ನವದೆಹಲಿ: 3 ಟೆಸ್ಟ್, 5 ಏಕದಿನ ಮತ್ತು 1 ಟಿ20 ಪಂದ್ಯದ ಸರಣಿಗಾಗಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಬುಧವಾರ ಶ್ರೀಲಂಕಾ ಪ್ರವಾಸ ಬೆಳೆಸಿದೆ. ಮೊದಲ ಟೆಸ್ಟ್ ಪಂದ್ಯ ಜು.26 ರಂದು ಆರಂಭವಾಗಲಿದೆ.
ರವಿಶಾಸ್ತ್ರಿ
ಭಾರತ ತಂಡದ ನೂತನ ಕೋಚ್ ಆಗಿ ಆಯ್ಕೆಯಾದ ಮೇಲೆ ಇದು ಮೊದಲ ಪ್ರವಾಸವಾಗಿದ್ದು, ನಾಯಕ ಮತ್ತು ಕೋಚ್ ಇಬ್ಬರಿಗೂ ಹೊಸ ಸವಾಲಾಗಿದೆ.
ಕೊಹ್ಲಿ-ರವಿಶಾಸ್ತ್ರಿಗೆ ಪರೀಕ್ಷೆ: ಅನಿಲ್ ಕುಂಬ್ಳೆ ರಾಜೀನಾಮೆಯ ನಂತರ ಕೋಚ್ ಸ್ಥಾನಕ್ಕೆ ರವಿಶಾಸ್ತ್ರಿ ಆಯ್ಕೆಯಾಗಿದ್ದಾರೆ. ಕೋಚ್ ಸ್ಥಾನಕ್ಕೆ ರವಿಶಾಸ್ತ್ರಿ ಮತ್ತು ವೀರೇಂದ್ರ ಸೆಹವಾಗ್ ನಡುವೆ ಭಾರೀ ಸ್ಪರ್ಧೆ ಇತ್ತು. ಅಂತಿಮವಾಗಿ ಕೋಚ್ ಆಯ್ಕೆಯ ಜವಾಬ್ದಾರಿ ಹೊತ್ತ ಉನ್ನತ ಸಲಹಾ ಸಮಿತಿಯಲ್ಲಿರುವ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ, ವಿ.ವಿ.ಎಸ್.ಲಕ್ಷ್ಮಣ್ ಅವರು ರವಿಶಾಸ್ತ್ರಿಯನ್ನು ಕೋಚ್ ಆಗಿ ಆಯ್ಕೆ ಮಾಡಿದರು. ಇದಕ್ಕೆ ಭಾರೀ ಟೀಕೆಯೂ ವ್ಯಕ್ತವಾಗಿತ್ತು. ಬೌಲಿಂಗ್ ಕೋಚ್‌ಗೆ ಸಂಬಂಧಿಸಿದಂತೆ ಬಿಸಿಸಿಐ ಮೇಲೆ ಒತ್ತಡ ಹಾಕಿ ಭರತ್ ಅರುಣ್ ಅವರನ್ನೇ ನೇಮಕ ಮಾಡಿಸಿಕೊಳ್ಳುವಲ್ಲಿ ರವಿ ಶಾಸ್ತ್ರಿ ಯಶಸ್ವಿಯಾಗಿದ್ದಾರೆ. ಈ ಎಲ್ಲಾ ಬೆಳವಣಿಗೆಯ ದೃಷ್ಟಿಯಲ್ಲಿ ಶ್ರೀಲಂಕಾ ಪ್ರವಾಸ ರವಿಶಾಸ್ತ್ರಿಗೆ ಸವಾಲಿನದಾಗಿದೆ. ಜತೆಗೆ ಶಾಸ್ತ್ರಿಯಂತಹ ಕೋಚ್ ಬೆಂಬಲಿಸಿದ ಕೊಹ್ಲಿ ಮೇಲೆಯೂ ಭಾರೀ ಒತ್ತಡವಿದೆ.