Advertisement

India vs Australia: ಎಂಟೇ ತಿಂಗಳಲ್ಲಿ 3 ಐಸಿಸಿ ಫೈನಲ್ಸ್‌

11:25 PM Feb 10, 2024 | Team Udayavani |

ಬಹುಶಃ ಇದನ್ನು ಕ್ರಿಕೆಟಿನ ಸ್ವಾರಸ್ಯ ಎನ್ನಿ ಅಥವಾ ಕಾಕತಾಳೀಯ ಎನ್ನಿ. ಕೇವಲ 8 ತಿಂಗಳ ಅವಧಿಯಲ್ಲಿ ಭಾರತ, ಆಸ್ಟ್ರೇಲಿಯ ಕ್ರಿಕೆಟ್‌ ತಂಡಗಳು ಸತತ 3ನೇ ಐಸಿಸಿ ಪಂದ್ಯಾವಳಿಯ ಫೈನಲ್‌ನಲ್ಲಿ ಮುಖಾಮುಖೀ ಆಗುತ್ತಿವೆ! ಗುರುವಾರದ ಅಂಡರ್‌-19 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯ ಕೇವಲ ಒಂದು ವಿಕೆಟ್‌ ಅಂತರದಿಂದ ಪಾಕಿಸ್ಥಾನವನ್ನು ಸೋಲಿಸುವ ಮೂಲಕ ಪ್ರಶಸ್ತಿ ಸುತ್ತಿಗೆ ನೆಗೆಯಿತು. ಇದಕ್ಕೂ ಮುನ್ನ ಭಾರತ ತಂಡ 2 ವಿಕೆಟ್‌ಗಳಿಂದ ಆತಿಥೇಯ ದಕ್ಷಿಣ ಆಫ್ರಿಕಾವನ್ನು ಮಣಿಸಿತ್ತು. ರವಿವಾರ ಪ್ರಶಸ್ತಿ ಸಮರ ಏರ್ಪಡಲಿದೆ.

Advertisement

ಟೆಸ್ಟ್‌ನಲ್ಲಿ ವಿಫ‌ಲ
ಭಾರತ-ಆಸ್ಟ್ರೇಲಿಯ ತಂಡಗಳ ಫೈನಲ್‌ ಹಣಾ ಹಣಿಗೆ ಮುಹೂರ್ತವಿರಿಸಿದ್ದು 2021-2023ನೇ ಅವಧಿಯ 2ನೇ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌. ಈ ಪಂದ್ಯವನ್ನು ಲಂಡನ್‌ನ ಕೆನ್ನಿಂಗ್ಟನ್‌ ಓವಲ್‌ನಲ್ಲಿ ಆಡಲಾಗಿತ್ತು. ಬಳಿಕ 2023ನೇ ಏಕದಿನ ವಿಶ್ವಕಪ್‌ ಕೂಟದ ಫೈನಲ್‌ನಲ್ಲೂ ಭಾರತ-ಆಸ್ಟ್ರೇಲಿಯ ಪರ ಸ್ಪರ ಎದುರಾದವು. ದುರಂತವೆಂದರೆ, ಈ ಎರಡೂ ಫೈನಲ್‌ಗ‌ಳಲ್ಲಿ ಭಾರತ ಪರಾಭವಗೊಂಡಿತು.
ಓವಲ್‌ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ನಿಂತು ಆಡಿದ್ದರೆ ಪಂದ್ಯವನ್ನು ಡ್ರಾ ಮಾಡಿಕೊಳ್ಳ ಬಹುದಾದ ಉತ್ತಮ ಅವಕಾಶ ಟೀಮ್‌ ಇಂಡಿಯಾದ ಮುಂದಿತ್ತು. 444 ರನ್‌ ಗುರಿ ಪಡೆದಿದ್ದ ಭಾರತವಿಲ್ಲಿ ಬ್ಯಾಟಿಂಗ್‌ ಅವಸರಕ್ಕೆ ಮುಂದಾಗಿ 234ಕ್ಕೆ ಕುಸಿದು 209 ರನ್ನುಗಳ ದೊಡ್ಡ ಸೋಲನ್ನು ಹೊತ್ತುಕೊಂಡಿತು. ಇದರಿಂದ ಸತತ 2ನೇ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲೂ ಎಡವಿತು.

ವಿಶ್ವಕಪ್‌ ಆಘಾತ
ಅಹ್ಮದಾಬಾದ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ ಸೋಲಂತೂ ಅತ್ಯಂತ ಆಘಾತಕಾರಿ. ಅಜೇಯವಾಗಿ ಫೈನಲ್‌ಗೆ ಸಾಗಿಬಂದಿದ್ದ ಭಾರತ, ಫೈನಲ್‌ ಆಡುವ ಮೊದಲೇ ಚಾಂಪಿಯನ್‌ ಎಂಬ ಮನಸ್ಥಿತಿಯಲ್ಲಿತ್ತು. ಅಭಿಮಾನಿಗಳೂ ಇದನ್ನು ಗಟ್ಟಿಯಾಗಿ ನಂಬಿದ್ದರು. ಆದರೆ ಫೈನಲ್‌ನಲ್ಲಿ ಸಂಭವಿಸಿದ್ದೇ ಬೇರೆ. ಭಾರತೀಯರಿಗೆ ಈ ಆಘಾತವನ್ನು ಅರಗಿಸಿಕೊಳ್ಳಲು ಇಂದಿಗೂ ಸಾಧ್ಯವಾಗುತ್ತಿಲ್ಲ.

ಕಿರಿಯರಿಗೆ ಸವಾಲು
ಇದೀಗ ಅಂಡರ್‌-19 ವಿಶ್ವಕಪ್‌ ಸರದಿ. ಹಿರಿಯರ ಕೈಲಾಗದ ಸಾಹಸವನ್ನು ಭಾರತದ ಕಿರಿಯರು ತೋರ್ಪಡಿಸಿ ಸೇಡು ತೀರಿಸಿಯಾರೇ ಎಂಬುದು ರವಿವಾರದ ಕುತೂಹಲ.ಇಲ್ಲೊಂದು ಖುಷಿಪಡುವ ಸುದ್ದಿಯಿದೆ. ಈವರೆಗೆ ಭಾರತ-ಆಸ್ಟ್ರೇಲಿಯ 2 ಸಲ ಅಂಡರ್‌-19 ವಿಶ್ವಕಪ್‌ ಫೈನಲ್‌ನಲ್ಲಿ ಮುಖಾಮುಖೀ ಆಗಿವೆ. ಎರಡನ್ನೂ ಭಾರತ ಗೆದ್ದಿದೆ.

2012ರಲ್ಲಿ ಉನ್ಮುಕ್ತ್ ಚಂದ್‌ ಸಾರಥ್ಯದ ಭಾರತ 6 ವಿಕೆಟ್‌ಗಳಿಂದ ಆಸ್ಟ್ರೇಲಿಯವನ್ನು ತವರಲ್ಲೇ ನೆಲಕ್ಕೆ ಕೆಡವಿತ್ತು. ಟೌನ್ಸ್‌ವಿಲ್ಲೆಯಲ್ಲಿ ನಡೆದ ಈ ಫೈನಲ್‌ನಲ್ಲಿ ಚಂದ್‌ ಅಜೇಯ 111 ರನ್‌ ಬಾರಿಸಿ ಭಾರತದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Advertisement

ಎರಡನೇ ಸಲ ಫೈನಲ್‌ನಲ್ಲಿ ಎದುರಾದದ್ದು 2018ರಲ್ಲಿ. ಮೌಂಟ್‌ ಮೌಂಗನಿಯಲ್ಲಿ ನಡೆದ ಈ ಮುಖಾಮುಖೀಯಲ್ಲಿ ಪೃಥ್ವಿ ಶಾ ನೇತೃತ್ವದ ಭಾರತ 8 ವಿಕೆಟ್‌ಗಳಿಂದ ಆಸ್ಟ್ರೇಲಿಯವನ್ನು ಮಗುಚಿತ್ತು. ಚೇಸಿಂಗ್‌ ವೇಳೆ ಆರಂಭಕಾರ ಮನ್‌ಜೋತ್‌ ಕಾಲಾÅ ಅಜೇಯ 101 ರನ್‌ ಬಾರಿಸಿದ್ದರು. ಇದೀಗ ಭಾರತ-ಆಸ್ಟ್ರೇಲಿಯ ನಡುವಿನ 3ನೇ ಫೈನಲ್‌ಗೆ ವೇದಿಕೆ ಸಜ್ಜುಗೊಂಡಿದೆ. ಉದಯ್‌ ಸಹಾರಣ್‌ ಪಡೆಗೆ ಶುಭ ಹಾರೈಸೋಣ.

 ಎಚ್‌. ಪ್ರೇಮಾನಂದ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next