Advertisement

2025ರಲ್ಲಿ ಜೈವಿಕ ಇಂಧನ ಉತ್ಪಾದನೆಯಲ್ಲಿ ಭಾರತಕ್ಕೆ 3ನೇ ಸ್ಥಾನ: ಹರ್ದೀಪ್ ಸಿಂಗ್‌

10:30 PM Dec 16, 2022 | Team Udayavani |

ಬೆಂಗಳೂರು: ಜೈವಿಕ ಇಂಧನ (ಎಥೆನಾಲ್‌) ಉತ್ಪಾದನ ಪ್ರಮಾಣವನ್ನು 2025ರ ವೇಳೆ 1 ಕೋಟಿ ಲೀಟರ್‌ಗೆ ಏರಿಸಿ ಇಂಧನ ಉತ್ಪಾದನೆಯಲ್ಲಿ ಭಾರತವನ್ನು ವಿಶ್ವದಲ್ಲೇ 3ನೇ ಸ್ಥಾನಕ್ಕೆ ತರುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್‌ ಪುರಿ ಹೇಳಿದರು.

Advertisement

ಭಾರತ ಇಂಧನ ಸಪ್ತಾಹ 2023ರ ಅಂಗವಾಗಿ ಶುಕ್ರವಾರ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಂಧನ ಕ್ಷೇತ್ರದಲ್ಲಿ ಭಾರತ ವಿಶ್ವಕ್ಕೆ ಮಾದರಿಯಾಗುವತ್ತ ದಾಪುಗಾಲಿಡುತ್ತಿದೆ. ಈ ಹಿಂದೆ 2030ರ ವೇಳೆಗೆ ಜೈವಿಕ ಇಂಧನ ಉತ್ಪಾದನೆ ಪ್ರಮಾಣವನ್ನು 1 ಕೋಟಿ ಲೀಟರ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿತ್ತು. ಆದರೆ ಸದ್ಯದ ಉತ್ಪಾದನ ಸಾಮರ್ಥ್ಯವನ್ನು ಗಮನಿಸಿ ಆ ಗುರಿಯನ್ನು 2025ಕ್ಕೆ ನಿಗದಿ ಮಾಡಲಾಗಿದೆ. ಈ ಗುರಿ ಮುಟ್ಟಿದರೆ ವಿಶ್ವದಲ್ಲಿ ಜೈವಿಕ ಇಂಧನ ಉತ್ಪಾದನೆಯಲ್ಲಿ ಭಾರತ 3ನೇ ಸ್ಥಾನಕ್ಕೆ ತಲುಪಲಿದೆ ಎಂದು ತಿಳಿಸಿದರು.

2022ರ ವೇಳೆಗೆ ಪೆಟ್ರೋಲ್‌ ಜತೆಗೆ ಶೇ. 10 ಎಥೆನಾಲ್‌ ಮಿಶ್ರಣ ಮಾಡಿದ ಇಂಧನ ಮಾರುಕಟ್ಟೆಗೆ ತರಲು ಉದ್ದೇಶಿಸಲಾಗಿತ್ತು. ಆದರೆ, ಸಂಶೋಧನೆ ಮತ್ತು ಉತ್ಪಾದನ ವಲಯದಲ್ಲಿನ ಕಾರ್ಯಕ್ಷಮತೆಯಿಂದಾಗಿ ಪೆಟ್ರೋಲ್‌ ಜತೆಗೆ ಶೇ. 20 ಎಥೆನಾಲ್‌ ಮಿಶ್ರಣ ಮಾಡಿದ ಇ20 ಇಂಧನ ಈಗಲೇ ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಈ ಇಂಧನವನ್ನು 2030ರ ವೇಳೆಗೆ ಮಾರುಕಟ್ಟೆಗೆ ತರುವ ಉದ್ದೇಶ ಹೊಂದಲಾಗಿತ್ತು. ಈಗಾಗಲೆ ಇ20 ಇಂಧನ ಸಿದ್ಧವಾಗಿರುವ ಹಿನ್ನೆಲೆಯಲ್ಲಿ ಈ ವರ್ಷದ ಅಂತ್ಯದೊಳಗೆ ನೂತನ ಇಂಧನ ಬಳಕೆಗೆ ಸಿಗಲಿದೆ ಎಂದು ಹರ್ದೀಪ್ ಹೇಳಿದರು.

ಲೇಸರ್‌ ಶೋ
ಭಾರತ ಇಂಧನ ಸಪ್ತಾಹ 2023ದ ಪೂರ್ವ ಸಿದ್ಧತಾ ಕಾರ್ಯಕ್ರಮ ಬೆಂಗಳೂರು ಅರಮನೆ ಆವರಣದಲ್ಲಿ ಜರಗಿತು. ಈ ವೇಳೆ ಲೇಸರ್‌ ಶೋ ಮೂಲಕ ಇಂಧನ ಕ್ಷೇತ್ರ ಹಾಗೂ ಭಾರತದ ಕುರಿತು ಮಾಹಿತಿಯನ್ನು ಪ್ರದರ್ಶಿಸಲಾಯಿತು. ಕೇಂದ್ರ ಸಚಿವ ಹರ್ದೀಪ್ ಸಿಂಗ್‌ ಪುರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂತಾದ ಪ್ರಮುಖರಿದ್ದರು.

ಫೆ. 6-8ರವರೆಗೆ ಐಇಡಬ್ಲ್ಯೂ 2023
ದೇಶದ ಇಂಧನ ಕ್ಷೇತ್ರದ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ 2023ರ ಫೆ. 6ರಿಂದ 8ರ ವರೆಗೆ ಬೆಂಗಳೂರಿನಲ್ಲಿ ಭಾರತ ಇಂಧನ ಸಪ್ತಾಹ 2023 ಆಯೋಜಿಸಲಾಗಿದೆ. ಸಪ್ತಾಹದಲ್ಲಿ 30 ಸಾವಿರಕ್ಕೂ ಹೆಚ್ಚಿನ ಜನರು ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ಅದರ ಜತೆಗೆ 8 ಸಾವಿರಕ್ಕೂ ಹೆಚ್ಚಿನ ಪ್ರತಿನಿಧಿಗಳು, 50ಕ್ಕೂ ಹೆಚ್ಚಿನ ಸಂಸ್ಥೆಗಳ ಹಿರಿಯ ಅಧಿಕಾರಿಗಳು, 30ಕ್ಕೂ ಹೆಚ್ಚಿನ ರಾಜ್ಯ ಮತ್ತು ದೇಶಗಳ ಇಂಧನ ಸಚಿವರು ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ಏಷ್ಯಾ ಖಂಡದ 9 ದೇಶಗಳ ಸಚಿವರ ದುಂಡು ಮೇಜಿನ ಸಭೆಗಳು ನಡೆಯಲಿವೆ. 19 ಕಾರ್ಯತಾಂತ್ರಿಕ ಸಮಾವೇಶ ಗೋಷ್ಠಿಗಳು ಜರಗಲಿವೆ. ಸಪ್ತಾಹದಲ್ಲಿ ಭಾರತ ಭವಿಷ್ಯದ ಯೋಜನೆಗಳು, ಹಸಿರು ಇಂಧನಕ್ಕಾಗಿ ಕೈಗೊಂಡಿರುವ ಮತ್ತು ಕೈಗೊಳ್ಳಲಿರುವ ಕ್ರಮಗಳನ್ನು ಪರಿಚಯಿಸಲಾಗುತ್ತದೆ ಎಂದು ಹರ್ದೀಪ್ ಸಿಂಗ್‌ ಪುರಿ ವಿವರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next