Advertisement

ಭಾರತ ಭಾಗ್ಯ ವಿಧಾತ ದೃಶ್ಯ ವೈಭವ

01:07 PM Feb 13, 2017 | Team Udayavani |

ದಾವಣಗೆರೆ: ಡಾ| ಬಾಬಾ ಸಾಹೇಬ್‌ ಅಂಬೇಡ್ಕರ್‌ರವರ 125ನೇ ಜಯಂತಿ ನಿಮಿತ್ತ ಭಾನುವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಭಾರತ ಭಾಗ್ಯ ವಿಧಾತ… ಧ್ವನಿ-ಬೆಳಕು: ದೃಶ್ಯ ವೈಭವಗಳ ರೂಪಕವು ಭಾರತರತ್ನ, ಸಂವಿಧಾನಶಿಲ್ಪಿ, ಸಮಾನತೆಯ ಹರಿಕಾರ ಅಂಬೇಡ್ಕರ್‌ರವರ ಜೀವನಗಾಥೆ ಪರಿಚಯಿಸಿಕೊಡುವಲ್ಲಿ ಯಶಸ್ವಿಯಾಯಿತು. 

Advertisement

ದೇಶದ ಮಹಾನ್‌ ಗ್ರಂಥ ಸಂವಿಧಾನ ರಚಿಸಿರುವ ಅಂಬೇಡ್ಕರ್‌ರವರೇ ಸ್ವತಃ ಜಾತಿ ಎಂಬ ಪೆಡಂಭೂತದ ದಳ್ಳುರಿಯೊಂದಿಗೆ ಕಲ್ಲುಮುಳ್ಳುಗಳ ಹಾದಿಯಲ್ಲಿ ಸಾಗಿ ಬಂದಿದ್ದನ್ನು ರೂಪಕ ಅತ್ಯುತ್ತಮವಾಗಿ ತೆರೆದಿಟ್ಟಿತು. ಬಾಲ್ಯದಲ್ಲಿ ಅಂಬೇಡ್ಕರ್‌ರವರ ತುಂಟಾಟ, ಚಿಕ್ಕ ವಯಸ್ಸಿನಲ್ಲಿ ಯಾವುದನ್ನೇ ಆಗಲಿ ಅದರ ಸತ್ಯಪರೀಕ್ಷೆ ಮಾಡಬೇಕು ಎಂಬ ಮನೋಭಾವ, ಶಾಲೆಯಲ್ಲಿ ಅಸ್ಪಶ್ಯ ಎಂಬ ಕಾರಣಕ್ಕೆ ದೂರವೇ ಕುಳಿತು ವಿದ್ಯಾರ್ಜನೆ ಮಾಡಿದ್ದು,

ಟಾಂಗಾ ಗಾಡಿಯಿಂದ ಕೆಳಕ್ಕೆ ತಳ್ಳಲ್ಪಟ್ಟಿದ್ದು, ಭೀಮರಾವ್‌ ಸತ್ಪಾಲ್‌ ತನ್ನ ನೆಚ್ಚಿನ, ಜೀವನಕ್ಕೆ ಮಹತ್ತರ ತಿರುವು ನೀಡಿದ ಶಿಕ್ಷಕ ಮಹಾದೇವ ಅಂಬೇಡ್ಕರ್‌ ಮೂಲಕ ಭೀಮರಾವ್‌ ರಾಮ್‌ಜೀ ಅಂಬೇಡ್ಕರ್‌ ಆಗಿದ್ದು ಘಟನೆಗಳನ್ನು ಅತ್ಯಂತ ಮನಮೋಹಕವಾಗಿ ನೃತ್ಯ ರೂಪಕದಲ್ಲಿ ಕಟ್ಟಿ ಕೊಡಲಾಯಿತು. 

ಬರೋಡಾದ ಮಹಾರಾಜ ಸಯ್ನಾಜಿರಾವ್‌ ಗಾಯಕ್ವಾಡ್‌ರ  ನೆರವಿನಿಂದ ಉನ್ನತ ಮಟ್ಟದ ವಿದ್ಯಾಭ್ಯಾಸ ಪೂರೈಸಿ ಲೆμrನೆಂಟ್‌ ಆದ ನಂತರವೂ ಜಾತಿಯ ಕಾರಣಕ್ಕೆ ತನ್ನ ಕಚೇರಿಯ ಜವಾನನಿಂದಲೇ ಅನುಭವಿಸಿದ ಅಪಮಾನ, ಬ್ಯಾರಿಸ್ಟರ್‌ ಹುದ್ದೆಯಲ್ಲಿದ್ದರೂ ಬೆಂಬಿಡದೆ ಕಾಡಿದ ಜಾತಿಯ ಸಂಕೋಲೆಯಲ್ಲಿ ಸಿಕ್ಕಿ ನರಳಿದ್ದನ್ನು ಉತ್ತಮ ಹಿನ್ನೆಲೆ ಗಾಯನ, ಅದಕ್ಕೆ ತಕ್ಕ ಅಭಿನಯದ ಮುಖೇನ ಎಳೆ ಎಳೆಯಾಗಿ ಬಿಡಿಸಿಟ್ಟರು. 

ಸೋಲು ಒಪ್ಪದವನಿಗೆ ಸೋಲೇ ಇಲ್ಲ… ಎನ್ನುವ ಮಾತಿನ ಅನ್ವರ್ಥದಂತೆ ಎಂಥದ್ದೇ ಪರಿಸ್ಥಿತಿಯಲ್ಲಿ ಸೋಲನ್ನೂ ಒಪ್ಪದೆ,  ಸೋಲನ್ನೇ ಗೆಲುವಿನ ಸೋಪಾನವನ್ನಾಗಿ ಮಾಡಿಕೊಂಡ ಅಂಬೇಡ್ಕರ್‌ ದೇಶದ ಸ್ವಾತಂತ್ರ ಸಂಗ್ರಾಮದ ಕಾಲಘಟ್ಟದಲ್ಲೇ ತುಳಿತಕ್ಕೆ ಒಳಗಾದವರಿಗೆ ಸಮಾನತೆ, ಮತದಾನದ ಹಕ್ಕಿಗಾಗಿ ಪ್ರತಿಪಾದಿಸಿದ್ದು, ಮಹಾತ್ಮಗಾಂಧೀಜಿ ಹೇಳಿದರೂ ತಮ್ಮ ಪಟ್ಟು ಬಿಡದೇ ಗಾಂಧೀಜಿಯವರು ಕೈಗೊಂಡ ಉಪವಾಸ ಸತ್ಯಾಗ್ರಹಕ್ಕೆ ಮಣಿದು, ಪಟ್ಟು ಸಡಿಲಿಸಿದ್ದು, ಆ ಮೂಲಕ ಗಾಂಧೀಜಿಯವರ ಮನ ಪರಿವರ್ತನೆಗೆ ಕಾರಣವಾಗಿದ್ದಂತಹ ಘಟನೆಗಳು ಅತ್ಯುತ್ತಮವಾಗಿ ಮೂಡಿ ಬಂದಿವು.

Advertisement

ಮೇಯರ್‌ ರೇಖಾ ನಾಗರಾಜ್‌, ಸದಸ್ಯ ಆವರಗೆರೆ ಎಚ್‌.ಜಿ. ಉಮೇಶ್‌, ರೇಷ್ಮೆ ಅಭಿವೃದ್ಧಿ ಮಂಡಲಿ ಮಾಜಿ ಅಧ್ಯಕ್ಷ ಡಿ. ಬಸವರಾಜ್‌, ಉಪ ವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕುಮಾರ್‌ ಹನುಮಂತಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಿ. ಅಶೋಕ್‌ಕುಮಾರ್‌, ಭಾಗ್ಯ ಇತರರು ಇದ್ದರು. ಸಿದ್ದಗಂಗಾ ಶಾಲಾ ವಿದ್ಯಾರ್ಥಿಗಳು  ಪ್ರಾರ್ಥಿಸಿದರು. ಅಂಜಿನಪ್ಪ ಲೋಕಿಕೆರೆ ನಿರೂಪಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next