ಕಂಪಲ/ಕಿಗಾಲಿ: ರವಾಂಡಾ ಪ್ರವಾಸ ಮುಗಿಸಿ ಮಂಗಳವಾರ ಉಗಾಂಡಾಗೆ ತೆರಳಿರುವ ಪ್ರಧಾನಿ ಮೋದಿ ಅವರು ಅಲ್ಲಿನ ಅಧ್ಯಕ್ಷರಾದ ಯೊವೇರಿ ಮುಸೆವೇನಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಜತೆಗೆ, ಇಂಧನ ಮೂಲಸೌಕರ್ಯ, ಕೃಷಿ, ಡೈರಿ ವಲಯದ ಅಭಿವೃದ್ಧಿಗಾಗಿ ಉಗಾಂಡಾಗೆ 200 ದಶಲಕ್ಷ ಡಾಲರ್ ನೆರವನ್ನೂ ಮೋದಿ ಘೋಷಿಸಿದ್ದಾರೆ.
1997ರ ಬಳಿಕ ಉಗಾಂಡಾಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮೋದಿ, ದ್ವಿಪಕ್ಷೀಯ ಸಂಬಂಧಗಳಿಗೆ ಸಂಬಂಧಿಸಿ ದೀರ್ಘ ಚರ್ಚೆ ನಡೆಸಿದ್ದಾರೆ. ನಿಯೋಗ ಮಟ್ಟದ ಮಾತುಕತೆಯ ಬಳಿಕ ರಕ್ಷಣಾ ಸಹಕಾರ, ಅಧಿಕಾರಿಗಳು ಮತ್ತು ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿರುವವರಿಗೆ ವೀಸಾ ವಿನಾಯಿತಿ ಸಾಂಸ್ಕೃತಿಕ ವಿನಿಮಯ, ಮೆಟೀರಿಯಲ್ ಟೆಸ್ಟಿಂಗ್ ಲ್ಯಾಬೊ ರೇಟರಿ ಕ್ಷೇತ್ರದಲ್ಲಿ ಒಟ್ಟು 4 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಮತ್ತು ಉಗಾಂಡಾ ಸೇನಾ ತರಬೇತಿ ಕ್ಷೇತ್ರದಲ್ಲಿ ಸಹಕಾರವನ್ನು ಬಲಿಷ್ಠಗೊಳಿಸಬೇಕು ಎಂದರಲ್ಲದೆ, ಉಗಾಂಡಾದ ಸೇನೆಗೆ ಹಾಗೂ ನಾಗರಿಕರ ಬಳಕೆಗೆ ವಾಹನಗಳು ಹಾಗೂ ಆ್ಯಂಬುಲೆನ್ಸ್‌ಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಜತೆಗೆ ಕಂಪಲದಲ್ಲಿರುವ ಕ್ಯಾನ್ಸರ್ ಸಂಸ್ಥೆಗೆ ಕ್ಯಾನ್ಸರ್ ಥೆರಪಿ ಯಂತ್ರವನ್ನೂ ನೀಡುವುದಾಗಿ ತಿಳಿಸಿದ್ದಾರೆ.
200 ಹಸುಗಳ ಗಿಫ್ಟ್
ಇದಕ್ಕೂ ಮುನ್ನ, ರವಾಂ ಡಾಗೆ ಭೇಟಿ ನೀಡಿದ್ದ ಮೋದಿ ಅವರು ಆ ದೇಶಕ್ಕೆ 200 ದಶಲಕ್ಷ ಡಾಲರ್ ಸಾಲ ನೀಡುವುದಾಗಿ ಘೋಷಿಸಿದ್ದರು. ಅಲ್ಲಿನ ಜೆನೋಸೈಡ್ ಮೆಮೊರಿ ಯಲ್ ಸೆಂಟರ್‌ಗೆ ಭೇಟಿ ನೀಡಿದ್ದರು ಹಾಗೂ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತ ನಾಡಿದ್ದರು. ಜತೆಗೆ, ಕಿಗಾಲಿಯಲ್ಲಿನ ಗ್ರಾಮವೊಂ ದಕ್ಕೆ 200 ಹಸುಗಳನ್ನು ಉಡುಗೊರೆಯಾಗಿ ನೀಡಿದ್ದರು.