ಮೆಲ್ಬರ್ನ್: ವಿಶ್ವಕಪ್ ಪಂದ್ಯಾವಳಿಗೂ ಮುನ್ನ 3 ಪಂದ್ಯಗಳ ಏಕದಿನ ಸರಣಿಗಾಗಿ ಭಾರತಕ್ಕೆ ಆಗಮಿಸಲಿರುವ ಆಸ್ಟ್ರೇಲಿಯವು ಪೂರ್ಣ ಸಾಮರ್ಥ್ಯದ ತಂಡವನ್ನು ಪ್ರಕಟಿಸಿದೆ.
ತಂಡ 18 ಆಟಗಾರರನ್ನು ಹೊಂದಿದೆ. ಪ್ಯಾಟ್ ಕಮಿನ್ಸ್ ಮರಳಿ ತಂಡದ ನೇತೃತ್ವ ವಹಿಸಲಿದ್ದಾರೆ. ಅನುಭವಿ ಸ್ಟೀವನ್ ಸ್ಮಿತ್ ಕೂಡ ವಾಪಸಾಗಿದ್ದಾರೆ. ಇವರಿಬ್ಬರೂ ಗಾಯಾಳಾದ ಕಾರಣ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿದಿದ್ದರು. ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮೊಟಕುಗೊಳಿಸಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನೂ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಆದರೆ ದಕ್ಷಿಣ ಆಫ್ರಿಕಾ ಸರಣಿಯ ವೇಳೆ ಎಡಗೈ ಮೂಳೆ ಮುರಿತಕ್ಕೊಳಗಾದ ಟ್ರಾವಿಸ್ ಹೆಡ್ ಭಾರತಕ್ಕೆ ಬರುವುದಿಲ್ಲ. ಈ ಸರಣಿಯ ವೇಳೆ ತಂಡದಲ್ಲಿದ್ದ ಟಿಮ್ ಡೇವಿಡ್ ಮತ್ತು ಮೈಕಲ್ ನೇಸರ್ ಆಯ್ಕೆಯಾಗಿಲ್ಲ. ಮ್ಯಾಟ್ ಶಾರ್ಟ್ ಮತ್ತು ಸ್ಪೆನ್ಸರ್ ಜಾನ್ಸನ್ ಈ ತಂಡದ ಹೊಸಬರು.
ಸೆ. 22ರಿಂದ ಏಕದಿನ ಸರಣಿ ಮೊದಲ್ಗೊಳ್ಳಲಿದೆ. ಮೊಹಾಲಿ, ರಾಜ್‌ಕೋಟ್ ಮತ್ತು ಇಂದೋರ್‌ನಲ್ಲಿ ಪಂದ್ಯಗಳನ್ನು ಆಡಲಾಗುವುದು.
ಆಸ್ಟ್ರೇಲಿಯ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸೀನ್ ಅಬೋಟ್, ಅಲೆಕ್ಸ್ ಕ್ಯಾರಿ, ನಥನ್ ಎಲ್ಲಿಸ್, ಕ್ಯಾಮರಾನ್ ಗ್ರೀನ್, ಜೋಶ್ ಹೇಝಲ್‌ವುಡ್, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಮಾರ್ನಸ್ ಲಬುಶೇನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ತನ್ವೀರ್ ಸಂಗಾ, ಮ್ಯಾಟ್ ಶಾರ್ಟ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋಯಿನಿಸ್, ಡೇವಿಡ್ ವಾರ್ನರ್, ಆ್ಯಡಂ ಝಂಪ.