Advertisement
ಇತ್ತ ಸರಣಿ ವಿಜೇತ ಕೊಹ್ಲಿ ಪಡೆ ಬೆಂಗಳೂರು ಸೋಲನ್ನು ಮರೆತು 4ನೇ ಜಯ ಸಾಧಿಸಿ ಸರಣಿಯನ್ನು ದೊಡ್ಡ ಅಂತರದಲ್ಲಿ ಗೆಲ್ಲುವ ಯೋಜನೆಯಲ್ಲಿದೆ.
Related Articles
“ನಾವು ಈಗಾಗಲೇ ಸರಣಿ ಜಯಿಸಿದ್ದೇವೆ. ತಂಡದ ಮೀಸಲು ಸಾಮರ್ಥ್ಯವನ್ನು ಪರೀಕ್ಷಿಸಬೇಕಿತ್ತು. ಹೀಗಾಗಿ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಮಾಡಿಕೊಂಡೆವು. ಎಲ್ಲರಿಗೂ ಆಡುವ ಅವಕಾಶ ಕಲ್ಪಿಸುವುದು ನಮ್ಮ ಯೋಜನೆ’ ಎಂದು ಬೆಂಗಳೂರು ಸೋಲಿನ ಬಳಿಕ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದರು.
Advertisement
ಈ ಸರಣಿಯಲ್ಲಿ ಈವರೆಗೆ ಆಡುವ ಅವಕಾಶ ಪಡೆಯದಿದ್ದುದು ಕೆ.ಎಲ್. ರಾಹುಲ್ ಮಾತ್ರ. ಕರ್ನಾಟಕದ ಈ ಆರಂಭಕಾರನಿಗೆ ನಾಗ್ಪುರದಲ್ಲಿ ಆಡುವ ಅವಕಾಶ ಲಭಿಸುವ ಸಾಧ್ಯತೆ ಇದೆ. ಆದರೆ ರಾಹುಲ್ ಅವರನ್ನು ಯಾವ ಕ್ರಮಾಂಕದಲ್ಲಿ ಆಡಿಸುವುದು ಎಂಬುದೇ ದೊಡ್ಡ ಪ್ರಶ್ನೆ. ಅವರನ್ನು ಆರಂಭಿಕನನ್ನಾಗಿ ಇಳಿಸುವುದಾದರೆ ಆಗ ಅಜಿಂಕ್ಯ ರಹಾನೆ ಹೊರಗುಳಿಯಬಹುದು, ಮಧ್ಯಮ ಕ್ರಮಾಂಕದಲ್ಲಿ ಆಡಿಸುವುದಾದರೆ ಮನೀಷ್ ಪಾಂಡೆ ಜಾಗ ಖಾಲಿ ಮಾಡಬೇಕಾಗಬಹುದು. ಆದರೆ ರಾಹುಲ್ ಓಪನಿಂಗ್ ಹೊರತುಪಡಿಸಿ ಬೇರೆ ಕ್ರಮಾಂಕದಲ್ಲಿ ಯಶಸ್ಸು ಕಂಡಿಲ್ಲ ಎಂಬುದನ್ನು ಗಮನಿಸಬೇಕಾಗುತ್ತದೆ.
ಈ ಸರಣಿಯಲ್ಲಿ ರೋಹಿತ್-ರಹಾನೆ ಆರಂಭಿಕರಾಗಿ ಕ್ಲಿಕ್ ಆಗಿದ್ದಾರೆ. ಸತತ 2 ಶತಕಗಳ ಜತೆಯಾಟದ ಮೂಲಕ ಗಮನ ಸೆಳೆದಿದ್ದಾರೆ. ಹೀಗಿರುವಾಗ ಈ ಜೋಡಿಯನ್ನು ಬೇರ್ಪಡಿಸುವ ಸಾಧ್ಯತೆ ತೀರಾ ಕಡಿಮೆ ಎಂದೇ ಹೇಳಬೇಕಾಗುತ್ತದೆ. ಆದರೆ ಮನೀಷ್ ಪಾಂಡೆ ಈವರೆಗೆ ಗಮನಾರ್ಹ ಬ್ಯಾಟಿಂಗ್ ಪ್ರದರ್ಶಿಸಿಲ್ಲ. ಅವರಿಂದ ಒಂದೂ ಅರ್ಧ ಶತಕ ಬಂದಿಲ್ಲ. ದೊಡ್ಡ ಮೊತ್ತದ ಸವಾಲು ಮುಂದಿರುವಾಗಲೆಲ್ಲ ಹಾರ್ದಿಕ್ ಪಾಂಡ್ಯ ಅವರಿಗೆ ಬಡ್ತಿ ನೀಡಲಾಗುತ್ತಿದೆ. ಬಿಗ್ ಹಿಟ್ಟರ್ ಪಾಂಡ್ಯ ಯಾವ ಕ್ರಮಾಂಕಕ್ಕೂ ಸೈ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ.
ಪಾಂಡ್ಯ ಅವರಿಗೆ ಪ್ರಮೋಶನ್ ನೀಡಿದಾಗ ಸಹಜವಾಗಿಯೇ ಧೋನಿ ಅವರನ್ನು ಕೆಳ ಕ್ರಮಾಂಕಕ್ಕೆ ಇಳಿಸಲಾಯಿತು. ಈ ಕ್ರಮ ಸಾಕಷ್ಟು ಟೀಕೆಗೆ ಗುರಿಯಾದರೂ ವಿಶ್ವಕಪ್ ಪ್ರಯೋಗದ ಹಿನ್ನೆಲೆಯಲ್ಲಿ ಈ ಬದಲಾವಣೆಯನ್ನು ಸ್ವೀಕರಿಸುವುದು ಅನಿವಾರ್ಯವಾಗುತ್ತದೆ.
ಆಸೀಸ್ ಆಲ್‌ರೌಂಡ್ ಶೋಆಸ್ಟ್ರೇಲಿಯ ಸತತ 3 ಸೋಲುಂಡು ಸರಣಿ ಕಳೆದುಕೊಂಡರೂ ಗೆಲುವಿನ ಅವಕಾಶ ಸ್ಮಿತ್ ಪಡೆಗೂ ಇದ್ದಿತ್ತು. ಕೊನೆಗೆ ಬೆಂಗಳೂರಿನಲ್ಲಿ ಈ ಅವಕಾಶವನ್ನು ಬಾಚಿಕೊಂಡಿತು. ಈಗ ನಾಗ್ಪುರದಲ್ಲೂ ಗೆದ್ದು ಸರಣಿ ಸೋಲಿನ ಅಂತರವನ್ನು ತಗ್ಗಿಸುವುದು ಕಾಂಗರೂ ಯೋಜನೆ. ಬೆಂಗಳೂರಿನಲ್ಲಿ ಆಸ್ಟ್ರೇಲಿಯದ ಆಲ್‌ರೌಂಡ್ ಪ್ರದರ್ಶನ ಎದ್ದು ಕಂಡಿದೆ. ಬ್ಯಾಟಿಂಗಿನಲ್ಲಿ ವಾರ್ನರ್, ಫಿಂಚ್; ಡೆತ್ ಓವರ್‌ಗಳಲ್ಲಿ ಕಮಿನ್ಸ್, ಕೋಲ್ಟರ್ ನೈಲ್, ರಿಚರ್ಡ್‌ಸನ್ ಅವರ ಪೇಸ್ ದಾಳಿ ಕ್ಲಿಕ್ ಆಗಿತ್ತು. ಆದರೆ ವಾರ್ನರ್ ಮತ್ತು ಫಿಂಚ್ ಅವರನ್ನು ಬೇಗನೇ ಪೆವಿಲಿಯನ್ನಿಗೆ ಅಟ್ಟಿದರೆ ಆಗ ಕಾಂಗರೂ ಕತೆ ಗಂಡಾಂತರವಾಗುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಭಾರತ “ಅರ್ಲಿ ಬ್ರೇಕ್’ ಸಾಧಿಸಿದರೆ ನಾಗ್ಪುರದಲ್ಲಿ ಗೆಲುವಿನ ಬಾವುಟ ಹಾರಿಸಬಹುದು. ನಾಗ್ಪುರ: ಟರ್ನಿಂಗ್ ಟ್ರ್ಯಾಕ್?
ನೂತನವಾಗಿ ನಿರ್ಮಿಸಲಾದ ನಾಗ್ಪುರ ಪಿಚ್ ಕೊನೆಯ ಹಂತದಲ್ಲಿ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದ್ದರೂ ಇದು ಎಂದಿನಂತೆ ದೊಡ್ಡ ಮೊತ್ತದ ಹೋರಾಟವಾದೀತು ಎಂಬುದಾಗಿ ಕ್ಯುರೇಟರ್ ಪ್ರವೀಣ್ ಹಿಂಗ್ನಿಕರ್ ಹೇಳಿದ್ದಾರೆ. 2015ರ ದಕ್ಷಿಣ ಆಫ್ರಿಕಾ ಪಂದ್ಯದ ವೇಳೆ ನಾಗ್ಪುರ ಪಿಚ್ ತೀವ್ರ ಟೀಕೆಗೆ ಗುರಿಯಾಗಿತ್ತು. ಅಂದು ಐಸಿಸಿ ಇದನ್ನು “ತೀರಾ ಕೆಳ ದರ್ಜೆಯ ಪಿಚ್’ ಸಾಲಿಗೆ ಸೇರಿಸಿತ್ತು. “ಅದೇನಿದ್ದರೂ ಮುಗಿದ ಕತೆ. ನಾವೀಗ ಪುನರ್ ವೈಭವವನ್ನು ಕಾಣಬೇಕಿದೆ. ನಾವೀಗ ಈ ಪಿಚ್‌ನ ಮಣ್ಣನ್ನು ಸಂಪೂರ್ಣವಾಗಿ ಬದಲಿಸಿದ್ದು, ವಿದರ್ಭದ ಮಣ್ಣಿನಿಂದಲೇ ನೂತನ ಪಿಚ್ ನಿರ್ಮಿಸಲಾಗಿದೆ. ರವಿವಾರ ಉತ್ತಮ ಹೋರಾಟ ನಿರೀಕ್ಷಿಸಬಹುದು’ ಎಂಬುದು ಹಿಂಗ್ನಿಕರ್ ಅಭಿಪ್ರಾಯ.