ನವದೆಹಲಿ: ಭಾರತ ಮತ್ತು ಮಾಲ್ಡೀವ್ಸ್ ನಡುವೆ ಸಂಘರ್ಷ ಮುಂದುವರೆದಿರುವ ನಡುವೆಯೇ ಭಾರತ ಸರ್ಕಾರ ಮೇ 10 ರೊಳಗೆ ತನ್ನ ಎಲ್ಲಾ ಯೋಧರನ್ನು ಭಾರತಕ್ಕೆ ವಾಪಾಸ್ ಕರೆಸಿಕೊಳ್ಳಲು ಒಪ್ಪಿರುವುದಾಗಿ ಮಾಲ್ಡೀವ್ಸ್ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಶುಕ್ರವಾರ ನವದೆಹಲಿಯಲ್ಲಿ ಭಾರತ ಮತ್ತು ಮಾಲ್ಡೀವ್ಸ್ ನಡುವೆ ಉನ್ನತ ಮಟ್ಟದ ಕೋರ್ ಗ್ರೂಪ್ ಸಭೆಯಲ್ಲಿ ಈ ಸಂಬಂಧ ಒಪ್ಪಂದಕ್ಕೆ ಬರಲಾಯಿತು.
ಅದರಂತೆ ಮಾಲ್ಡೀವ್ಸ್‌ನಲ್ಲಿನ ಮೂರು ವಾಯುಯಾನ ವೇದಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತನ್ನ ಮಿಲಿಟರಿ ಸಿಬ್ಬಂದಿಯನ್ನು ಮೇ 10 ರೊಳಗೆ ಭಾರತ ಬದಲಾಯಿಸಲಿದೆ ಎಂದು ಮಾಲ್ಡೀವ್ಸ್ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದ್ದು ಮಾರ್ಚ್ 10 ರೊಳಗೆ ಮೊದಲ ಹಂತದ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದೂ ಅದು ಹೇಳಿದೆ.
ರಾಜತಾಂತ್ರಿಕ ಗದ್ದಲದ ನಡುವೆ ಉಭಯ ಪಕ್ಷಗಳ ನಡುವೆ ದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ ಈ ಹೇಳಿಕೆ ಹೊರಬಿದ್ದಿದೆ.
“ಭಾರತ ಸರ್ಕಾರವು ಮಾರ್ಚ್ 10 ರೊಳಗೆ ಮೂರು ವಾಯುಯಾನ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದರಲ್ಲಿ ಮಿಲಿಟರಿ ಸಿಬ್ಬಂದಿಯನ್ನು ಬದಲಾಯಿಸುತ್ತದೆ ಮತ್ತು ಮೇ 10 ರೊಳಗೆ ಇತರ ಎರಡು ಪ್ಲಾಟ್‌ಫಾರ್ಮ್‌ಗಳಲ್ಲಿ ಮಿಲಿಟರಿ ಸಿಬ್ಬಂದಿಯನ್ನು ಬದಲಾಯಿಸುತ್ತದೆ” ಎಂದು ಮಾಲ್ಡೀವ್ಸ್ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಚೀನಾ ಪರವಾಗಿ ಮಾತನಾಡುವ ಮುಯಿಝು, ಮಾರ್ಚ್ 15 ರೊಳಗೆ ತನ್ನ ಎಲ್ಲಾ ಮಿಲಿಟರಿ ಸಿಬ್ಬಂದಿಯನ್ನು ದ್ವೀಪ ರಾಷ್ಟ್ರದಿಂದ ಹಿಂತೆಗೆದುಕೊಳ್ಳುವಂತೆ ಭಾರತವನ್ನು ಕಳೆದ ತಿಂಗಳು ಕೇಳಿಕೊಂಡಿತ್ತು.
ಇದನ್ನೂ ಓದಿ: Mumbai: ಪೊಲೀಸ್ ಠಾಣೆಯಲ್ಲೇ ಶಿವಸೇನಾ ನಾಯಕನ ಮೇಲೆ ಬಿಜೆಪಿ ಶಾಸಕನಿಂದ ಗುಂಡಿನ ದಾಳಿ