (ಸೆ. 28) ಮತ್ತು ನಾಗ್ಪುರ (ಅ. 1) ದಲ್ಲಿ ನಡೆಯಲಿವೆ. ಆಬಳಿಕ ಆಸ್ಟ್ರೇಲಿಯ ತಂಡವು ಟ್ವೆಂಟಿ20 ಸರಣಿಯಲ್ಲಿ ಭಾಗವಹಿಸಲು ರಾಂಚಿ (ಅ. 7), ಗುವಾಹಾಟಿ (ಅ. 10) ಮತ್ತು ಹೈದರಾಬಾದ್ (ಅ. 13)ಗೆ ತೆರಳಲಿದೆ.
ಆಸ್ಟ್ರೇಲಿಯ ಪ್ರವಾಸ ಆರಂಭವಾಗಲು ಕೇವಲ ಎರಡು ವಾರ ಇದ್ದರೂ ಬಿಸಿಸಿಐ ಇನ್ನೂ ಆತಿಥ್ಯ ವಹಿಸುವ ಕೇಂದ್ರ ಸಹಿತ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ನೂತನ ತಾಣಗಳಾದ ಗುವಾಹಾಟಿ ಮತ್ತು ತಿರುವನಂತಪುರಕ್ಕೆ ಐಸಿಸಿಯ ಅನುಮತಿಯ ನಿರೀಕ್ಷೆಯಲ್ಲಿರುವ ಕಾರಣ ಮಂಡಳಿ ಅಧಿಕೃತ ವೇಳಾಪಟ್ಟಿ ಪ್ರಕಟಿಸಿಲ್ಲವೆಂದು ತಿಳಿದುಬಂದಿಲ್ಲ.
ಐಸಿಸಿಯ ಪರವಾಗಿ ಮಾಜಿ ವೇಗಿ ಮತ್ತು ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಕಳೆದ ಸೋಮವಾರ ಗುವಾಹಾಟಿಯ ಬರ್ಸಾಪರ ಕ್ರೀಡಾಂಗಣವನ್ನು ಪರಿಶೀಲಿಸಿದ್ದಾರೆ. ಇದರ ವರದಿಯನ್ನು ಕಾಯಲಾಗುತ್ತಿದೆ ಎಂದು ಅಸ್ಸಾಂ ಕ್ರಿಕೆಟ್ ಅಸೋಸಿಯೇಶನ್‌ನ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ವರ್ಷದ ಆರಂಭದಲ್ಲಿ ನಡೆದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತವು ಆಸ್ಟ್ರೇಲಿಯವನ್ನು 2-1 ಅಂತರದಿಂದ ಸೋಲಿಸಿತ್ತು. 2013-14ರಲ್ಲಿ ನಡೆದ ಏಕದಿನ ಸರಣಿಯಲ್ಲೂ ಭಾರತ ಮೇಲುಗೈ ಸಾಧಿಸಿತ್ತು. ಏಳು ಪಂದ್ಯಗಳ ಸರಣಿಯಲ್ಲಿ ಭಾರತ 3-2 ಅಂತರದಿಂದ ಜಯಭೇರಿ ಬಾರಿಸಿತ್ತು ಮಾತ್ರವಲ್ಲದೇ ರಾಜ್‌ಕೋಟ್‌ನಲ್ಲಿ ನಡೆದ ಏಕೈಕ ಟ್ವೆಂಟಿ20 ಪಂದ್ಯವನ್ನು ಕೂಡ ಜಯಿಸಿತ್ತು.