Advertisement

ಸೇನಾ ವೆಚ್ಚ: ಟಾಪ್‌ 3ರಲ್ಲಿ ಭಾರತ

12:58 PM Apr 28, 2020 | sudhir |

ಹೊಸದಿಲ್ಲಿ: ಶಸ್ತ್ರಾಸ್ತ್ರಗಳು, ಸೇನಾ ಸಲಕರಣೆಗಳು ಸೇರಿದಂತೆ ದೇಶದ ರಕ್ಷಣಾ ಪಡೆಗಳಿಗಾಗಿ 2019ರಲ್ಲಿ ಅತಿ ಹೆಚ್ಚು ವೆಚ್ಚ ಮಾಡಿರುವ ಟಾಪ್‌ 3 ದೇಶಗಳ ಪೈಕಿ ಭಾರತವೂ ಸೇರಿದೆ. ಕಳೆದ ವರ್ಷ ಇಡೀ ಜಗತ್ತು 1,917 ಶತಕೋಟಿ ಡಾಲರ್‌ ಮೊತ್ತವನ್ನು ರಕ್ಷಣಾ ಸಲಕರಣೆಗಳು ಮತ್ತು ಶಸ್ತ್ರಾಸ್ತ್ರಗಳ ಖರೀದಿಗೆ ವೆಚ್ಚ ಮಾಡಿದೆ ಈ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ಚೀನ ಮತ್ತು ಭಾರತ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದಿವೆ ಎಂದು ಸ್ಟಾಕ್‌ಹೋಂ ಮೂಲದ ಸಿಪ್ರಿ (ಸ್ಟಾಕ್‌ಹೋಂ ಇಂಟರ್‌ನ್ಯಾಶನಲ್‌ ಪೀಸ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌) ಸಂಸ್ಥೆಯ ವರದಿ ಹೇಳಿದೆ.

Advertisement

10 ವರ್ಷಗಳಲ್ಲೇ ಅಧಿಕ: 2018ಕ್ಕೆ ಹೋಲಿಸಿದರೆ ರಕ್ಷಣಾ ಪಡೆಗಳಿಗೆ ಭಾರತ ಮಾಡಿದ ವೆಚ್ಚವು 2019ರಲ್ಲಿ ಶೇ.3.6 ಹೆಚ್ಚಳವಾಗಿದ್ದು, ಇದು ಕಳೆದ 10 ವರ್ಷಗಳಲ್ಲೇ ಅತಿ ಹೆಚ್ಚು ಎಂದೂ ವರದಿ ಹೇಳಿದೆ. ಈಗ ಕೋವಿಡ್ ವೈರಸ್‌ ವಿಶ್ವಾದ್ಯಂತ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ರಕ್ಷಣಾ ಪಡೆಗಳಿಗೆ ಮಾಡುವ ವೆಚ್ಚ ಗಣನೀಯವಾಗಿ ತಗ್ಗುವ ಸಾಧ್ಯತೆಯಿದೆ ಎಂದೂ ವರದಿಯಲ್ಲಿ ಉಲ್ಲೇಖೀಸಲಾಗಿದೆ.

ಕಾರಣವೇನು?: ನೆರೆರಾಷ್ಟ್ರಗಳಾದ ಪಾಕಿಸ್ಥಾನ, ಚೀನದ ಜತೆ ವೈಮನಸ್ಸು ಹೆಚ್ಚಾದ ಕಾರಣ ಭಾರತವು ಹೆಚ್ಚಿನ ಪ್ರಮಾಣದಲ್ಲಿ ಸೇನಾ ಪರಿಕರಗಳನ್ನು ಖರೀದಿಸಿರಬಹುದು ಎಂದು ಸಿಪ್ರಿ ಹಿರಿಯ ಸಂಶೋಧಕ ಸೀಮನ್‌ ಟಿ. ವೆಜೆಮನ್‌ ಅಂದಾಜಿಸಿದ್ದಾರೆ. ವಿಶ್ವದ ಪ್ರಬಲ ರಾಷ್ಟ್ರಗಳೊಂದಿಗಿನ ಸ್ಪರ್ಧೆಯೇ ಅಮೆರಿಕವು ಸೇನಾ ಸಲಕರಣೆಗೆ ಹೆಚ್ಚು ವೆಚ್ಚ ಮಾಡಲು ಕಾರಣ ಎಂದೂ ಅವರು ಹೇಳಿದ್ದಾರೆ. ಅತಿ ಹೆಚ್ಚು ವೆಚ್ಚ ಮಾಡಿದ ದೇಶಗಳ ಪಟ್ಟಿಯಲ್ಲಿ 4 , 5ನೇ ಸ್ಥಾನವನ್ನು ಕ್ರಮವಾಗಿ ರಷ್ಯಾ ಮತ್ತು ಸೌದಿ ಅರೇಬಿಯಾ ತನ್ನದಾಗಿಸಿಕೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next