Advertisement
ಕೊರೊನಾ ಸರಿದು ಹೋದರೂ ಅದರ ಪರೋಕ್ಷ ಪರಿಣಾಮ ಮತ್ತು ರಷ್ಯಾ-ಉಕ್ರೇನ್ ನಡುವೆ ಯುದ್ಧ ಮುಂದುವರಿದಿರುವುದು ಇಡೀ ವಿಶ್ವದ ಆರ್ಥಿಕತೆಯನ್ನು ನಲುಗಿಸಿದೆ. ವಿಶ್ವದ ವಿವಿಧ ದೇಶಗಳು ಯು.ಎಸ್.ನ ಕೇಂದ್ರ ಬ್ಯಾಂಕ್ ತೆಗೆದುಕೊಳ್ಳುತ್ತಿರುವ ಕಠಿನ ನಿರ್ಧಾರಗಳ ಪರಿಣಾಮಕ್ಕೆ ತತ್ತರಿಸುತ್ತಿವೆ. ಶಕ್ತಿಶಾಲಿಯಾಗಿರುವ ಯು.ಎಸ್. ಡಾಲರ್ ಇತರ ದೇಶಗಳ ಕರೆನ್ಸಿಗಳನ್ನು ಅಪಮೌಲ್ಯಗೊಳಿಸುತ್ತಿದ್ದು, ಅಲ್ಲಿನ ಕೇಂದ್ರ ಬ್ಯಾಂಕ್‌ಗಳು ಬಡ್ಡಿದರವನ್ನು ಹೆಚ್ಚಿಸಬೇಕಾದ ಒತ್ತಡದಲ್ಲಿವೆ. ಆದರೆ ರೂಪಾಯಿಯು ಡಾಲರ್ ವಿರುದ್ಧ ಸಾರ್ವಕಾಲಿಕ ಕುಸಿತವನ್ನು ದಾಖಲಿಸಿದೆಯಾದರೂ ಇತರ ರಾಷ್ಟ್ರಗಳ ಕರೆನ್ಸಿಗೆ ತುಲನೆ ಮಾಡಿದರೆ ರೂಪಾಯಿ ಕೊಂಚ ಮಟ್ಟಿನ ಸ್ಥಿರತೆಯನ್ನು ಕಾಯ್ದುಕೊಂಡಿದೆ.
Related Articles
Advertisement
ಇಂಧನ ಮತ್ತು ಆಹಾರ ವಸ್ತುಗಳ ಬೆಲೆ ಹೆಚ್ಚಾಗಿರುವುದರ ಪರಿಣಾಮವಾಗಿ ಹಣದುಬ್ಬರ ನಿಯಂತ್ರಣ ಕೈ ಮೀರಿದೆ. ಸದ್ಯ ಹಣದುಬ್ಬರದ ಒತ್ತಡವು ತೀವ್ರವಾಗಿರುವುದರಿಂದ ಹಣದುಬ್ಬರದ ಗುರಿ ನಿಗದಿಪಡಿಸುವುದು ದೊಡ್ಡ ಪರೀಕ್ಷೆಯೇ ಆಗಿದೆ. ದೇಶದ ಗೋಧಿ ದಾಸ್ತಾನು ಇಳಿಮುಖವಾಗಿದ್ದು ಬೆಲೆಯು ಶೇ. 18ರಷ್ಟು ಅಧಿಕಗೊಂಡಿದೆ. ಅತಿವೃಷ್ಟಿಯಿಂದ ಬಾಸುಮತಿ ಅಕ್ಕಿ ಇಳುವರಿ ಕುಂಠಿತವಾಗಿದೆ. ಹಾಲು, ತರಕಾರಿ, ಬೇಳೆಕಾಳುಗಳ ಬೆಲೆ ಅಧಿಕಗೊಂಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಸದ ಹೊರತು ಹಣದುಬ್ಬರ ತಗ್ಗುವುದಿಲ್ಲ. ಇದೀಗ ತೈಲ ಉತ್ಪಾದನೆಯನ್ನು ಕಡಿತಗೊಳಿಸುವ ಒಪೆಕ್ ಹಾಗೂ ಮಿತ್ರ ರಾಷ್ಟ್ರಗಳ ನಿರ್ಧಾರವು ಜಾರಿಯಾಗಿದೆ. ಭಾರತ, ಅಮೆರಿಕ ಸಹಿತ ಒಪೆಕ್ ತೈಲವನ್ನು ಅವಲಂಬಿಸಿರುವ ಜಗತ್ತಿನ ಬಹುತೇಕ ರಾಷ್ಟಗಳಿಗೆ ಇದರಿಂದ ದೊಡ್ಡ ಮಟ್ಟದ ಹೊಡೆತ ಬೀಳಲಿದೆ. ತೈಲ ಬೆಲೆಗಳಲ್ಲಾಗುವ ಬದಲಾವಣೆಯಿಂದ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಆರ್ಥಿಕ ಅನಿಶ್ಚಿತತೆಗಳತ್ತ ನಿಗಾ ಇರಿಸಬೇಕಿದೆ.
ಇದೇ ಸಂದರ್ಭದಲ್ಲಿ ದೇಶದ ನಿರುದ್ಯೋಗ ದರವು ಅಕ್ಟೋಬರ್ ತಿಂಗಳಲ್ಲಿ ಶೇ. 7.7ಕ್ಕೆ ಏರಿಕೆಯಾಗಿದೆ. 2022 ಸೆಪ್ಟಂಬರ್‌ನಲ್ಲಿ ಶೇ. 6.43 ರಷ್ಟಿತ್ತು ಎಂದು ಸಿಎಂಐಇ ವರದಿ ಹೇಳಿದೆ. ಇದು ದೇಶದ ಆರ್ಥಿಕ ದೃಷ್ಟಿಯಿಂದ ಹಿತಕರ ಬೆಳವಣಿಗೆಯಲ್ಲ. ಕೋವಿಡ್ ಸಂದರ್ಭವನ್ನು ಹೊರತುಪಡಿಸಿದರೆ ದೇಶದ ನಿರುದ್ಯೋಗ ಪ್ರಮಾಣವು ಸಾಕಷ್ಟು ನಿಯಂತ್ರಣದಲ್ಲಿತ್ತು. ಆದರೆ ಈಗ ಒಂದೇ ತಿಂಗಳಿನಲ್ಲಿ ಶೇ. 1.34ರಷ್ಟು ಹೆಚ್ಚಿರುವುದು ಕಳವಳಕಾರಿ.
ಪ್ರಸಕ್ತ ಸನ್ನಿವೇಶದಲ್ಲಿ ದೇಶದ ಆರ್ಥಿಕ ಚಟುವಟಿಕೆಗಳು ಗರಿಗೆದರಿವೆ. ಅಕ್ಟೋಬರ್‌ನಲ್ಲಿ ಜಿಎಸ್‌ಟಿ 1.52 ಲಕ್ಷ ಕೋಟಿ ರೂ. ಸಂಗ್ರಹಣೆ ಯಾಗಿರುವುದು ಜಿಎಸ್‌ಟಿ ಜಾರಿಗೆ ಬಂದ ಅನಂತರದ ಎರಡನೆಯ ಅತೀ ಹೆಚ್ಚಿನ ಮಾಸಿಕ ವರಮಾನ. ಎಪ್ರಿಲ್‌ನಲ್ಲಿ 1.68 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ತೆರಿಗೆಗಳ ಸಮರ್ಥ ನಿರ್ವಹಣೆ ಮತ್ತು ದಕ್ಷತೆಯಿಂದಾಗಿ ಸತತ ಎಂಟು ತಿಂಗಳುಗಳಿಂದ ಜಿಎಸ್‌ಟಿ ಸಂಗ್ರಹ 1.40 ಲಕ್ಷ ಕೋಟಿ ರೂ. ಮೀರಲು ಸಾಧ್ಯವಾಗಿದೆ. ಕೋವಿಡ್ ಅನಂತರ ಎಲ್ಲ ವಲಯಗಳೂ ಚೇತರಿಕೆಯ ಹಾದಿಯಲ್ಲಿವೆ. ಭಾರತವು ಸಮೃದ್ಧ ವಿದೇಶೀ ವಿನಿಯಮ ಹೊಂದಿರುವ ಹಿನ್ನಲೆಯಲ್ಲಿ ಸಕಾರಾತ್ಮಕ ಸೂಚಿಗಳಿಂದ ಹಿಂಜರಿತದ ಆತಂಕವಿಲ್ಲ, ಅದಲ್ಲದೆ ಭಾರತದ ವಿದೇಶೀ ಸಾಲದ ಮೊತ್ತವೂ ಕಡಿಮೆ ಇರುವುದರಿಂದ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಲಾರದು. “ಮೇಕ್ ಇನ್ ಇಂಡಿಯಾ’ ಫಲಪ್ರದವಾಗಿ ಸ್ವಾವಲಂಬನೆಯ ಗುರಿಯತ್ತ ಮುಖ ಮಾಡಿದೆ.
ಇದೇ ಸಂದರ್ಭದಲ್ಲಿ ಕೃಷಿ ಪ್ರಧಾನವಾದ ನಮ್ಮ ಆರ್ಥಿಕ ವ್ಯವಸ್ಥೆ ಸದ್ಯ ದೇಶ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡುವ ವಿಶ್ವಾಸವನ್ನು ಮೂಡಿಸುತ್ತಿದೆ. ಈ ಬಾರಿಯ ಮುಂಗಾರು ಹಂಗಾಮು ಚೇತರಿಸಿಕೊಂಡಿರುವ ಕಾರಣ ಮತ್ತು ದೇಶದ ಬಹುತೇಕ ಜಲಾಶಯಗಳು ಭರ್ತಿಯಾಗಿರುವುದು ಆರ್ಥಿಕತೆಗೆ ಪೂರಕವಾಗಲಿದೆ.
– ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ