Advertisement

ಭಾರತಕ್ಕೆ ಇಂದು ಅಗ್ನಿಪರೀಕ್ಷೆ

03:45 AM Jan 29, 2017 | Team Udayavani |

ನಾಗ್ಪುರ: ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಹಾಗೂ ಏಕದಿನ ಸರಣಿಯನ್ನು ಅಧಿ ಕಾರಯುತವಾಗಿ ಗೆದ್ದು ಬೀಗಿದ ಭಾರತಕ್ಕೀಗ ಸರಣಿಯೊಂದನ್ನು ಉಳಿಸಿಕೊಳ್ಳುವ ಕಠಿನ ಸವಾಲು ಎದುರಾಗಿದೆ. ಕಾನ್ಪುರದ ಮೊದಲ ಟಿ-20 ಪಂದ್ಯವನ್ನು ಸೋತಿರುವ ಟೀಮ್‌ ಇಂಡಿಯಾ ರವಿವಾರ ನಾಗ್ಪುರದಲ್ಲಿ ನಡೆ ಯುವ ದ್ವಿತೀಯ ಮುಖಾಮುಖೀಯನ್ನು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಇಲ್ಲವಾದರೆ ಕೊಹ್ಲಿ ಸಾರಥ್ಯದಲ್ಲಿ ಭಾರತ ಮೊದಲ ಸಲ ತವರಿನಲ್ಲಿ ಸರಣಿ ಸೋಲಿನ ಅವಮಾನಕ್ಕೆ ಸಿಲುಕಲಿದೆ.

Advertisement

ವಿರಾಟ್‌ ಕೊಹ್ಲಿ ಸಾರಥ್ಯದಲ್ಲಿ ಭಾರತ ಈವರೆಗೆ ತವರಿನಲ್ಲಿ ಎಲ್ಲ ಮಾದರಿಯ 6 ಕ್ರಿಕೆಟ್‌ ಸರಣಿಗಳನ್ನಾಡಿದೆ. ಎಲ್ಲದರಲ್ಲೂ ಅಜೇಯವಾಗಿ ಉಳಿದಿದೆ. ಅಷ್ಟೇಕೆ, ಬಹುತೇಕ ಸರಣಿಗಳನ್ನು ಭರ್ಜರಿಯಾಗಿಯೇ ಗೆದ್ದ ಭಾರತಕ್ಕೆ ಯಾವ ಸಂದರ್ಭದಲ್ಲೂ ಸರಣಿ ಉಳಿಸಿಕೊಳ್ಳುವ ಸಮಸ್ಯೆ ತಲೆದೋರಿರಲಿಲ್ಲ. ಹೀಗಾಗಿ ನಾಗ್ಪುರ ಪಂದ್ಯ ಎಲ್ಲರನ್ನೂ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.

ಇನ್ನೊಂದೆಡೆ ಟೆಸ್ಟ್‌ ಹಾಗೂ ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳಲು ಇಂಗ್ಲೆಂಡಿಗೆ ಇದು ಸಕಾಲ. ರವಿವಾರದ ಮೇಲಾಟದಲ್ಲಿ ಶತಾಯ ಗತಾಯ ಜಯಿಸಲೇಬೇಕೆಂಬ ರಣೋತ್ಸಾಹ ಆಂಗ್ಲರ ಪಾಳೆಯದಲ್ಲಿ ತುಂಬಿರುವುದು ಸುಳ್ಳಲ್ಲ. 

ನಾಗ್ಪುರ: ಭಾರತಕ್ಕೆ ಲಕ್‌ ಇಲ್ಲ!
ಭಾರತ ಈವರೆಗೆ ನಾಗ್ಪುರದಲ್ಲಿ 2 ಟಿ-20 ಪಂದ್ಯಗಳನ್ನಾಡಿದೆ, ಎರಡರಲ್ಲೂ ಸೋತಿದೆ. ಮೊದಲ ಪಂದ್ಯ ನಡೆದದ್ದು 2009ರಲ್ಲಿ, ಶ್ರೀಲಂಕಾ ವಿರುದ್ಧ. ಇಲ್ಲಿ 215 ರನ್‌ ಬೆನ್ನಟ್ಟುವ ಸವಾಲು ಪಡೆದ ಧೋನಿ ಪಡೆ 9ಕ್ಕೆ 186 ರನ್‌ ಪೇರಿಸಿ ಶರಣಾಗಿತ್ತು. 

ಅನಂತರದ ಮುಖಾಮುಖೀ ಏರ್ಪಟ್ಟದ್ದು ಕಳೆದ ವರ್ಷ ನ್ಯೂಜಿಲ್ಯಾಂಡ್‌ ವಿರುದ್ಧ. ಅದು ಟಿ-20 ವಿಶ್ವಕಪ್‌ ಕೂಟದ ಸೂಪರ್‌-10 ಹಂತದ ಪಂದ್ಯವಾಗಿತ್ತು. ಕಿವೀಸ್‌ನ 126 ರನ್ನಿಗೆ ಉತ್ತರಿಸಲು ವಿಫ‌ಲವಾದ ಭಾರತ 18.1 ಓವರ್‌ಗಳಲ್ಲಿ 79 ರನ್ನಿಗೆ ಆಲೌಟ್‌ ಆಗಿತ್ತು!

Advertisement

ಮೂರನೇ ಪ್ರಯತ್ನದಲ್ಲಾದರೂ ಭಾರತವಿಲ್ಲಿ ಸೋಲಿನ ಸಂಕಟದಿಂದ ಮುಕ್ತಿ ಪಡೆಯಬೇಕಿದೆ.

ಇಂಗ್ಲೆಂಡ್‌ ಪರಿಪೂರ್ಣ ಪ್ರದರ್ಶನ
ಕಾನ್ಪುರ ಟಿ-20 ಪಂದ್ಯದಲ್ಲಿ ಎವೋನ್‌ ಮಾರ್ಗನ್‌ ನಾಯಕತ್ವದ ಇಂಗ್ಲೆಂಡ್‌ ಪರಿಪೂರ್ಣ ಪ್ರದರ್ಶನ ನೀಡಿ ಗಮನ ಸೆಳೆದಿದೆ. ಚುಟುಕು ಕ್ರಿಕೆಟಿನ ಎಲ್ಲ ವಿಭಾಗಗಳಲ್ಲೂ ಅದು ಭಾರತವನ್ನು ಹಿಂದಿಕ್ಕಿದೆ. ಮೊದಲು ಟೀಮ್‌ ಇಂಡಿಯಾದ ಬ್ಯಾಟಿಂಗಿಗೆ ಕಡಿವಾಣ ಹಾಕಿದ ಇಂಗ್ಲೆಂಡ್‌, ಅನಂತರ ಚೇಸಿಂಗ್‌ ವೇಳೆ ಶಿಸ್ತುಬದ್ಧ ಆಟವಾಡಿ ಗೆಲುವಿನ ಬಾವುಟ ಹಾರಿಸಿತು. 

ಇಂಗ್ಲೆಂಡ್‌ ಟಿ-20 ಕ್ರಿಕೆಟಿಗೆ ಹೇಳಿ ಮಾಡಿಸಿದಂಥ ಯುವ ಪಡೆಯನ್ನು ಹೊಂದಿದೆ. ಗ್ರೀನ್‌ಪಾರ್ಕ್‌ನಲ್ಲಿ ಇವರು ತೋರ್ಪಡಿಸಿದ ಶಿಸ್ತಿನ ಪ್ರದರ್ಶನ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಮುಖ್ಯವಾಗಿ ಬೌಲಿಂಗ್‌ ವಿಭಾಗದಲ್ಲಿ ಆಂಗ್ಲರ ದಾಳಿ ತೀವ್ರ ಹರಿತವಾಗಿತ್ತು. ಮೊಯಿನ್‌ ಅಲಿ ಅಮೋಘ ಸ್ಪಿನ್‌ ಪ್ರದರ್ಶನವೊಂದಕ್ಕೆ ಸಾಕ್ಷಿಯಾಗುತ್ತ, 4 ಓವರ್‌ಗಳಲ್ಲಿ ಕೇವಲ 21 ರನ್ನಿತ್ತು 2 ವಿಕೆಟ್‌ ಹಾರಿಸಿದರು. ಈ ಸಾಧನೆಗಾಗಿ ಅವರು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದುದನ್ನೂ ಮರೆಯುವಂತಿಲ್ಲ. ವೇಗಿಗಳಾದ ಟೈಮಲ್‌ ಮಿಲ್ಸ್‌, ಕ್ರಿಸ್‌ ಜೋರ್ಡನ್‌ ದಾಳಿಯೂ ಮಾರಕವಾಗಿತ್ತು. ಲಿಯಮ್‌ ಪ್ಲಂಕೆಟ್‌, ಬೆನ್‌ ಸ್ಟೋಕ್ಸ್‌ ಕೂಡ ಪರಿಣಾಮಕಾರಿ ಎನಿಸಿದರು. ಇವರೆಲ್ಲ ಸೇರಿ ಭಾರತವನ್ನು 147ಕ್ಕೆ ಹಿಡಿದು ನಿಲ್ಲಿಸಿದರು. 

ಇಂಗ್ಲೆಂಡಿನ ಬ್ಯಾಟಿಂಗ್‌ ಪ್ರಾಬಲ್ಯಕ್ಕೆ ಹೋಲಿಸಿದರೆ ಇದು ಬಹಳ ಕಡಿಮೆ ಮೊತ್ತವಾಗಿತ್ತು. ಇದನ್ನು ಬಹಳ ಸುಲಭದಲ್ಲಿ ಹಿಂದಿಕ್ಕಿದ ಮಾರ್ಗನ್‌ ಪಡೆ “ಗ್ರೀನ್‌ ಪಾರ್ಕ್‌’ನಲ್ಲಿ ಗೆಲುವಿನ ಸಂಭ್ರಮ ಆಚರಿಸಿತು. ಮಾರ್ಗನ್‌ ಅವರ ಏಕದಿನ ಫಾರ್ಮ್ (28, 102, 43) ಇಲ್ಲಿಯೂ ಮುಂದುವರಿದದ್ದು ಇಂಗ್ಲೆಂಡ್‌ ಪಾಲಿಗೊಂದು ಶುಭ ಸೂಚನೆ.

ಭಾರತದ ಬ್ಯಾಟಿಂಗ್‌ ಬಡತನ
ಭಾರತ ನಾಗ್ಪುರದಲ್ಲಿ ನಲಿದಾಡಬೇಕಾದರೆ ಬ್ಯಾಟಿಂಗ್‌ ವಿಭಾಗವನ್ನು ಸುಧಾರಿಸಿ ಕೊಳ್ಳಲೇಬೇಕು. ಪುನಃ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಸಿಕ್ಕಿದರೆ ಸ್ಕೋರ್‌ಬೋರ್ಡ್‌ನಲ್ಲಿ 170ರಷ್ಟಾದರೂ ರನ್‌ ದಾಖಲಿಸಬೇಕು.

ಕಾನ್ಪುರದಲ್ಲಿ ಮಿಂಚಿದ್ದು ಧೋನಿ, ರೈನಾ ಮತ್ತು ಕೊಹ್ಲಿ ಮಾತ್ರ. ಧೋನಿಯ ಅಜೇಯ 36 ರನ್ನೇ ಭಾರತದ ಸರದಿಯ ಗರಿಷ್ಠ ವೈಯಕ್ತಿಕ ಗಳಿಕೆ. ರಾಹುಲ್‌, ಪಾಂಡೆ, ಪಾಂಡ್ಯ ವೈಫ‌ಲ್ಯ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತ್ತು. ರಾಹುಲ್‌ ಸ್ಥಾನದಲ್ಲಿ ಕೀಪರ್‌ ರಿಷಬ್‌ ಪಂತ್‌ ಅವರನ್ನು ಆರಂಭಿಕನನ್ನಾಗಿ ಆಡಿಸುವ ಸಾಧ್ಯತೆ ಇದೆ. 

ಒಟ್ಟಾರೆಯಾಗಿ ನೋಡಿದರೆ ಭಾರತದ ಬ್ಯಾಟಿಂಗ್‌ ವಿಭಾಗ ಸೀನಿಯರ್ ಹಾಗೂ ಅನುಭವಿಗಳಿಂದ ಒಳಗೊಂಡಿದ್ದು, ಕಾಗದದಲ್ಲಿ ಬಲಿಷ್ಠವಾಗಿಯೇ ಗೋಚರಿಸುತ್ತಿದೆ. ಆದರೆ ಎಲ್ಲರೂ ನೈಜ ಸಾಮರ್ಥ್ಯ ತೋರ್ಪಡಿಸುವ ಅಗತ್ಯವಿದೆ. 

ಬೌಲಿಂಗ್‌ ವಿಭಾಗದಲ್ಲಿ ಬುಮ್ರಾ ಬದಲು ಭುವನೇಶ್ವರ್‌ ಬಂದರೂ ಅಚ್ಚರಿ ಇಲ್ಲ. ಮೊನ್ನೆ ಬುಮ್ರಾ ಯಾರ್ಕರ್‌ಗಳು ಹಳಿ ತಪ್ಪಿದ್ದವು.

ಸಂಭಾವ್ಯ ತಂಡಗಳು
ಭಾರತ: ವಿರಾಟ್‌ ಕೊಹ್ಲಿ (ನಾಯಕ), ಕೆ.ಎಲ್‌. ರಾಹುಲ್‌/ರಿಷಬ್‌ ಪಂತ್‌, ಸುರೇಶ್‌ ರೈನಾ, ಯುವರಾಜ್‌ ಸಿಂಗ್‌, ಧೋನಿ, ಮನೀಷ್‌ ಪಾಂಡೆ, ಹಾರ್ದಿಕ್‌ ಪಾಂಡ್ಯ, ಅಮಿತ್‌ ಮಿಶ್ರಾ/ಪರ್ವೇಜ್‌ ರಸೂಲ್‌, ಯಜ್ವೇಂದ್ರ ಚಾಹಲ್‌, ನೆಹ್ರಾ, ಭುವನೇಶ್ವರ್‌ ಕುಮಾರ್‌/ಜಸ್‌ಪ್ರೀತ್‌ ಬುಮ್ರಾ.

ಇಂಗ್ಲೆಂಡ್‌: ಜಾಸನ್‌ ರಾಯ್‌, ಸ್ಯಾಮ್‌ ಬಿಲ್ಲಿಂಗ್ಸ್‌, ಜೋ ರೂಟ್‌, ಎವೋನ್‌ ಮಾರ್ಗನ್‌ (ನಾಯಕ), ಬೆನ್‌ ಸ್ಟೋಕ್ಸ್‌, ಜಾಸ್‌ ಬಟ್ಲರ್‌, ಮೊಯಿನ್‌ ಅಲಿ, ಕ್ರಿಸ್‌ ಜೋರ್ಡನ್‌, ಲಿಯಮ್‌ ಪ್ಲಂಕೆಟ್‌, ಆದಿಲ್‌ ರಶೀದ್‌, ಟೈಮಲ್‌ ಮಿಲ್ಸ್‌.

Advertisement

Udayavani is now on Telegram. Click here to join our channel and stay updated with the latest news.

Next