ಅಹಮದಾಬಾದ್: ಇಸ್ಲಾಮಿಕ್ ಉಗ್ರವಾದದ ವಿರುದ್ಧ ಉಭಯ ದೇಶಗಳು ಹೋರಾಟ ಮುಂದುವರಿಯಲಿದೆ. ಐಸಿಸ್ ಎಂಬ ಉಗ್ರ ಸಂಘಟನೆಯನ್ನು ಅಮೆರಿಕ ಮಟ್ಟ ಹಾಕಿದೆ. ಪಾಕಿಸ್ತಾನದಲ್ಲಿರುವ ಉಗ್ರರನ್ನು ಮಟ್ಟ ಹಾಕುವಂತೆ ಅಮೆರಿಕ ಒತ್ತಡ ಹೇರಿದೆ. ಭಾರತ ಮತ್ತು ಅಮೆರಿಕವನ್ನು ಕೆಣಕಿದವರಿಗೆ ತಕ್ಕ ಶಾಸ್ತಿಯಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು.
ಸೋಮವಾರ ಎರಡು ದಿನಗಳ ಭಾರತ ಪ್ರವಾಸದ ಹಿನ್ನೆಲೆಯಲ್ಲಿ ಗುಜರಾತ್ ನ ಅಹಮದಾಬಾದ್ ಗೆ ಆಗಮಿಸಿದ್ದ ಡೊನಾಲ್ಡ್ ಟ್ರಂಪ್ ವಿಶ್ವದ ಅತೀ ದೊಡ್ಡ ಕ್ರೀಡಾ ಮೈದಾನ ಮೊಟೆರಾದಲ್ಲಿ ಆಯೋಜಿಸಿದ್ದ ನಮಸ್ತೆ ಟ್ರಂಪ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಪ್ರತಿಯೊಂದು ದೇಶಕ್ಕೂ ತಮ್ಮ ಗಡಿಯನ್ನು ರಕ್ಷಿಸುವ ಹಕ್ಕು ಇರುತ್ತದೆ. ಭಾರತ ಮತ್ತು ಅಮೆರಿಕ ಭಯೋತ್ಪಾದನೆಯಿಂದ ತೊಂದರೆಗೆ ಒಳಗಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಮುಂದಿನ ದಿನಗಳಲ್ಲಿ ನಮ್ಮ ಪ್ರಮುಖ ರಕ್ಷಣಾ ಪಾಲುದಾರ ದೇಶವಾಗಬೇಕು ಎಂಬುದು ನಮ್ಮ ಇಚ್ಚೆ ಎಂದು ಹೇಳಿದರು.
3 ಬಿಲಿಯನ್ ಅಮೆರಿಕನ್ ಡಾಲರ್ ರಕ್ಷಣಾ ಒಪ್ಪಂದ:
ಭಾರತ ಮತ್ತು ಅಮೆರಿಕ ನಡುವಿನ ರಕ್ಷಣಾ ಸಹಕಾರ ಮುಂದುವರಿಯಲಿದೆ. ಭಾರತಕ್ಕೆ ನಾವು ಈ ಅತ್ಯಾಧುನಿಕ ಸೇನಾ ಶಸ್ತ್ರಾಸ್ತ್ರ ಮಾರಾಟ ಮಾಡಲು ಎದುರು ನೋಡುತ್ತಿದ್ದೇವೆ. ನಾವು ಈಗಾಗಲೇ ಹಲವು ಆಧುನಿಕ ಶಸ್ತ್ರಾಸ್ತ್ರ ತಯಾರಿಸಿದ್ದೇವೆ. ಈ ನಿಟ್ಟಿನಲ್ಲಿ ಭಾರತ ಮತ್ತು ಅಮೆರಿಕದ ನಡುವೆ ಬೃಹತ್ ಒಪ್ಪಂದ ನಡೆಯಲಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಭಾರತ ಮತ್ತು ಅಮೆರಿಕ ನಡುವೆ ಭಾರತ ಸೇನಾಪಡೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಮಾರಾಟ ಮಾಡುವ 3 ಬಿಲಿಯನ್ ಅಮೆರಿಕನ್ ಡಾಲರ್(ಸುಮಾರು 20ಸಾವಿರ ಕೋಟಿ ರೂಪಾಯಿ) ಒಪ್ಪಂದ ನಡೆಯಲಿದೆ ಎಂದು ಟ್ರಂಪ್ ಮೊಟೆರಾ ಮೈದಾನದಲ್ಲಿ ಘೋಷಿಸಿದ್ದಾರೆ.