Advertisement
ಪಾಕಿಸ್ಥಾನ ನೀಡಿದ್ದ 172 ರನ್ ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ್ದ ಭಾರತದ ಕಿರಿಯರು ಯಶಸ್ವೀ ಜೈಸ್ವಾಲ್ (ಅಜೇಯ 105) ಅವರ ಭರ್ಜರಿ ಶತಕ ಹಾಗೂ ಅವರ ಜೊತೆಗಾರ ದಿವ್ಯಾಂಶ್ ಸಕ್ಷೇನಾ (ಅಜೇಯ 59) ಅವರ ತಾಳ್ಮೆಯ ಅರ್ಧಶತಕದ ನೆರವಿನಿಂದ 35.2 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಗೆಲುವಿನ ಗುರಿಯನ್ನು ತಲುಪುವಂತೆ ಮಾಡಿದರು.
ಟಾಸ್ ಗೆದ್ದ ಪಾಕಿಸ್ಥಾನ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಭಾರತೀಯ ಯುವ ಬೌಲರ್ ಗಳ ಶಿಸ್ತಿನ ಬೌಲಿಂಗ್ ಮುಂದೆ ಪಾಕ್ ಯುವ ಬ್ಯಾಟ್ಸ್ ಮನ್ ಗಳ ಆಟ ನಡೆಯಲೇ ಇಲ್ಲ. ಆರಂಭಿಕ ಆಟಗಾರ ಹೈದರ್ ಆಲಿ (56) ಮತ್ತು ಕಪ್ತಾನ ರೊಹೈಲ್ ನಝೀರ್ (62) ಅವರಿಬ್ಬರದ್ದೇ ಪಾಕ್ ಪರ ಗರಿಷ್ಠ ಗಳಿಕೆ.
ಇವರಿಬ್ಬರನ್ನು ಹೊರತುಪಡಿಸಿದರೆ ಪಾಕ್ ಬ್ಯಾಟಿಂಗ್ ಸರದಿಯಲ್ಲಿ ಎರಡಂಕೆಯ ಮೊತ್ತ ದಾಟಿದ್ದು ಮಹಮ್ಮದ್ ಹ್ಯಾರಿಸ್ (21) ಮಾತ್ರ. ತಂಡದ ಮೊತ್ತ 100 ಆಗುವಷ್ಟರಲ್ಲಿ ಪಾಕಿಸ್ಥಾನದ ಯುವ ಪಡೆಯ 03 ವಿಕೆಟ್ ಗಳನ್ನು ಟೀಂ ಇಂಡಿಯಾ ಹುಡುಗರು ಬೀಳಿಸಿಯಾಗಿತ್ತು. ಅಂತಿಮವಾಗಿ ಪಾಕಿಸ್ಥಾನ ಭಾರತದ ಬೌಲಿಂಗ್ ದಾಳಿಯನ್ನು ಎದುರಿಸಲಾಗಿದೆ 43.1 ಓವರ್ ಗಳಲ್ಲಿ 172 ರನ್ ಗಳಿಗೆ ಆಲೌಟ್ ಆಯಿತು.
ಪಾಕಿಸ್ಥಾನ ನೀಡಿದ 172 ರನ್ ಗಳ ಸವಾಲನ್ನು ಬೆನ್ನಟ್ಟಿದ ಭಾರತಕ್ಕೆ ಆರಂಭಿಕ ಜೋಡಿ ಯಶಸ್ವೀ ಜೈಸ್ವಾಲ್ ಹಾಗೂ ದಿವ್ಯಾಂಶ್ ಸಕ್ಸೇನಾ ಭರ್ಜರಿ ಆಟದ ಪ್ರದರ್ಶನ ನೀಡಿ ಪಾಕಿಸ್ಥಾನ ಬೌಲರ್ ಗಳಿಗೆ ಯಾವುದೇ ಹಂತದಲ್ಲಿ ಮೇಲುಗೈ ಆಗದಂತೆ ನೋಡಿಕೊಂಡರು. ಅದರಲ್ಲೂ ಈ ವಿಶ್ವಕಪ್ ಕೂಟದಲ್ಲಿ ಭರ್ಜರಿ ಫಾರ್ಮ್ ಪ್ರದರ್ಶಿಸಿರುವ ಉತ್ತರ ಪ್ರದೇಶದ ಎಡಗೈ ಬ್ಯಾಟ್ಸ್ ಮನ್ ಜೈಸ್ವಾಲ್ ಬಿರುಸಿನ ಆಟದ ಮೂಲಕ ಪಾಕ್ ಬೌಲರ್ ಮತ್ತು ಫೀಲ್ಡರ್ ಗಳನ್ನು ಸತಾಯಿಸಿದರು. ಅವರ 105 ರನ್ ಕೇವಲ 115 ಎಸೆತಗಳಲ್ಲಿ ದಾಖಲುಗೊಂಡಿತು. ಇದರಲ್ಲಿ 08 ಬೌಂಡರಿ ಹಾಗೂ 04 ಸಿಕ್ಸರ್ ಸಹ ಸೇರಿದೆ.
ಇನ್ನು ಜೈಸ್ವಾಲ್ ಅವರಿಗೆ ಉತ್ತಮ ಬೆಂಬಲ ನೀಡಿದ ಇನ್ನೋರ್ವ ಎಡಗೈ ಆಟಗಾರ ದಿವ್ಯಾಂಶ್ ಸಕ್ಸೇನಾ ಎಚ್ಚರಿಕೆಯ ನಿಧಾನಗತಿ ಬ್ಯಾಟಂಗ್ ಮೂಲಕ ಪಾಕ್ ಬೌಲರ್ ಗಳಿಗೆ ವಿಕೆಟ್ ಕೀಳುವ ಅವಕಾಶವನ್ನೇ ನೀಡಲಿಲ್ಲ. 99 ಎಸೆತಗಳಲ್ಲಿ ಅಜೇಯ 59 ರನ್ ಬಾರಿಸಿದ ಸಕ್ಸೇನಾ ತನ್ನ ತಾಳ್ಮೆಯ ಆಟದ ಮೂಲಕ ಇಂದು ಗಮನ ಸೆಳೆದರು ತಮ್ಮ ಈ ಕಲಾತ್ಮಕ ಇನ್ನಿಂಗ್ಸ್ ನಲ್ಲಿ ಸಕ್ಸೇನಾ ಬಾರಿಸಿದ್ದು 06 ಬೌಂಡರಿಗಳು. ಇದು ಅಂಡರ್ 19 ವಿಶ್ವಕಪ್ ಸೆಮಿಫೈನಲ್ ಪಂದ್ಯಾಟದಲ್ಲಿ ಜೈಸ್ವಾಲ್ ಹಾಗೂ ಸಕ್ಸೇನಾ ಅವರದ್ದು ದಾಖಲೆಯ ಆರಂಭಿಕ ಜೊತೆಯಾಟವಾಗಿದೆ.
ಚಿತ್ರ ಕೃಪೆ: ಐಸಿಸಿ ಅಧಿಕೃತ ವೆಬ್ ಸೈಟ್
Related Articles
Advertisement