ದುಬಾೖ: ಟಿ20 ಕ್ರಿಕೆಟ್‌ನಲ್ಲಿ ಕೊನೆಯ ಸಲ ಭಾರತವನ್ನು ಮುನ್ನಡೆಸಿದ ವಿರಾಟ್ ಕೊಹ್ಲಿ ಮತ್ತು ಕೊನೆಯ ಸಲ ಮಾರ್ಗದರ್ಶನ ನೀಡಿದ ಕೋಚ್ ರವಿಶಾಸ್ತ್ರಿ ಅವರಿಗೆ ಗೆಲುವಿನ ವಿದಾಯ ಲಭಿಸಿದೆ.
ಕೊನೆಯ ಹಾಗೂ ಲೆಕ್ಕದ ಭರ್ತಿಯ ಸೂಪರ್-12 ಪಂದ್ಯದಲ್ಲಿ ಭಾರತ ನಮೀಬಿಯಾವನ್ನು 9 ವಿಕೆಟ್‌ಗಳಿಂದ ಮಣಿಸಿತು.ಬ್ಯಾಟಿಂಗಿಗೆ ಇಳಿಸಲ್ಪಟ್ಟ ನಮೀಬಿಯಾ 8 ವಿಕೆಟಿಗೆ 132 ರನ್ ಗಳಿಸಿದರೆ, ಭಾರತ 15.2 ಓವರ್‌ಗಳಲ್ಲಿ ಒಂದು ವಿಕೆಟಿಗೆ 136 ರನ್ ಬಾರಿಸಿತು.
ಚೇಸಿಂಗ್ ವೇಳೆ ರೋಹಿತ್ ಶರ್ಮ-ಕೆ.ಎಲ್. ರಾಹುಲ್ ಮೊದಲ ವಿಕೆಟಿಗೆ 86 ರನ್‌ಗಳ ಜತೆಯಾಟ ನಡೆಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ರೋಹಿತ್(56), ರಾಹುಲ್ (ಅಜೇಯ 54) ಅರ್ಧಶತಕ ಸಿಡಿಸಿ ಮಿಂಚಿದರು.
ನಮೀಬಿಯಾಕ್ಕೆ ಸ್ಟೀಫನ್ ಬಾರ್ಡ್ ಮತ್ತು ಮೈಕಲ್ ವಾನ್ ಲಿಂಜೆನ್ “ಕ್ವಿಕ್ ಸ್ಟಾರ್ಟ್’ ನೀಡಲು ಪ್ರಯತ್ನಿಸಿದರು. ಶಮಿ, ಬುಮ್ರಾ ದಾಳಿಯನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿ 4.4 ಓವರ್‌ಗಳಿಂದ 33 ರನ್ ಪೇರಿಸಿದರು. ಆದರೆ ಒಂದೇ ರನ್ ಅಂತರದಲ್ಲಿ 2 ವಿಕೆಟ್ ಕೆಡವಿದ ಭಾರತ ತಿರುಗೇಟು ನೀಡಿತು. 14 ರನ್ ಮಾಡಿದ ಲಿಂಜೆನ್ ಅವರನ್ನು ಬುಮ್ರಾ ಉರುಳಿಸಿದರೆ, ಕ್ರೆಗ್ ವಿಲಿಯಮ್ಸ್ ಖಾತೆ ತೆರೆಯುವ ಮೊದಲೇ ಜಡೇಜ ಅವರ ಮೊದಲ ಓವರ್‌ನಲ್ಲೇ ಸ್ಟಂಪ್ಡ್ ಆದರು. ಮುಂದಿನ ಓವರಿನಲ್ಲಿ ಬಾರ್ಡ್ (21) ವಿಕೆಟ್ ಕಿತ್ತ ಜಡೇಜ ನಮೀಬಿಯಕ್ಕೆ ಮತ್ತೊಂದು ಆಘಾತವಿಕ್ಕಿದರು.
ಆರ್. ಅಶ್ವಿನ್ ನಮೀಬಿಯಾದ ಮಧ್ಯಮ ಕ್ರಮಾಂಕದ ಮೇಲೆರಗಿ ಹೋದರು. ನಾಯಕ ಗೆರಾರ್ಡ್ ಎರಾಸ್ಮಸ್ (12), ಜಾನ್ ಈಟನ್ (5) ಮತ್ತು ಜೇನ್ ಗ್ರೀನ್ (0) ವಿಕೆಟ್ ಕಿತ್ತರು. ತಲಾ 3 ವಿಕೆಟ್ ಕೆಡವಿದ ಅಶ್ವಿನ್ ಮತ್ತು ರವೀಂದ್ರ ಜಡೇಜ ಹೆಚ್ಚಿನ ಯಶಸ್ಸು ಸಾಧಿಸಿದರು. ಬುಮ್ರಾಗೆ 2 ವಿಕೆಟ್ ಲಭಿಸಿತು. ಶಮಿ 39 ರನ್ ನೀಡಿ ದುಬಾರಿಯಾದರು.
ಇದನ್ನೂ ಓದಿ:ರಫೇಲ್ ಕಿಕ್‌ಬ್ಯಾಕ್ ತನಿಖೆ ನಡೆಸದಿರಲು ಸಿಬಿಐ ನಿರ್ಧಾರ: ಹೊಸ ವರದಿಯಲ್ಲಿ ಆರೋಪ
26 ರನ್ ಮಾಡಿದ ಡೇವಿಡ್ ವೀಸ್ ನಮೀಬಿಯಾ ಸರದಿಯ ಗರಿಷ್ಠ ಸ್ಕೋರರ್. 25 ಎಸೆತ ಎದುರಿಸಿದ ಅವರು 2 ಬೌಂಡರಿ ಹೊಡೆದರು.
ಈ ಪಂದ್ಯಕ್ಕಾಗಿ ಭಾರತ ಒಂದು ಬದಲಾವಣೆ ಮಾಡಿಕೊಂಡಿತು. ಸ್ಪಿನ್ನರ್ ವರುಣ್ ಚಕ್ರವರ್ತಿ ಬದಲು ರಾಹುಲ್ ಚಹರ್ ಅವರಿಗೆ ಅವಕಾಶ ನೀಡಿತು.
ಸಂಕ್ಷಿಪ್ತ ಸ್ಕೋರ್: ನಮೀಬಿಯಾ-8 ವಿಕೆಟಿಗೆ 132 (ವೀಸ್ 26, ಬಾರ್ಡ್ 21, ಫ್ರೈಲಿಂಕ್ ಔಟಾಗದೆ 15, ಜಡೇಜ 16ಕ್ಕೆ 3, ಅಶ್ವಿನ್ 20ಕ್ಕೆ 3, ಬುಮ್ರಾ 19ಕ್ಕೆ 2). ಭಾರತ-ಒಂದು ವಿಕೆಟಿಗೆ 136 (ರೋಹಿತ್ 56, ರಾಹುಲ್ ಔಟಾಗದೆ 54, ಸೂರ್ಯಕುಮಾರ್ ಅಜೇಯ 25, ಜಾನ್ ಫ್ರೈಲಿಂಕ್ 19ಕ್ಕೆ 1).
ಪಂದ್ಯಶ್ರೇಷ್ಠ: ರವೀಂದ್ರ ಜಡೇಜ.