Advertisement

ಬೆಂಗಳೂರು ಟೆಸ್ಟ್‌: ಅಫ್ಘಾನ್‌ ಮೇಲೆ ಧವನ್‌, ವಿಜಯ್‌ ಸವಾರಿ

06:00 AM Jun 15, 2018 | Team Udayavani |

ಬೆಂಗಳೂರು: ತನ್ನ ಕ್ರಿಕೆಟ್‌ ಇತಿಹಾಸದ ಮೊದಲ ಟೆಸ್ಟ್‌ ಆಡಲಿಳಿದ ಅಫ್ಘಾನಿಸ್ಥಾನದ ಮೇಲೆ ಭಾರತದ ಆರಂಭಿಕರಾದ ಶಿಖರ್‌ ಧವನ್‌-ಮುರಳಿ ವಿಜಯ್‌ ಸವಾರಿ ಮಾಡಿದ್ದಾರೆ. ಇವರಿಬ್ಬರ ಆಕರ್ಷಕ ಶತಕದಿಂದ ಭಾರತ ಭರ್ಜರಿ ಆರಂಭ ಕಂಡುಕೊಂಡಿತು. ಆದರೆ ಕೊನೆಯಲ್ಲಿ ಪ್ರವಾಸಿ ಬೌಲರ್‌ಗಳು ಮೇಲುಗೈ ಸಾಧಿಸಿದ್ದು, ರಹಾನೆ ಬಳಗಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಬೆಂಗಳೂರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಭಾರತಕ್ಕೆ ಧವನ್‌-ವಿಜಯ್‌ ಪ್ರಚಂಡ ಆರಂಭ ಒದಗಿಸಿದರು. ಮೊದಲ ಅವಧಿಯ ಆಟದಲ್ಲೇ ಭಾರತ ವಿಕೆಟ್‌ ನಷ್ಟವಿಲ್ಲದೆ 158 ರನ್‌ ಪೇರಿಸಿತ್ತು. ಅಷ್ಟರಲ್ಲಿ ಶಿಖರ್‌ ಧವನ್‌ ಶತಕ ಬಾರಿಸಿ ಇತಿಹಾಸ ನಿರ್ಮಿಸಿದ್ದರು. 

ಧವನ್‌-ವಿಜಯ್‌ ಮೊದಲ ವಿಕೆಟಿಗೆ 28.4 ಓವರ್‌ಗಳಿಂದ 168 ರನ್‌ ಪೇರಿಸಿದರು. ಇದರಲ್ಲಿ ಧವನ್‌ ಪಾಲು 107 ರನ್‌. ಕೇವಲ 96 ಎಸೆತ ಎದುರಿಸಿದ ಧವನ್‌ 19 ಬೌಂಡರಿ, 3 ಸಿಕ್ಸರ್‌ ಸಿಡಿಸಿ ರಂಜಿಸಿದರು. ಇದು ಅವರ 7ನೇ ಶತಕ. ಮುರಳಿ ವಿಜಯ್‌ 153 ಎಸೆತಗಳಿಂದ 105 ರನ್‌ ಹೊಡೆದು (15 ಬೌಂಡರಿ, 1 ಸಿಕ್ಸರ್‌) 12ನೇ ಶತಕ ಸಂಭ್ರಮ ಆಚರಿಸಿದರು. ವನ್‌ಡೌನ್‌ನಲ್ಲಿ ಬಂದ ಸ್ಥಳೀಯ ಹೀರೋ ಕೆ.ಎಲ್‌. ರಾಹುಲ್‌ 54 ರನ್‌ ಬಾರಿಸಿ ಮಿಂಚಿದರು (64 ಎಸೆತ, 8 ಬೌಂಡರಿ). ವಿಜಯ್‌-ರಾಹುಲ್‌ ಜೋಡಿಯಿಂದ ದ್ವಿತೀಯ ವಿಕೆಟಿಗೆ 112 ರನ್‌ ಒಟ್ಟುಗೂಡಿತು.

ಮಳೆ ಬಳಿಕ ಅಫ್ಘಾನ್‌ ಆಟ
ಟೀ ವಿರಾಮಕ್ಕೂ ಮೊದಲು ಮಳೆ ಬಂದು ಆಟ ನಿಲ್ಲುವಾಗ ಭಾರತ ಒಂದಕ್ಕೆ 248 ರನ್‌ ಪೇರಿಸಿ ಬೃಹತ್‌ ಮೊತ್ತದ ಸೂಚನೆ ನೀಡಿತ್ತು. ಆದರೆ ಮಳೆ ನಿಂತ ಬಳಿಕ ಅಫ್ಘಾನ್‌ ಕೈ ಮೇಲಾಯಿತು. ಕೊನೆಯ ಅವಧಿಯಲ್ಲಿ 5 ವಿಕೆಟ್‌ ಉಡಾಯಿಸಿ ದರು. ಪೂಜಾರ 35 ರನ್‌ ಮಾಡಿದರೆ, ನಾಯಕ ರಹಾನೆ ಗಳಿಕೆ ಹತ್ತೇ ರನ್‌. 8 ವರ್ಷಗಳ ಬಳಿಕ ಟೆಸ್ಟ್‌ ಆಡಲಿಳಿದ ಕಾರ್ತಿಕ್‌ 4 ರನ್‌ ಮಾಡಿ ರನೌಟಾದರು. ರಹಾನೆ ವಿಕೆಟ್‌ ಕಿತ್ತು ಟೆಸ್ಟ್‌ ಖಾತೆ ತೆರದ  ರಶೀದ್‌ ಖಾನ್‌ ದುಬಾರಿಯಾಗಿ ಗೋಚರಿಸಿದರು. 

ಲಂಚ್‌ಗೂ ಮೊದಲು ಶತಕ 
ಅಫ್ಘಾನಿಸ್ಥಾನ ವಿರುದ್ಧದ ಮೊದಲ ದಿನದಾಟದ ಆಕರ್ಷಣೆಯೆಂದರೆ ಭಾರತೀಯ ಆರಂಭಿಕರ ಶತಕ. ಇವರಲ್ಲಿ ಶಿಖರ್‌ ಧವನ್‌ ಅಮೋಘ ದಾಖಲೆ ಮೂಲಕ ಗಮನ ಸೆಳೆದರು. ಟೆಸ್ಟ್‌ ಪಂದ್ಯದ ಮೊದಲ ದಿನದಾಟದ ಭೋಜನ ವಿರಾಮಕ್ಕೂ ಮೊದಲು ಶತಕ ಬಾರಿಸಿದ ಭಾರತದ ಪ್ರಥಮ ಹಾಗೂ ವಿಶ್ವದ 6ನೇ ಬ್ಯಾಟ್ಸ್‌ಮನ್‌ ಎಂಬ ದಾಖಲೆಗೆ ಪಾತ್ರರಾದರು. ಲಂಚ್‌ ವೇಳೆ ಅವರು 104 ರನ್‌ ಹೊಡೆದು ಅಜೇಯರಾಗಿದ್ದರು.

Advertisement

ಈ ಯಾದಿಯಲ್ಲಿ ಕಾಣಿಸಿಕೊಂಡಿರುವ ಮೊದಲ ಐವರೆಂದರೆ ವಿಕ್ಟರ್‌ ಟ್ರಂಪರ್‌, ಚಾಲ್‌  ಮೆಕಾರ್ಟಿನಿ, ಡಾನ್‌ ಬ್ರಾಡ್‌ಮನ್‌, ಮಜೀದ್‌ ಖಾನ್‌ ಮತ್ತು ಡೇವಿಡ್‌ ವಾರ್ನರ್‌. ಭಾರತದ ಪರ ಲಂಚ್‌ಗೂ ಮೊದಲು ಅತ್ಯಧಿಕ ರನ್‌ ಗಳಿಸಿದ ದಾಖಲೆ ವೀರೇಂದ್ರ ಸೆಹವಾಗ್‌ ಹೆಸರಲ್ಲಿತ್ತು. ವೆಸ್ಟ್‌ ಇಂಡೀಸ್‌ ಎದುರಿನ 2006ರ ಗ್ರಾಸ್‌ ಐಲೆಟ್‌ ಟೆಸ್ಟ್‌ ಪಂದ್ಯದಲ್ಲಿ ಸೆಹವಾಗ್‌ ಅಜೇಯ 99 ರನ್‌ ಮಾಡಿದ್ದರು.

ಸ್ಕೋರ್‌ ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌

ಮುರಳಿ ವಿಜಯ್‌    ಎಲ್‌ಬಿಡಬ್ಲ್ಯು ವಫಾದಾರ್‌    105
ಶಿಖರ್‌ ಧವನ್‌    ಸಿ ನಬಿ ಬಿ ಅಹ್ಮದ್‌ಜಾಯ್‌    107
ಕೆ.ಎಲ್‌. ರಾಹುಲ್‌    ಬಿ ಅಹ್ಮದ್‌ಜಾಯ್‌    54
ಚೇತೇಶ್ವರ್‌ ಪೂಜಾರ    ಸಿ ನಬಿ ಬಿ ಮುಜೀಬ್‌    35
ಅಜಿಂಕ್ಯ ರಹಾನೆ    ಎಲ್‌ಬಿಡಬ್ಲ್ಯು ರಶೀದ್‌    10
ದಿನೇಶ್‌ ಕಾರ್ತಿಕ್‌    ರನೌಟ್‌    4
ಹಾರ್ದಿಕ್‌ ಪಾಂಡ್ಯ    ಬ್ಯಾಟಿಂಗ್‌    10
ಆರ್‌. ಅಶ್ವಿ‌ನ್‌    ಬ್ಯಾಟಿಂಗ್‌    7

ಇತರ        15
ಒಟ್ಟು  (6 ವಿಕೆಟಿಗೆ)        347
ವಿಕೆಟ್‌ ಪತನ: 1-168, 2-280, 3-284, 4-318, 5-328, 6-334.

ಬೌಲಿಂಗ್‌:
ಯಾಮಿನ್‌ ಅಹ್ಮದ್‌ಜಾಯ್‌    13-6-32-2
ವಫಾದಾರ್‌        15-4-53-1
ಮೊಹಮ್ಮದ್‌ ನಬಿ        8-0-45-0
ರಶೀದ್‌ ಖಾನ್‌        26-2-120-1
ಮುಜೀಬ್‌ ಉರ್‌ ರೆಹಮಾನ್‌    14-1-69-1
ಅಸ್ಗರ್‌ ಸ್ತಾನಿಕ್‌ಜಾಯ್‌    2-0-16-0

Advertisement

Udayavani is now on Telegram. Click here to join our channel and stay updated with the latest news.

Next