ವಿಶ್ವಸಂಸ್ಥೆ: ಇಸ್ರೇಲ್- ಹಮಾಸ್ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಮಾನವೀಯ ನೆಲೆಯಲ್ಲಿ ತಕ್ಷಣವೇ ಕದನ ವಿರಾಮ ಘೋಷಿಸಬೇಕು ಹಾಗೂ ಬೇಷರತ್ತಾಗಿ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕೆಂಬ ವಿಶ್ವಸಂಸ್ಥೆಯ ನಿರ್ಣಯದ ಪರ ಭಾರತ ಮತಚಲಾಯಿಸಿದೆ.
ಇದನ್ನೂ ಓದಿ:Rinku Singh: ರಿಂಕು ಸಿಂಗ್ ಸ್ಫೋಟಕ ಸಿಕ್ಸರ್ ಗೆ ಮಿಡಿಯಾ ಬಾಕ್ಸ್ ಗ್ಲಾಸ್ ಪೀಸ್ ಪೀಸ್!
ವಿಶ್ವಸಂಸ್ಥೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಲ್ಜೀರಿಯಾ, ಬಹ್ರೈನ್, ಇರಾಕ್, ಕುವೈಟ್, ಓಮಾನ್, ಕತಾರ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಪ್ಯಾಲೆಸ್ತೇನ್ ಸೇರಿದಂತೆ ಹಲವು ದೇಶಗಳು ಇಸ್ರೇಲ್-ಹಮಾಸ್ ನಡುವೆ ತಕ್ಷಣವೇ ಕದನವಿರಾಮ ಘೋಷಿಸಬೇಕೆಂದು ಒತ್ತಾಯಿಸಿ ನಿರ್ಣಯ ಕೈಗೊಂಡಿದ್ದವು.
ಕದನ ವಿರಾಮ ಘೋಷಣೆಯ ನಿರ್ಣಯಕ್ಕೆ ಅಮೆರಿಕ, ಇಸ್ರೇಲ್ ಸೇರಿದಂತೆ ಹತ್ತು ದೇಶಗಳು ವಿರೋಧಿಸಿ ಮತ ಚಲಾಯಿಸಿವೆ. ಸುಮಾರು 23 ದೇಶಗಳು ಸಭೆಗೆ ಗೈರುಹಾಜರಾಗಿದ್ದವು ಎಂದು ವರದಿ ತಿಳಿಸಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಭಾವಶಾಲಿ ಸಂದೇಶವನ್ನು ರವಾನಿಸಿರುವ ಐತಿಹಾಸಿಕ ದಿನವಾಗಿದೆ ಎಂದು ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ತೇನಿನ ರಾಯಭಾರಿ ರಿಯಾದ್ ಮನ್ಸೌರ್ ತಿಳಿಸಿರುವುದಾಗಿ ಎಎಫ್ ಪಿ ವರದಿ ಮಾಡಿದೆ.
2023ರ ಅಕ್ಟೋಬರ್ 7ರಂದು ಹಮಾಸ್ ಭಯೋತ್ಪಾದಕರು ಇಸ್ರೇಲ್ ಮೇಲೆ ದಾಳಿ ನಡೆಸಿ ನಾಗರಿಕರನ್ನು ಹತ್ಯೆಗೈದಿರುವುದು ಪೈಶಾಚಿಕ ಕೃತ್ಯವಾಗಿದೆ ಎಂದು ಅಮೆರಿಕ ತಿಳಿಸಿದ್ದು, ವಿಶ್ವಸಂಸ್ಥೆಯ ಕದನ ವಿರಾಮ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸುವುದಾಗಿ ಹೇಳಿದೆ.