Advertisement

ಕೋಲ್ಕತಾದಲ್ಲೂ ಭಾರತ ವಿಜಯೋತ್ಸವ

09:55 AM Sep 22, 2017 | |

ಕೋಲ್ಕತಾ: ಕುಲದೀಪ್‌ ಯಾದವ್‌ ಅವರ ಹ್ಯಾಟ್ರಿಕ್‌ ವಿಕೆಟ್‌ ಮತ್ತು ಭುವನೇಶ್ವರ್‌ ಅವರ ಮಾರಕ ದಾಳಿ ಹಾಗೂ ನಾಯಕ ವಿರಾಟ್‌ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಅವರ ಭರ್ಜರಿ ಬ್ಯಾಟಿಂಗ್‌ನಿಂದಾಗಿ ಭಾರತ ತಂಡವು ಗುರುವಾರ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವನ್ನು 50 ರನ್ನುಗಳಿಂದ ಅಧಿಕಾರಯುತವಾಗಿ ಸೋಲಿಸಿದೆ.

Advertisement

ಗೆಲ್ಲಲು 253 ರನ್‌ ಗಳಿಸುವ ಸವಾಲು ಪಡೆದ ಆಸ್ಟ್ರೇಲಿಯ ತಂಡವು ಭಾರತದ ಶಿಸ್ತುಬದ್ಧ ಬೌಲಿಂಗ್‌ಗೆ ತತ್ತರಿಸಿ 43.1 ಓವರ್‌ಗಳಲ್ಲಿ 202 ರನ್ನಿಗೆ ಆಲೌಟಾಗಿ ಶರಣಾಯಿತು. ಹೀಗಾಗಿ ತನ್ನ 100ನೇ ಏಕದಿನ ಪಂದ್ಯದಲ್ಲಿ ಗೆಲ್ಲುವ ಆಸ್ಟ್ರೇಲಿಯ ನಾಯಕ ಸ್ಟೀವನ್‌ ಸ್ಮಿತ್‌ ಅವರ ಕನಸು ನುಚ್ಚುನೂರಾಯಿತು. ಈ ಗೆಲುವಿನಿಂದ ಭಾರತ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಚೆನ್ನೈಯಲ್ಲಿ ನಡೆದ ಸರಣಿಯ ಮೊದಲ ಪಂದ್ಯವನ್ನು ಭಾರತ ಜಯಿಸಿತ್ತು. 

ಭುವನೇಶ್ವರ್‌ ಮಾರಕ: ಮಾರಕ ದಾಳಿ ಸಂಘಟಿಸಿದ ಭುವನೇಶ್ವರ್‌ ಆರಂಭಿಕ ಆಟಗಾರರಾದ ಕಾರ್ಟ್‌ರೈಟ್‌ ಮತ್ತು ವಾರ್ನರ್‌ ಅವರ ವಿಕೆಟನ್ನು ಕಿತ್ತು ಆಸ್ಟ್ರೇಲಿಯಕ್ಕೆ ಪ್ರಬಲ ಹೊಡೆತ ನೀಡಿದರು. 9 ರನ್‌ ಗಳಿಸುವಷ್ಟರಲ್ಲಿ ಇವರಿಬ್ಬರು ಪೆವಿಲಿಯನ್‌ ಸೇರಿಕೊಂಡಿದ್ದರು. ಆಬಳಿಕ ನಾಯಕ ಸ್ಟೀವನ್‌ ಸ್ಮಿತ್‌ ಮತ್ತು ಟ್ರ್ಯಾವಿಸ್‌ ಹೆಡ್‌ ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. ಅವರಿಬ್ಬರು ಮೂರನೇ ವಿಕೆಟಿಗೆ 76 ರನ್‌ ಪೇರಿಸಿದರು. ಹೆಡ್‌ 39 ರನ್‌ ಗಳಿಸಿ ಔಟಾದರೆ ಬಿರುಸಿನ ಆಟಕ್ಕೆ ಇಳಿದ ಮ್ಯಾಕ್ಸ್‌ವೆಲ್‌ ಸ್ಟಂಪ್‌ ಔಟಾದರು. ಒಂದು ಕಡೆಯಿಂದ ಭಾರತೀಯ ದಾಳಿಯನ್ನು ದಿಟ್ಟವಾಗಿ ಎದುರಿಸುತ್ತಿದ್ದ ಸ್ಮಿತ್‌ 59 ರನ್‌ ಗಳಿಸಿದ ವೇಳೆ ಪಾಂಡ್ಯ ಎಸೆತದಲ್ಲಿ ಔಟಾಗುತ್ತಲೇ ಆಸ್ಟ್ರೇಲಿಯದ ಸೋಲು ಖಚಿತವಾಗತೊಡಗಿತು. ಆಬಳಿಕ ಮ್ಯಾಜಿಕ್‌ ದಾಳಿ ನಡೆಸಿದ ಕುಲದೀಪ್‌ ಸತತ ಮೂರು ಎಸೆತಗಳಲ್ಲಿ ಮ್ಯಾಥ್ಯೂ ವೇಡ್‌, ಅಗರ್‌ ಮತ್ತು ಕಮಿನ್ಸ್‌ ಅವರ ವಿಕೆಟನ್ನು ಹಾರಿಸಿ ಹ್ಯಾಟ್ರಿಕ್‌ ಸಾಧಿಸಿದರು. ಅಂತಿಮವಾಗಿ ತಂಡ 202 ರನ್ನಿಗೆ ಆಲೌಟಾಯಿತು. ಒಂದು ಕಡೆಯಿಂದ ಬಿರುಸಿನ ಆಟವಾಡಿದ ಸ್ಟೋಯಿನಿಸ್‌ 62 ರನ್‌ ಗಳಿಸಿ ಅಜೇಯರಾಗಿ ಉಳಿದರು. ಅವರಿಗೆ ಉಳಿದ ಯಾವುದೇ ಆಟಗಾರರು ಉತ್ತಮ ಬೆಂಬಲ ನೀಡಲು ವಿಫ‌ಲರಾದರು. 

ಮಾರಕ ದಾಳಿ ಸಂಘಟಿಸಿದ ಭುವನೇಶ್ವರ್‌ ತನ್ನ 6.1 ಓವರ್‌ಗಳ ದಾಳಿಯಲ್ಲಿ ಕೇವಲ 9  ರನ್‌ ನೀಡಿ ಮೂರು ವಿಕೆಟ್‌ ಕಿತ್ತು ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡರು. ಕುಲದೀಪ್‌ ಯಾದವ್‌ 54 ರನ್ನಿಗೆ 3 ವಿಕೆಟ್‌ ಪಡೆದರೆ ಪಾಂಡ್ಯ ಮತ್ತು ಚಾಹಲ್‌ ತಲಾ ಎರಡು ವಿಕೆಟ್‌ ಪಡೆದರು.

ಕೊಹ್ಲಿ, ರಹಾನೆ ಅರ್ಧಶತಕ: ಟಾಸ್‌ ಗೆದ್ದ ಕೊಹ್ಲಿ ಮೊದಲು ಬ್ಯಾಟಿಂಗ್‌ ನಡೆಸಲು ನಿರ್ಧರಿಸಿದರು. ಆದರೆ ರೋಹಿತ್‌ ಶರ್ಮ ಇಲ್ಲಿಯೂ ಮಿಂಚಲು ವಿಫ‌ಲರಾದರು. ಆದರೆ ಕೊಹ್ಲಿ ಮತ್ತು ರಹಾನೆ ಅವರ ಜವಾಬ್ದಾರಿಯ ಆಟದಿಂದಾಗಿ ಭಾರತ ಉತ್ತಮ ಮೊತ್ತ ಪೇರಿಸುವ ಸೂಚನೆ ನೀಡಿದರು. ಸರಾಸರಿ ಐದರಂತೆ ರನ್‌ ಪೇರಿಸಿದ ಇವರಿಬ್ಬರು ದ್ವಿತೀಯ ವಿಕೆಟಿಗೆ ಕೇವಲ 111 ಎಸೆತಗಳಲ್ಲಿ 102 ರನ್‌ ಪೇರಿಸಿದರು. 20ನೇ ಓವರ್‌ನಲ್ಲಿ ಭಾರತದ ನೂರು ರನ್‌ ದಾಖಲಾಗಿತ್ತು. 23.4 ಓವರ್‌ಗಳಲ್ಲಿ 55 ರನ್‌ ಗಳಿಸಿದ ರಹಾನೆ ದುರದೃಷ್ಟವಶಾತ್‌ ರನೌಟಾದರು. 64 ಎಸೆತ ಎದುರಿಸಿದ ಅವರು 7 ಬೌಂಡರಿ ಬಾರಿಸಿದರು.

Advertisement

ರಹಾನೆ ಔಟಾದ ಬಳಿಕ ಭಾರತ ಪಾಂಡೆ ಅವರನ್ನು ಬೇಗನೇ ಕಳೆದುಕೊಂಡಿತು. ಆದರೆ ಕೇದಾರ್‌ ಜಾಧವ್‌ ಅವರು ಕೊಹ್ಲಿಗೆ ಉತ್ತಮ ಬೆಂಬಲ ನೀಡಲು ಪ್ರಯತ್ನಿಸಿದರು. ಅವರಿಬ್ಬರು ನಾಲ್ಕನೇ ವಿಕೆಟಿಗೆ 55 ರನ್‌ ಪೇರಿಸಿ ಬೇರ್ಪಟ್ಟರು. ಜಾಧವ್‌ ಔಟಾದ ಬಳಿಕ ಭಾರತ ಕುಸಿಯತೊಡಗಿತು. ರಹಾನೆ ಮತ್ತು ಜಾಧವ್‌ ಔಟಾದ ಬಳಿಕ ಆಸ್ಟೇಲಿಯದ ಬೌಲರ್‌ಗಳು ಭಾರತಕ್ಕೆ ಕಡಿವಾಣ ಹಾಕಲು ಯಶಸ್ವಿಯಾದರು. 

18 ರನ್‌ ಅಂತರದಲ್ಲಿ ಜಾಧವ್‌, ಕೊಹ್ಲಿ ಮತ್ತು ಧೋನಿ ಅವರ ವಿಕೆಟ್‌ ಕಳೆದುಕೊಂಡಾಗ ಭಾರತದ ದೊಡ್ಡ ಮೊತ್ತದ ನಿರೀಕ್ಷೆಗೆ ಪ್ರಬಲ ಹೊಡೆತ ಬಿತ್ತು. ಜಾಧವ್‌ 24 ರನ್‌ ಗಳಿಸಿದರೆ ಕೊಹ್ಲಿ 8 ರನ್ನಿನಿಂದ ಶತಕ ಬಾರಿಸಲು ಅಸಮರ್ಥರಾದರು. 107 ಎಸೆತ ಎದುರಿಸಿದ ಅವರು 8 ಬೌಂಡರಿ ನೆರವಿನಿಂದ 92 ರನ್‌ ಹೊಡೆದು ನೈಲ್‌ಗೆ ಬಲಿಯಾದರು. ಸ್ವಲ್ಪ ಹೊತ್ತಿನಲ್ಲಿ ಚೆನ್ನೈ ಏಕದಿನ ಪಂದ್ಯದ ಹೀರೊ ಧೋನಿ ಕೂಡ ನಿರ್ಗಮಿಸಿದರು. ಅವರು 5 ರನ್‌ ಗಳಿಸಲಷ್ಟೇ ಶಕ್ತರಾದರು.

ಚೆನ್ನೈ ಪಂದ್ಯದಲ್ಲಿ ಮಿಂಚಿದ ಹಾರ್ದಿಕ್‌ ಪಾಂಡ್ಯ ಮತ್ತು ಭುವನೇಶ್ವರ್‌ ಉತ್ತಮವಾಗಿ ಆಡಲು ಪ್ರಯತ್ನಿಸಿದರೂ 20 ರನ್‌ ಗಳಿಸಿ ಔಟಾದರು. ಭಾರತದ ಇನ್ನಿಂಗ್ಸ್‌ ಮುಗಿಯಲು ಎರಡು ಓವರ್‌ಗಳಿರುವಾಗ ಮಳೆ ಬಂದು ಸ್ವಲ್ಪ ಹೊತ್ತು ಆಟ ನಿಂತಿತ್ತು. ಅಂತಿಮವಾಗಿ ಸರಿಯಾಗಿ 50 ಓವರ್‌ಗಳಲ್ಲಿ ಭಾರತ 252 ರನ್ನಿಗೆ ಆಲೌಟಾಯಿತು. ಬಿಗು ದಾಳಿ ಸಂಘಟಿಸಿದ ನಥನ್‌ ಕೋಲ್ಟರ್‌ ನೈಲ್‌ ಮತ್ತು ಕೇನ್‌ ರಿಚಡ್ಸìನ್‌ ತಲಾ ಮೂರು ವಿಕೆಟ್‌ ಕಿತ್ತರು.

ಸ್ಕೋರ್‌ಪಟ್ಟಿ
ಭಾರತ
ಅಜಿಂಕ್ಯ ರಹಾನೆ    ರನೌಟ್‌    55
ರೋಹಿತ್‌ ಶರ್ಮ    ಸಿ ಮತ್ತು ಬಿ ನೈಲ್‌    7
ವಿರಾಟ್‌ ಕೊಹ್ಲಿ    ಬಿ ಕೋಲ್ಟರ್‌ ನೈಲ್‌    92
ಮನೀಷ್‌ ಪಾಂಡೆ    ಬಿ ಅಗರ್‌    3
ಕೇದಾರ್‌ ಜಾಧವ್‌    ಸಿ ಮ್ಯಾಕ್ಸ್‌ವೆಲ್‌ ಬಿ ನೈಲ್‌    24
ಎಂಎಸ್‌ ಧೋನಿ    ಸಿ ಸ್ಮಿತ್‌ ಬಿ ರಿಚಡ್ಸìನ್‌    5
ಹಾರ್ದಿಕ್‌  ಪಾಂಡ್ಯ    ಸಿ ವಾರ್ನರ್‌ ಬಿ ರಿಚಡ್ಸìನ್‌    20
ಭುವನೇಶ್ವರ್‌ ಕೆ.    ಸಿ ಮ್ಯಾಕ್ಸ್‌ವೆಲ್‌ ಬಿ ರಿಚಡ್ಸìನ್‌    20
ಕುಲದೀಪ್‌ ಯಾದವ್‌    ಸಿ ವೇಡ್‌ ಬಿ ಕಮಿನ್ಸ್‌    0
ಜಸ್‌ಪ್ರೀತ್‌ ಬುಮ್ರಾ    ಔಟಾಗದೆ    10
ಯುಜ್ವೇಂದ್ರ ಚಾಹಲ್‌    ರನೌಟ್‌    1

ಇತರ:        15
ಒಟ್ಟು (50 ಓವರ್‌ಗಳಲ್ಲಿ ಆಲೌಟ್‌)    252
ವಿಕೆಟ್‌ ಪತನ: 1-19, 2-121, 3-131, 4-186, 5-197, 6-204, 7-239, 8-239, 9-246

ಬೌಲಿಂಗ್‌: 
ಪ್ಯಾಟ್‌ ಕಮಿನ್ಸ್‌        10-1-34-1
ನಥನ್‌ ಕೋಲ್ಟರ್‌ ನೈಲ್‌        10-0-51-3
ಕೇನ್‌ ರಿಚಡ್ಸìನ್‌        10-0-55-3
ಮಾರ್ಕಸ್‌ ಸ್ಟೋಯಿನಿಸ್‌        9-0-46-0
ಆ್ಯಸ್ಟನ್‌ ಅಗರ್‌        9-0-54-1
ಟ್ರ್ಯಾವಿಸ್‌ ಹೆಡ್‌        2-0-11-0

ಆಸ್ಟ್ರೇಲಿಯ
ಹಿಲ್ಟನ್‌ ಕಾರ್ಟ್‌ರೈಟ್‌    ಬಿ ಕುಮಾರ್‌    1
ಡೇವಿಡ್‌ ವಾರ್ನರ್‌    ಸಿ ರಹಾನೆ ಬಿ ಕುಮಾರ್‌    1
ಸ್ಟೀವನ್‌ ಸ್ಮಿತ್‌    ಸಿ ಬದಲಿಗ ಬಿ ಪಾಂಡ್ಯ    59
ಟ್ರ್ಯಾವಿಸ್‌ ಹೆಡ್‌    ಸಿ ಪಾಂಡೆ ಬಿ ಚಾಹಲ್‌    39
ಗ್ಲೆನ್‌ ಮ್ಯಾಕ್ಸ್‌ವೆಲ್‌    ಸ್ಟಂಪ್ಡ್ ಧೋನಿ ಬಿ ಚಾಹಲ್‌    14
ಮಾರ್ಕಸ್‌ ಸ್ಟೋಯಿನಿಸ್‌    ಔಟಾಗದೆ    62    ಮ್ಯಾಥ್ಯೂ ವೇಡ್‌    ಬಿ ಕುಲದೀಪ್‌    2
ಆ್ಯಸ್ಟನ್‌ ಅಗರ್‌    ಎಲ್‌ಬಿಡಬ್ಲ್ಯು ಕುಲದೀಪ್‌    0
ಪ್ಯಾಟ್‌ ಕಮಿನ್ಸ್‌    ಸಿ ಧೋನಿ ಬಿ ಕುಲದೀಪ್‌    0
ನಥನ್‌ ಕೋಲ್ಟರ್‌ ನೈಲ್‌    ಸಿ ಮತ್ತು ಬಿ ಪಾಂಡ್ಯ    8
ಕೇನ್‌ ರಿಚಡ್ಸìನ್‌    ಎಲ್‌ಬಿಡಬು ಬಿ ಕುಮಾರ್‌    0

ಇತರ:        16
ಒಟ್ಟು (43.1 ಓವರ್‌ಗಳಲ್ಲಿ ಆಲೌಟ್‌)    202
ವಿಕೆಟ್‌ ಪತನ: 1-2, 2-9, 3-85, 4-106, 5-138, 6-148, 7-148, 8-148, 9-182

ಬೌಲಿಂಗ್‌: 
ಭುವನೇಶ್ವರ್‌ ಕುಮಾರ್‌        6.1-2-9-3
ಜಸ್‌ಪ್ರೀತ್‌ ಬುಮ್ರಾ        7-1-39-0
ಹಾರ್ದಿಕ್‌ ಪಾಂಡ್ಯ        10-0-56-2
ಯುಜ್ವೇಂದ್ರ ಚಾಹಲ್‌        10-1-34-2
ಕುಲದೀಪ್‌ ಯಾದವ್‌        10-1-54-3

ಪಂದ್ಯಶ್ರೇಷ್ಠ:  ವಿರಾಟ್‌ ಕೊಹ್ಲಿ

Advertisement

Udayavani is now on Telegram. Click here to join our channel and stay updated with the latest news.

Next