ಕೆಬೆರಾ: ವನಿತಾ ವಿಶ್ವಕಪ್ ಪಂದ್ಯಾವಳಿಯ 3ನೇ ಮುಖಾಮುಖಿಯಲ್ಲಿ ಭಾರತ ಪ್ರಬಲ ಇಂಗ್ಲೆಂಡ್‌ಗೆ 11 ರನ್ನುಗಳಿಂದ ಶರಣಾಗಿ ಮೊದಲ ಸೋಲನುಭವಿಸಿದೆ. ಇಂಗ್ಲೆಂಡ್ ಮೂರನ್ನೂ ಗೆದ್ದು “ಬಿ’ ವಿಭಾಗದಿಂದ ಸೆಮಿಫೈನಲ್ ಪ್ರವೇಶವನ್ನು ಬಹುತೇಕ ಖಚಿತಗೊಳಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ 7 ವಿಕೆಟಿಗೆ 151 ರನ್ ಪೇರಿಸಿದರೆ, ಭಾರತ 5ಕ್ಕೆ 140 ರನ್ ಮಾಡಿತು. ಕೌರ್ ಪಡೆಯ ಅಂತಿಮ ಎದುರಾಳಿ ಐರ್ಲೆಂಡ್. ಸೋಮವಾರದ ಈ ಪಂದ್ಯವನ್ನು ಭಾರತ ಗೆಲ್ಲಲೇಬೇಕಿದೆ.
ದೊಡ್ಡ ಮೊತ್ತದ ಚೇಸಿಂಗ್ ವೇಳೆ ಭಾರತ ಬಿರುಸಿನ ಆರಂಭ ಪಡೆಯಲು ವಿಫಲವಾಯಿತು. ಮಂಧನಾ ಒಂದು ಕಡೆ ಕ್ರೀಸ್ ಆಕ್ರಮಿಸಿಕೊಂಡು ಅರ್ಧ ಶತಕ (52) ಬಾರಿಸಿದರೂ ಅಗ್ರ ಕ್ರಮಾಂಕದ ಉಳಿದ ಬ್ಯಾಟರ್ ನಿಲ್ಲಲಿಲ್ಲ. ಶಫಾಲಿ (8), ಜೆಮಿಮಾ (13), ಕೌರ್ (4) ಆಟ ಬೇಗನೇ ಮುಗಿಯಿತು. ರಿಚಾ ಘೋಷ್ ಆಗಮಿಸುವಾಗ ಓವರ್‌ಗೆ 12 ರನ್ ಗಳಿಸಬೇಕಾದ ಒತ್ತಡವಿತ್ತು. ರಿಚಾ 34 ಎಸೆತಗಳಿಂದ 47 ರನ್ ಮಾಡಿ ಅಜೇಯರಾಗಿ ಉಳಿದರು (4 ಫೋರ್, 2 ಸಿಕ್ಸರ್).
5 ವಿಕೆಟ್ ಕಿತ್ತ ರೇಣುಕಾ
ವೇಗಿ ರೇಣುಕಾ ಸಿಂಗ್ 15 ರನ್ನಿಗೆ 5 ವಿಕೆಟ್ ಕಿತ್ತು ಜೀವನಶ್ರೇಷ್ಠ ಬೌಲಿಂಗ್ ದಾಖಲಿಸಿದರು. ಇಂಗ್ಲೆಂಡ್‌ನ ಮೊದಲ ಮೂರೂ ವಿಕೆಟ್ ರೇಣುಕಾ ಪಾಲಾದವು. 3ನೇ ಎಸೆತದಲ್ಲೇ ಡೇನಿಯಲ್ ವ್ಯಾಟ್‌ಗೆ (0) ಪೆವಿಲಿಯನ್ ಹಾದಿ ತೋರಿಸಿದರು. ಮುಂದಿನ ಓವರ್‌ನ ಮೊದಲ ಎಸೆತದಲ್ಲೇ ಅಲೈಸ್ ಕ್ಯಾಪ್ಸಿ (3) ವಿಕೆಟ್ ಕಿತ್ತರು. ಬಳಿಕ ಓಪನರ್ ಸೋಫಿಯಾ ಡಂಕ್ಲಿ (10) ಅವರನ್ನು ಬೌಲ್ಡ್ ಮಾಡಿದರು.
Related Articles
5ನೇ ಓವರ್‌ನಲ್ಲಿ 29ಕ್ಕೆ 3 ವಿಕೆಟ್ ಬಿದ್ದ ಬಳಿಕ ನಥಾಲಿ ಸ್ಕಿವರ್ ಮತ್ತು ನಾಯಕಿ ಹೀತರ್ ನೈಟ್ (28) 51 ರನ್ ಜತೆಯಾಟ ನಿಭಾಯಿಸಿದರು. ಈ ಜೋಡಿಯನ್ನು ಬೇರ್ಪಡಿಸಿದವರು ಶಿಖಾ ಪಂಡೆ. ಬಳಿಕ ಸ್ಕಿವರ್-ಜೋನ್ಸ್ 40 ರನ್ ಜತೆಯಾಟ ನಡೆಸಿದರು.
ಇಂಗ್ಲೆಂಡ್ ಪರ ನಥಾಲಿ ಸ್ಕಿವರ್ 50, ಆ್ಯಮಿ ಜೋನ್ಸ್ 40 ಮತ್ತು ನಾಯಕಿ ಹೀತರ್ ನೈಟ್ 28 ರನ್ ಬಾರಿಸಿ ತಂಡದ ಮೊತ್ತವನ್ನು ನೂರೈವತ್ತರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್-7 ವಿಕೆಟಿಗೆ 151 (ಸ್ಕಿವರ್ 50, ಜೋನ್ಸ್ 40, ನೈಟ್ 28, ರೇಣುಕಾ 15ಕ್ಕೆ 5). ಭಾರತ-5 ವಿಕೆಟಿಗೆ 140 (ಮಂಧನಾ 52, ರಿಚಾ ಔಟಾಗದೆ 47, ಗ್ಲೆನ್ 27ಕ್ಕೆ 2).