ಕಾಬೂಲ್: ತಾಲಿಬಾನ್ ಪ್ರಾಂತ್ಯಗಳ ವಿಸ್ತರಣೆಯಿಂದಾಗಿ ಅಫ್ಘಾನಿಸ್ತಾನದಲ್ಲಿ ಭದ್ರತಾ ಪರಿಸ್ಥಿತಿ ತೀವ್ರ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಕಾಬೂಲ್ ಮತ್ತು ಇತರ ನಗರಗಳಿಂದ ತನ್ನ ದೇಶದ ಪ್ರಜೆಗಳು ಮತ್ತು ಅಧಿಕಾರಿಗಳನ್ನು ಸ್ಥಳಾಂತರಿಸಲು ಭಾರತ ನಿರ್ಧರಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:223 ಕೋಟಿ ರೂ. ವೆಚ್ಚದಲ್ಲಿ ನಾಡಪ್ರಭು ಕೆಂಪೇಗೌಡರ 46 ಪಾರಂಪರಿಕ ತಾಣಗಳ ಅಭಿವೃದ್ಧಿಗೆ ಯೋಜನೆ
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್, ಕಂದಾಹಾರ್ ಮತ್ತು ಮಝಾರ್ ಇ ಷರೀಫ್ ನಗರಗಳಲ್ಲಿರುವ ನಮ್ಮ ಸಿಬಂದಿ ಮತ್ತು ಇತರ ಅಧಿಕಾರಿಗಳನ್ನು ಸ್ಥಳಾಂತರಿಸಲು ಸಿದ್ಧತೆ ನಡೆಸಲಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ಇಂಡಿಯಾ ಟುಡೆಗೆ ತಿಳಿಸಿದೆ.
ಅಫ್ಘಾನ್ ನಗರ ಮತ್ತು ಒಳ ಪ್ರದೇಶಗಳಲ್ಲಿನ ಹದಗೆಟ್ಟ ಭದ್ರತಾ ಪರಿಸ್ಥಿತಿಯಿಂದಾಗಿ ರಾಯಭಾರ ಕಚೇರಿಗಳು ಮತ್ತು ದೂತವಾಸಗಳು ಕಾರ್ಯನಿರ್ವಹಿಸಲು ಅಸಮರ್ಥವಾಗಿವೆ. ಅಷ್ಟೇ ಅಲ್ಲ ತಾಲಿಬಾನ್ ಉಗ್ರರ ದಾಳಿಯ ಭಯದಿಂದ ಅಫ್ಘಾನ್ ಅಧಿಕಾರಿಗಳೇ ಸ್ವತಃ ತಮ್ಮ ಸರ್ಕಾರದ ನಿಯಂತ್ರಣದಲ್ಲಿರುವ ಪ್ರದೇಶಗಳಿಂದ ಪಲಾಯನ ಮಾಡಲು ಪ್ರಾರಂಭಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಅಫ್ಘಾನ್ ನೆಲದಿಂದ ಸಂಪೂರ್ಣವಾಗಿ ತನ್ನ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುವುದಾಗಿ ಕಳೆದ ಏಪ್ರಿಲ್ ತಿಂಗಳಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಘೋಷಿಸಿದ್ದರು. ಅಲ್ಲದೇ ತಾಲಿಬಾನ್ ಹಿಡಿತದ ಪ್ರದೇಶಗಳನ್ನು ವಿಸ್ತರಿಸಲು ಆರಂಭಿಸಿದ್ದ ಉಗ್ರಗಾಮಿ ಸಂಘಟನೆ ಜತೆ ಜಾಗತಿಕ ಪಡೆಗಳು ಮಾತುಕತೆ ಆರಂಭಿಸಿದ್ದವು. ಏತನ್ಮಧ್ಯೆ ಅಫ್ಘಾನ್ ಭದ್ರತಾ ಸಿಬಂದಿಗಳು ಕೂಡಾ ತಾಲಿಬಾನ್ ಜತೆ ಸೇರ್ಪಡೆಗೊಂಡ ಘಟನೆ ನಡೆದಿರುವುದಾಗಿ ವರದಿ ವಿವರಿಸಿದೆ.