Advertisement

ಅಡಿಲೇಡ್‌ನ‌ಲ್ಲಿ ದಿಢೀರ್‌ ಹೆಚ್ಚಿದ ಕೋವಿಡ್; ಡೇ-ನೈಟ್‌ ಟೆಸ್ಟ್‌ ಪಂದ್ಯಕ್ಕೆ ಆತಂಕವಿಲ್ಲ

08:10 PM Nov 17, 2020 | mahesh |

ಅಡಿಲೇಡ್: ಇನ್ನೇನು ಬಹು ನಿರೀಕ್ಷಿತ ಭಾರತ-ಆಸ್ಟ್ರೇಲಿಯ ನಡುವಿನ ಕ್ರಿಕೆಟ್‌ ಸರಣಿ ನಿರ್ವಿಘ್ನವಾಗಿ ಆರಂಭವಾಗಲಿದೆ ಎಂಬ ಹೊತ್ತಿನಲ್ಲೇ ಆತಂಕವೊಂದು ಎದುರಾಗಿದೆ.

Advertisement

ಅಡಿಲೇಡ್‌ನ‌ಲ್ಲಿ ದಿಢೀರನೇ ಕೋವಿಡ್‌-19 ಸೋಂಕು ಹೆಚ್ಚಿದ್ದು, ಇದು ಸರಣಿ ಆರಂಭದ ಡೇ-ನೈಟ್‌ ಟೆಸ್ಟ್‌ ಪಂದ್ಯದ ಆತಿಥ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಆದರೆ “ಕ್ರಿಕೆಟ್‌ ಆಸ್ಟ್ರೇಲಿಯ’ (ಸಿಎ) ಮಾತ್ರ ಈ ಪಂದ್ಯ ವೇಳಾಪಟ್ಟಿಯಂತೆ ಅಡಿಲೇಡ್‌ನ‌ಲ್ಲೇ ನಡೆಯಲಿದೆ ಎಂದಿದೆ.

ಸೌತ್‌ ಆಸ್ಟ್ರೇಲಿಯದ ರಾಜಧಾನಿಯಾದ ಅಡಿಲೇಡ್‌ನ‌ಲ್ಲಿ ಸೋಮವಾರ ಕೋವಿಡ್‌ ಸೋಂಕಿತರ ಸಂಖ್ಯೆ 4ರಿಂದ 18ಕ್ಕೆ ಏರಿಕೆಯಾದ ಬೆನ್ನಲ್ಲೇ ಆತಂಕ ಮನೆ ಮಾಡಿಕೊಳ್ಳತೊಡಗಿದೆ. ಇನ್ನೊಂದೆಡೆ ವೆಸ್ಟರ್ನ್ ಆಸ್ಟ್ರೇಲಿಯ, ಕ್ವೀನ್ಸ್‌ಲ್ಯಾಂಡ್‌, ಟಾಸ್ಮೆನಿಯಾ ರಾಜ್ಯಗಳು ತಮ್ಮ ಗಡಿಯನ್ನು ಸಂಪೂರ್ಣ ಮುಚ್ಚಿವೆ. ಇಲ್ಲಿನ ಕ್ರಿಕೆಟಿಗರನ್ನು “ಕ್ರಿಕೆಟ್‌ ಆಸ್ಟ್ರೇಲಿಯ’ ಏರ್‌ಲಿಫ್ಟ್‌ ಮಾಡಿದೆ. ಆದರೆ ಸೌತ್‌ ಆಸ್ಟ್ರೇಲಿಯ, ನ್ಯೂ ಸೌತ್‌ ವೇಲ್ಸ್‌ ಮತ್ತು ವಿಕ್ಟೋರಿಯಾ ರಾಜ್ಯಗಳ ಗಡಿಗಳು ತೆರೆದೇ ಇವೆ. ಅಡಿಲೇಡ್‌ನ‌ಲ್ಲಿದ್ದ ಬಿಗ್‌ ಬಾಶ್‌ ಲೀಗ್‌ ಫ್ರಾಂಚೈಸಿಯ ಅಡಿಲೇಡ್‌ ಸ್ಟ್ರೈಕರ್ ಆಟಗಾರರೆಲ್ಲ ಸಿಡ್ನಿಗೆ ಸ್ಥಳಾಂತರಗೊಂಡಿದ್ದಾರೆ. ಹಾಗೆಯೇ ಆಸ್ಟ್ರೇಲಿಯದ ಏಕದಿನ ಹಾಗೂ ಟಿ20 ತಂಡದ ಕ್ರಿಕೆಟಿಗರೂ ಇದರಲ್ಲಿ ಸೇರಿದ್ದಾರೆ.

ಮುನ್ನೆಚ್ಚರಿಕೆಯ ಕ್ರಮ
ಡೇ-ನೈಟ್‌ ಟೆಸ್ಟ್‌ ಪಂದ್ಯದ ಕುರಿತು ಮಂಗಳವಾರ ಹೇಳಿಕೆಯೊಂದನ್ನು ನೀಡಿದ ಕ್ರಿಕೆಟ್‌ ಆಸ್ಟ್ರೇಲಿಯ ಸಿಇಒ ನಿಕ್‌ ಹಾಕ್ಲೆ, “ನಾವು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ. ಮುನ್ನೆಚ್ಚರಿಕೆಯ ಕ್ರಮವಾಗಿ ಕ್ರಿಕೆಟಿಗರನ್ನು ಸ್ಥಳಾಂತರಿಸಲಾಗಿದೆ. ಆದರೆ ಭಾರತ-ಆಸ್ಟ್ರೇಲಿಯ ನಡುವಿನ ಟೆಸ್ಟ್‌ ಪಂದ್ಯಕ್ಕೆ ಆತಂಕ ಎದುರಾಗದು. ಇದನ್ನು ಅಡಿಲೇಡ್‌ ಓವಲ್‌ನಲ್ಲೇ ನಡೆಸುವುದು ನಮ್ಮ ಯೋಜನೆ’ ಎಂದಿದ್ದಾರೆ. ಈ ಪಂದ್ಯದ ಆರಂಭಕ್ಕೆ ಇನ್ನೂ ಒಂದು ತಿಂಗಳಿದೆ.
ಹಾಗೆಯೇ ಭಾರತ-ಆಸ್ಟ್ರೇಲಿಯ ನಡುವಿನ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯವನ್ನು ಸಂಪ್ರದಾಯದಂತೆ ಮೆಲ್ಬರ್ನ್ನಲ್ಲೇ ನಡೆಸುವುದು ಕ್ರಿಕೆಟ್‌ ಆಸ್ಟ್ರೇಲಿಯದ ಗುರಿಯಾಗಿದೆ.
ಇದು ಭಾರತ-ಆಸ್ಟ್ರೇಲಿಯ ನಡುವೆ ಸಾಗುವ ಮೊದಲ ಹಗಲು-ರಾತ್ರಿ ಟೆಸ್ಟ್‌ ಪಂದ್ಯವಾದ ಕಾರಣ ಕ್ರಿಕೆಟ್‌ ಅಭಿಮಾನಿಗಳು ಭಾರೀ ಕುತೂಹಲ ಇರಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next