Advertisement

ಭಾರತದ ವಿಶ್ವಕಪ್‌ ತಂಡ ಬಹುತೇಕ ಅಂತಿಮ

12:30 AM Feb 18, 2019 | Team Udayavani |

ಪ್ರವಾಸಿ ಆಸ್ಟ್ರೇಲಿಯ ವಿರುದ್ಧದ ಅಂತಿಮ 3 ಏಕದಿನ ಪಂದ್ಯಗಳಿಗಾಗಿ ಪ್ರಕಟಿಸಲಾದ ಭಾರತ ತಂಡ ಮುಂಬರುವ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿರುವುದು ಬಹುತೇಕ ಖಚಿತ. ಆದರೆ ಇದರಲ್ಲಿ ಎಡಗೈ ವೇಗಿ ಇಲ್ಲದಿರುವುದೊಂದು ಕೊರತೆ.

Advertisement

ಮಣಿಪಾಲ: ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ನಡೆಯಲಿರುವ 12ನೇ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾರತ ತಂಡದ ಸ್ವರೂಪ ಹೇಗಿದ್ದೀತು, ಈ ಪ್ರತಿಷ್ಠಿತ ಕೂಟದಲ್ಲಿ ಯಾರೆಲ್ಲ ಆಡಬಹುದು ಎಂಬ ಕುತೂಹಲ ಒಂದು ಹಂತಕ್ಕೆ ತಣಿದಿದೆ.
 
ಮುಂಬರುವ ಪ್ರವಾಸಿ ಆಸ್ಟ್ರೇಲಿಯ ವಿರುದ್ಧದ ಸರಣಿಗಾಗಿ ಭಾರತದ 2 ತಂಡಗಳನ್ನು ಪ್ರಕಟಿಸಲಾಗಿದೆ. ಮೊದಲೆರಡು ಪಂದ್ಯಗಳಿಗಾಗಿ ಒಂದು ತಂಡವಾದರೆ, ಕೊನೆಯ 3 ಪಂದ್ಯಗಳಿಗಾಗಿ ಮತ್ತೂಂದು ತಂಡ. ಇದರಲ್ಲಿ ಕೊನೆಯ ತಂಡವೇ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವುದು ಬಹುತೇಕ ಖಚಿತ ಎಂಬುದು ಬಹುತೇಕ ಮಂದಿಯ ಲೆಕ್ಕಾಚಾರ.

ಈ ತಂಡದಲ್ಲಿ 15 ಆಟಗಾರರಿದ್ದಾರೆ. ಬ್ಯಾಟ್ಸ್‌ಮನ್‌, ಬೌಲರ್, ಕೀಪರ್, ಆಲ್‌ರೌಂಡರ್‌ಗಳಿಂದ ತಂಡ ಸಮತೋಲನ ಗೊಂಡಿದೆಯಾದರೂ ಎಡಗೈ ವೇಗಿಗಳಿಲ್ಲ ದಿರುವುದೊಂದು ಕೊರತೆ. ಇಂಗ್ಲೆಂಡ್‌ ಟ್ರ್ಯಾಕ್‌ಗಳಲ್ಲಿ ಎಡಗೈ ಬೌಲರ್ ಟ್ರಂಪ್‌ಕಾರ್ಡ್‌ ಆಗುವ ಸಾಧ್ಯತೆ ಇದ್ದೇ ಇದೆ. ಹಾಗೆಯೇ ಉಳಿದ ತಂಡಗಳಲ್ಲಿ ಬೌಲ್ಟ್, ಸ್ಟಾರ್ಕ್‌, ಅಮಿರ್‌ ಮೊದಲಾದ ಎಡಗೈ ವೇಗಿಗಳಿರುವುದರಿಂದ ಭಾರತಕ್ಕೆ ಇದೊಂದು ಕೊರತೆ ಎಂದೇ ಹೇಳಬೇಕಾಗುತ್ತದೆ. 

ಮೊನ್ನೆಯ ಆಯ್ಕೆಗೂ ಮುನ್ನ ಸುದ್ದಿಯಲ್ಲಿದ್ದ ಉನಾದ್ಕತ್‌, ಖಲೀಲ್‌ ಅಹ್ಮದ್‌ ಇಬ್ಬರೂ ಆಸ್ಟ್ರೇಲಿಯ ಸರಣಿಗೆ ಆಯ್ಕೆಯಾಗದಿದ್ದುದು ಅಚ್ಚರಿ. ಆದರೆ ವಿಶ್ವಕಪ್‌ ದೃಷ್ಟಿಯಿಂದ ಇನ್ನೂ ಮೂವರು ಮೀಸಲು ಯಾದಿಯಲ್ಲಿದ್ದಾರೆ ಎಂದು ಪ್ರಸಾದ್‌ ಹೇಳಿದ್ದು, ಇದರಲ್ಲಿ ಎಡಗೈ ವೇಗಿಗಳೂ ಇರಬಹುದು ಎಂದು ಭಾವಿಸಬಹುದಾಗಿದೆ.

ಸರಣಿ ಗೆಲುವು ಅನಿವಾರ್ಯ
ನಿಯಮಾವಳಿಯಂತೆ ಪಂದ್ಯಾವಳಿಗೆ ಕನಿಷ್ಠ ಒಂದು ತಿಂಗಳಿರುವಾಗ ತಂಡದ ಅಂತಿಮ ಯಾದಿಯನ್ನು ಐಸಿಸಿಗೆ ಕಳುಹಿಸಬೇಕಾಗುತ್ತದೆ. ಅನಂತರ ಇದರಲ್ಲಿ ಬದಲಾವಣೆ ಸಂಭವಿಸುವುದೇನಿದ್ದರೂ ತುರ್ತು ಸಂದರ್ಭಗಳಲ್ಲಿ ಮಾತ್ರ. ಇದಕ್ಕೆ ಐಸಿಸಿ ತಾಂತ್ರಿಕ ಸಮಿತಿಯ ಒಪ್ಪಿಗೆ ಅಗತ್ಯ. ಸದ್ಯ ಭಾರತದ ಮುಂದಿರುವುದು ಆಸ್ಟ್ರೇಲಿಯ ವಿರುದ್ಧದ ಸರಣಿ ಮಾತ್ರ. ಟೀಮ್‌ ಇಂಡಿಯಾದ ಎಲ್ಲ ಆಟಗಾರರಿಗೂ ಈ ಸರಣಿ ಅಗ್ನಿಪರೀಕ್ಷೆ. ವಿಶ್ವಕಪ್‌ನಲ್ಲಿ ಮಿಂಚಬಹುದೆಂಬ ನಂಬಿಕೆಯಿಂದ ಈ ಕ್ರಿಕೆಟಿಗರನ್ನು ಆರಿಸಲಾಗಿದೆ. ಎಲ್ಲರೂ ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನ ನೀಡುವುದು ಅನಿವಾರ್ಯ. ಸರಣಿ ಗೆಲುವು ಕೂಡ ಅತ್ಯಗತ್ಯ. ತವರಲ್ಲೇ ಸೋತ ಕಾಂಗರೂ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದೆ. ಕಾರಣ, ಅದು ಹಾಲಿ ವಿಶ್ವ ಚಾಂಪಿಯನ್‌. ಅಕಸ್ಮಾತ್‌ ಸರಣಿ ಸೋತರೆ ಭಾರತದ ವಿಶ್ವಕಪ್‌ ತಯಾರಿಗೆ ದೊಡ್ಡ ಹಿನ್ನಡೆಯಾಗಲಿದೆ. ಇದಕ್ಕೆ ಐಪಿಎಲ್‌ನಲ್ಲಿ ಪರಿಹಾರ ಹುಡುಕುವುದು ಸೂಕ್ತವಲ್ಲ. ಆಗ ವಿಶ್ವಕಪ್‌ ತಂಡದ ಸ್ವರೂಪ ಮತ್ತೆ ಬದಲಾಗಬೇಕಾಗುತ್ತದೆ!

Advertisement

ವಿಶ್ವಕಪ್‌ ಸಂಭಾವ್ಯ ತಂಡ
– ಬ್ಯಾಟ್ಸ್‌ಮನ್‌: ರೋಹಿತ್‌ ಶರ್ಮ, ಶಿಖರ್‌ ಧವನ್‌, ಕೆ.ಎಲ್‌. ರಾಹುಲ್‌, ವಿರಾಟ್‌ ಕೊಹ್ಲಿ, ಅಂಬಾಟಿ ರಾಯುಡು, ಕೇದಾರ್‌ ಜಾಧವ್‌.
– ವಿಕೆಟ್‌ ಕೀಪರ್: ಮಹೇಂದ್ರ ಸಿಂಗ್‌ ಧೋನಿ, ರಿಷಬ್‌ ಪಂತ್‌.
– ಆಲ್‌ರೌಂಡರ್: ಹಾರ್ದಿಕ್‌ ಪಾಂಡ್ಯ, ವಿಜಯ್‌ ಶಂಕರ್‌.
– ಫಾಸ್ಟ್‌ ಬೌಲರ್: ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಶಮಿ.
– ಸ್ಪಿನ್ನರ್‌: ಕುಲದೀಪ್‌ ಯಾದವ್‌, ಯಜುವೇಂದ್ರ ಚಾಹಲ್‌.

Advertisement

Udayavani is now on Telegram. Click here to join our channel and stay updated with the latest news.

Next