Advertisement

ಹೊಸ ಹಾಟ್‌ಸ್ಪಾಟ್‌ಗಳತ್ತ ವೈರಾಣು ; ಮಹಾನಗರಗಳ ಬಳಿಕ ಜಿಲ್ಲಾ ಕೇಂದ್ರಗಳತ್ತ ದಾಪುಗಾಲು

09:12 AM Apr 09, 2020 | Hari Prasad |

ಹೊಸದಿಲ್ಲಿ: ಆಸ್ಪತ್ರೆಗಳ ಒಳಗೆ ವೈದ್ಯರು, ಆರೋಗ್ಯ ಸಿಬಂದಿ, ಹೊರಗೆ ಅಸಂಖ್ಯ ಪೊಲೀಸರು ಕೋವಿಡ್ 19 ಸೋಂಕು ಹರಡದಂತೆ ತಡೆಯಲು ಶ್ರಮಿಸುತ್ತಿದ್ದರೂ, ಈ ಹಠಮಾರಿ ವೈರಾಣು ದೇಶದ ವಿವಿಧ ರಾಜ್ಯಗಳಲ್ಲಿ ಹೊಸ ಹೊಸ ಹಾಟ್‌ಸ್ಪಾಟ್‌ಗಳನ್ನು ಸೃಷ್ಟಿಸುತ್ತಿದೆ.

Advertisement

ಮಾರಕ ಕೋವಿಡ್ 19 ವೈರಸ್‌ ಸೋಂಕು ದೇಶದಲ್ಲಿ ಬಹು ಸಂಖ್ಯೆಯ ಜನರಿಗೆ ಹರಡದಂತೆ ಆರಂಭದಿಂದಲೇ ಲಾಕ್‌ ಡೌನ್‌ ಸೇರಿ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡ ಹೊರತಾಗ್ಯೂ ವಾರದಿಂದೀಚೆಗೆ ವಿವಿಧ ರಾಜ್ಯಗಳಲ್ಲಿ ಹೆಚ್ಚು ಹೆಚ್ಚು ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಈವರೆಗೆ ದೆಹಲಿ, ಮುಂಬಯಿ ರೀತಿಯ ಮಹಾನಗರಗಳನ್ನೇ ನೆಚ್ಚಿಕೊಂಡಿದ್ದ ಕೋವಿಡ್ 19 ವೈರಾಣು, ಇದೀಗ ಹೊಸ ಜಿಲ್ಲೆ, ನಗರಗಳನ್ನು ಹುಡುಕಿಕೊಂಡು ಹೊರಟಿದೆ. ಸೋಮವಾರ ಸಂಜೆ ಹೊತ್ತಿಗೆ ದೇಶದ 284 ಜಿಲ್ಲೆಗಳಲ್ಲಿ ವೈರಾಣುವಿನ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿವೆ. ಆತಂಕದ ವಿಷಯವೇನೆಂದರೆ ಎ.4ರಿಂದ ಈಚೆಗೆ ಈ ಪಟ್ಟಿಗೆ ಹೊಸದಾಗಿ 73 ಜಿಲ್ಲೆಗಳು ಸೇರ್ಪಡೆಯಾಗಿವೆ. ಇದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಿದ್ದೆ ಕೆಡಿಸಿದೆ.

ಈ ನಡುವೆ ಸೋಂಕು ವ್ಯಾಪಕವಾಗಿ ಹರಡುವ ಅಪಾಯ ಹೆಚ್ಚಾಗಿದೆ ಎಂದಿರುವ ಅಧಿಕಾರಿಗಳು, ಸೋಂಕಿನ ಸೊಲ್ಲೇ ಇಲ್ಲದ ರಾಜಸ್ಥಾನದ ಬಿಲ್ವಾರ ಜಿಲ್ಲೆ ದೇಶದ ಅಗ್ರ 10 ಹಾಟ್‌ಸ್ಪಾಟ್‌ಗಳಲ್ಲಿ ಒಂದಾಗಿರುವುದು ಇದಕ್ಕೆ ಸಾಕ್ಷಿ ಎಂದು ಹೇಳುತ್ತಿರುವುದು ದುಗುಡವನ್ನು ದುಪ್ಪಟ್ಟಾಗಿಸಿದೆ.

ಪ್ರಮುಖವಾಗಿ ಕರ್ನಾಟಕ, ತೆಲಂಗಾಣ, ಕೇರಳ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ ದೆಹಲಿ, ಪಂಜಾಬ್‌ ರಾಜ್ಯಗಳಲ್ಲಿ ಕೋವಿಡ್ 19ನ ಹೊಸ ಹಾಟ್‌ಸ್ಪಾಟ್‌ಗಳು ಹುಟ್ಟಿಕೊಳ್ಳುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್‌ ಆತಂಕ ವ್ಯಕ್ತಪಡಿಸಿದ್ದಾರೆ.

Advertisement

ಪಟ್ಟಿಯಲ್ಲಿದೆ ದ.ಕ.ಜಿಲ್ಲೆ
ಕೇಂದ್ರ ಸರಕಾರ ಸಿದ್ಧಪಡಿಸಿರುವ ಕೋವಿಡ್ 19 ವೈರಸ್‌ ಹಾಟ್‌ಸ್ಪಾಟ್‌ಗಳ ಪಟ್ಟಿಗೆ ಸೋಮವಾರ ಹೊಸ ಜಿಲ್ಲೆಗಳು ಸೇರ್ಪಡೆಗೊಂಡಿವೆ. ಈಗ ಗುರುತಿಸಿರುವ ಹೊಸ  ಈ ಜಿಲ್ಲೆಗಳಲ್ಲಿ 11 ರಿಂದ 20 ಪ್ರಕರಣಗಳು ಕಾಣಿಸಿಕೊಂಡಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಈ ಪಟ್ಟಿಯಲ್ಲಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯೂ ಇರುವುದು ರಾಜ್ಯ ಸರಕಾರದ ಚಿಂತೆ ಹೆಚ್ಚಿಸಿದೆ.

ಹಾಟ್‌ ಸ್ಪಾಟ್‌ಗಳ ಗುರುತಿಸುವುದೇ ಸವಾಲು
ದೇಶದಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿರುವ ಕಾರಣ, ಇಂತಿಷ್ಟೇ ಹಾಟ್‌ ಸ್ಪಾಟ್‌ಗಳಿವೆ ಎಂದು ನಿರ್ದಿಷ್ಟವಾಗಿ ಗುರುತಿಸುವುದು ಆರೋಗ್ಯ ಇಲಾಖೆಗೆ ಸವಾಲಾಗಿದೆ. ಹರಡುವಿಕೆಯಲ್ಲಿ ಎಚ್‌1ಎನ್‌1 ಸಾಂಕ್ರಾಮಿಕ ರೋಗವನ್ನೇ ಕೋವಿಡ್ 19 ಹೋಲುತ್ತಿದೆ. ಇದರೊಂದಿಗೆ ದೇಶದೆಲ್ಲೆಡೆ ಈ ವೈರಾಣು ಒಂದೇ ರೀತಿ ಹಬ್ಬುತ್ತಿಲ್ಲ. ಅದರ ಪ್ರಭಾವ ಪ್ರದೇಶವಾರು ವಿಭಿನ್ನವಾಗಿರುವುದೂ ಹಾಟ್‌ ಸ್ಪಾಟ್‌ಗಳನ್ನು ಗುರುತಿಸಲು ತೊಡಕಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೋಂಕು ಪತ್ತೆಗೆ 10 ಲಕ್ಷ ಪಿಸಿಆರ್‌ ಟೆಸ್ಟ್‌ ಕಿಟ್‌
ಕೋವಿಡ್ 19 ಸೋಂಕು ಪತ್ತೆಗೆ 10 ಲಕ್ಷ ಆರ್‌ಟಿ-ಪಿಸಿಆರ್‌ ಹಾಗೂ 5 ಲಕ್ಷ ನಿರೋಧಕ ಟೆಸ್ಟ್‌ ಕಿಟ್‌ಗಳು ಬರಲಿದ್ದು, ದೇಶದಲ್ಲಿ ವ್ಯಾಪಕವಾಗಿ ಸೋಂಕು ಪತ್ತೆ ಪರೀಕ್ಷೆ ನಡೆಯಲಿದೆ. ಸರ್ಕಾರಿ ಹಾಗೂ ಖಾಸಗಿಯಾಗಿ 200 ಲ್ಯಾಬ್‌ ತೆರೆಯಲು ಭಾರತೀಯ ವೈದ್ಯಕೀಯ ಸಂಶೋಧನೆ ಮಂಡಳಿ ಅನುಮೋದನೆ ನೀಡಿದೆ.

ಪ್ರಾರಂಭದಲ್ಲಿ ದಿನಕ್ಕೆ 60-70 ಸೋಂಕು ಪರೀಕ್ಷೆ ನಡೆಸಲಾಗುತ್ತಿತ್ತು. ಇದೀಗ ಈ ಸಂಖ್ಯೆ 13 ಸಾವಿರ ದಾಟಿದೆ. ದಿನದ 24 ಗಂಟೆಗಳ ಕಾಲ 2 ಪಾಳಿಯಲ್ಲಿ ಕಾರ್ಯನಿರ್ವಹಿಸಿದರೆ ದಿನಕ್ಕೆ 25 ಸಾವಿರ ಪರೀಕ್ಷೆ ನಡೆಸಬಹುದು ಎಂದು ಮಂಡಳಿ ತಿಳಿಸಿದೆ.

ಪ್ರತಿದಿನ ಸಾವಿರ ಪಿಪಿಇ ಉತ್ಪಾದನೆ ಗುರಿ
 ಪ್ರತಿದಿನ 1000 ಪಿಪಿಇ (ವೈಯಕ್ತಿಕ ಸುರಕ್ಷಾ ಸಾಧನ)ಗಳನ್ನು ಉತ್ಪಾದಿಸುವಂತೆ ತನ್ನ 17 ಕಾರ್ಯಾಗಾರಗಳಿಗೆ ರೈಲ್ವೆ ಇಲಾಖೆ ಸೂಚಿಸಿದೆ. ಡಿಆರ್‌ಡಿಓದಿಂದ ಅನುಮತಿ ಪಡೆದುಕೊಂಡಿರುವ ರೈಲ್ವೆ ಇಲಾಖೆ, ತನಗೆ ಬೇಕಾದ ಪಿಪಿಇಗಳನ್ನು ತಾನೇ ಉತ್ಪಾದಿಸುತ್ತಿದೆ.

ರೈಲ್ವೆ ಇಲಾಖೆಯ ಆಸ್ಪತ್ರೆಗಳಲ್ಲಿ ಕೋವಿಡ್ 19ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಹಾಗೂ ಇತರ ವೈದ್ಯ ಸಹಾಯಕ ಸಿಬಂದಿಗಳಿಗೆ ಪಿಪಿಇ ಅತಿ ಅಗತ್ಯವಾಗಿದೆ. ಇಲಾಖೆಗೆ ಸೇರಿದ 17 ಕಾರ್ಯಾಗಾರಗಳಲ್ಲಿ ಇವುಗಳನ್ನು ಉತ್ಪಾದಿಸಲಾಗುತ್ತಿದೆ. ಪ್ರತಿದಿನ ಸಾವಿರ ಪಿಪಿಇ ಉತ್ಪಾದಿಸುವಂತೆ ತಿಳಿಸಲಾಗಿದೆ

ಸೋಂಕಿತರು 5 ಸಾವಿರದ ಸಮೀಪಕ್ಕೆ
ದೇಶಾದ್ಯಂತ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಮಂಗಳವಾರವೂ ಹೆಚ್ಚಳಕಂಡಿದ್ದು, 5 ಸಾವಿರದ ಸಮೀಪಕ್ಕೆ ತಲುಪಿದೆ. ಮಂಗಳವಾರ ಮತ್ತೆ 8 ಮಂದಿ ಸಾವಿಗೀಡಾಗಿದ್ದು, ಮೃತರ ಸಂಖ್ಯೆ ಒಟ್ಟು 141 ಆಗಿದೆ. ಅದೇ ರೀತಿ, 24 ಗಂಟೆಗಳ ಅವಧಿಯಲ್ಲಿ 354 ಸೋಂಕಿತರು ಪತ್ತೆಯಾಗಿದ್ದು, ಒಟ್ಟಾರೆ 4917 ಮಂದಿಗೆ ಸೋಂಕು ದೃಢಪಟ್ಟಿದೆ.

ಮಹಾರಾಷ್ಟ್ರದಲ್ಲಿ ಹೊಸದಾಗಿ 23 ಪ್ರಕರಣಗಳು ದೃಢವಾಗಿ, ಸೋಂಕಿತರ ಸಂಖ್ಯೆ 891 ಆಗಿದೆ. ರಾಜಸ್ಥಾನದಲ್ಲಿ ಒಂದೇ ದಿನ 24, ಮಧ್ಯಪ್ರದೇಶ ಹಾಗೂ ಕರ್ನಾಟಕದಲ್ಲಿ ತಲಾ 12, ಗುಜರಾತ್‌ ನಲ್ಲಿ 19, ಹರ್ಯಾಣದಲ್ಲಿ 23 ಮಂದಿಗೆ ಸೋಂಕು ತಗುಲಿದೆ.

ಜಾಗತಿಕ ಸಾವು 80,000 ಅಧಿಕ
ಕೋವಿಡ್ 19 ವಿಶ್ವಾದ್ಯಂತ 80 ಸಾವಿರಕ್ಕೂ ಅಧಿಕ ಮಂದಿಯ ಪ್ರಾಣವನ್ನು ಬಲಿಪಡೆದುಕೊಂಡಿದೆ. ಈ ಪೈಕಿ ಅತ್ಯಧಿಕ ಮಂದಿ ಸಾವಿಗೀಡಾಗಿರುವುದು ಯುರೋಪ್‌ನಲ್ಲಿ. ಇಲ್ಲಿ 53,928 ಜನರು ಮೃತಪಟ್ಟಿದ್ದಾರೆ.

ಮಂಗಳವಾರ ಒಂದೇ ದಿನ ಸ್ಪೇನ್‌ ನಲ್ಲಿ 743 ಮಂದಿ ಕೊನೆಯುಸಿರೆಳೆದಿದ್ದಾರೆ, ಸತತ 4 ದಿನಗಳಿಂದ ಇಲ್ಲಿ ಸಾವಿನ ಸಂಖ್ಯೆ ಸ್ವಲ್ಪಮಟ್ಟಿಗೆ ಇಳಿಮುಖವಾಗಿತ್ತು. ಆದರೆ, ಮಂಗಳವಾರ ಭಾರಿ ಪ್ರಮಾಣದ ಸಾವು ಸಂಭವಿಸಿರುವ ಕಾರಣ, ಒಟ್ಟು ಸಾವಿನ ಸಂಖ್ಯೆ 13,798ಕ್ಕೇರಿ ದಂತಾಗಿದೆ. ಯು.ಕೆಯಲ್ಲಿ 786 ಮಂದಿ ಅಸುನೀಗಿದ್ದಾರೆ. ಇದೇ ವೇಳೆ, ಇರಾನ್‌ ನಲ್ಲಿ ಮಂಗಳವಾರ ಒಂದೇ ದಿನ 133 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 3,872ಕ್ಕೆ ತಲುಪಿದೆ.

ಪ್ರತಿಯೊಂದು ಹೊಸ ಪ್ರಕರಣವೂ ನಮಗೆ ಒಂದೊಂದು ಹಾಟ್‌ಸ್ಪಾಟ್‌ ಇದ್ದಂತೆ. ಸೋಂಕು ಹೊಸದಾಗಿ ಕಾಣಿಸಿಕೊಂಡಿರುವ ಪ್ರದೇಶಗಳಲ್ಲಿ ಪರೀಕ್ಷೆ ಪ್ರಮಾಣವನ್ನು ದ್ವಿಗುಣಗೊಳಿಸುತ್ತೇವೆ.

– ಲವ ಅಗರ್ವಾಲ್‌, ಜಂಟಿ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next