Advertisement

ಚೀನಗೆ ಅಗ್ನಿ ಪರೀಕ್ಷೆ 

10:50 PM Oct 28, 2021 | Team Udayavani |

ಕಳೆದ ಆಗಸ್ಟ್‌ನಲ್ಲಿ ನೆರೆಯ ಚೀನ ದೇಶ ಹೈಪರ್‌ಸಾನಿಕ್‌ ಕ್ಷಿಪಣಿಯೊಂದನ್ನು ಪರೀಕ್ಷೆ ನಡೆಸಿದೆ. ಇದನ್ನು ಭಾರತವನ್ನೇ ಗುರಿಯಾಗಿಸಿಕೊಂಡು ನಡೆಸಲಾಗಿದೆ ಎಂದು ರಕ್ಷಣ ವಲಯದ ತಜ್ಞರ ಅಭಿಪ್ರಾಯ. ಇದಕ್ಕೆ ಪ್ರತಿಯಾಗಿ ಭಾರತವೂ ಬುಧವಾರ ಅಗ್ನಿ (ಐಸಿಬಿಎಂ) –  5 ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ.

Advertisement

5,000 ಕಿ.ಮೀ. ವ್ಯಾಪ್ತಿ :

ಕಳೆದ ಮೂರು ವರ್ಷಗಳ ಹಿಂದೆಯೇ ಅಗ್ನಿ-5 ಕ್ಷಿಪಣಿಯನ್ನು ಭಾರತ ಯಶಸ್ವಿಯಾಗಿ ಪರೀಕ್ಷೆ ನಡೆಸಿತ್ತು. ಆದರೆ ಬುಧವಾರ ಅಗ್ನಿ-5ನ ಅಪ್‌ಡೇಟ್‌ ವರ್ಷನ್‌ ಆಗಿರುವ ಇಂಟರ್‌ಕಾಂಟಿನೆಂಟಲ್‌ ಬ್ಯಾಲೆಸ್ಟಿಕ್‌ ಮಿಸೈಲ್‌(ಐಸಿಬಿಎಂ) ಅನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಇದು 5 ಸಾವಿರ ಕಿ.ಮೀ. ದೂರದ ವರೆಗೆ ಹೋಗಬಲ್ಲದು. ಹಾಗೆಯೇ ಅಣ್ವಸ್ತ್ರ ಸಿಡಿತಲೆಯನ್ನು ಹೊತ್ತು ಸಾಗುವ ಸಾಮರ್ಥ್ಯ ಹೊಂದಿದೆ.

ಅಗ್ನಿ-5ನ ಮಹತ್ವವೇನು? :

ಅಗ್ನಿ-5 ಕ್ಷಿಪಣಿ ನೆಲದಿಂದ ನೆಲಕ್ಕೆ ಚಿಮ್ಮುವ ಕ್ಷಿಪಣಿಯಾಗಿದೆ. ನಿರ್ದಿಷ್ಟವಾಗಿ 5,000 ಕಿ.ಮೀ. ದೂರದಲ್ಲಿರುವ ಟಾರ್ಗೆಟ್‌ಗೆ ಹೋಗಿ ಅಪ್ಪಳಿಸಲಿದೆ. 5,000 ಕಿ.ಮೀ. ಎಂದರೆ, ಇಡೀ ಚೀನ ದೇಶದ ಯಾವುದೇ ಭಾಗವನ್ನು ಅಗ್ನಿ-5 ತಲುಪಬಲ್ಲುದು. ಅದರಲ್ಲೂ ಐಸಿಬಿಎಂ 5,500 ಕಿ.ಮೀ. ದೂರದ ವರೆಗೂ ಸಾಗಬಲ್ಲುದು. ಹೀಗಾಗಿಯೇ ಇದು ಆಫ್ರಿಕಾ ಮತ್ತು ಯೂರೋಪ್‌ನ ಯಾವುದೇ ಭಾಗವನ್ನು ಬೇಕಾದರೂ ಮುಟ್ಟಬಲ್ಲುದು.

Advertisement

8,000 ಕಿ.ಮೀ. ದೂರಕ್ಕೆ? :

ಕೇಂದ್ರ ಸರಕಾರ ಹೇಳಿರುವ ಪ್ರಕಾರ, ಈ ಕ್ಷಿಪಣಿ 5,000 ಕಿ.ಮೀ. ದೂರಕ್ಕೆ ಸಾಗಬಲ್ಲುದು. ಆದರೆ ಕೆಲವು ವರದಿಗಳ ಪ್ರಕಾರ, ಈ ಕ್ಷಿಪಣಿಯು 8,000 ಕಿ.ಮೀ. ದೂರದ ಟಾರ್ಗೆಟ್‌ಗೂ ಅಪ್ಪಳಿಸಬಲ್ಲುದು. ಅಲ್ಲದೇ, 1,500 ಕೆ.ಜಿ. ಅಣ್ವಸ್ತ್ರ ಸಿಡಿತಲೆಯನ್ನೂ ಹೊತ್ತೂಯ್ಯಬಲ್ಲುದು.

ಭಾರತಕ್ಕೆ ಏಕೆ ಇದು ಮಹತ್ವದ್ದು? :

ಅಗ್ನಿ-5 ಕ್ಷಿಪಣಿ ಭಾರತದ ರಕ್ಷಣ ವ್ಯವಸ್ಥೆಗೆ ಅತ್ಯಗತ್ಯವಾಗಿ ಬೇಕಾಗಿರುವಂಥದ್ದು. ಇದನ್ನು ರಸ್ತೆ ಅಥವಾ ರೈಲು ಫ್ಲಾಟ್‌ಫಾರ್ಮ್ನಿಂದಲೂ ಲಾಂಚ್‌ ಮಾಡಬಹುದು. ಅಲ್ಲದೇ ಅತ್ಯಂತ ಶೀಘ್ರವಾಗಿ ಎಲ್ಲಿ ಬೇಕೋ ಅಲ್ಲಿಗೆ ತೆಗೆದುಕೊಂಡು ಹೋಗಿ ನಿಯೋಜನೆ ಮಾಡಬಹುದು. ಜತೆಗೆ ಐಸಿಬಿಎಂ ತಂತ್ರಜ್ಞಾನ ಅಳವಡಿಕೆಯಾಗಿರುವ ಕ್ಷಿಪಣಿ ಹೊಂದಿರುವ ಕೆಲವೇ ಕೆಲವು ದೇಶಗಳಲ್ಲಿ ಭಾರತವೂ ಒಂದು ಎಂಬ ಹೆಗ್ಗಳಿಕೆಗೂ ಪಾತ್ರವಾದಂತಾಗಿದೆ. ಸದ್ಯ ಈ ತಂತ್ರಜ್ಞಾನದ ಕ್ಷಿಪಣಿಗಳು ಅಮೆರಿಕ, ರಷ್ಯಾ ಮತ್ತು ಚೀನದಲ್ಲಿ ಮಾತ್ರ ಇವೆ.

ಐಸಿಬಿಎಂ ಅಂದರೇನು? :

ಇಂಟರ್‌ಕಾಂಟಿನೆಂಟಲ್‌ ಬ್ಯಾಲೆಸ್ಟಿಕ್‌ ಮಿಸೈಲ್‌ನಲ್ಲಿ ಪ್ಯಾರಾಬೋಲಿಕ್‌ ಟ್ರೆಜೆಕ್ಟರಿ ವ್ಯವಸ್ಥೆ ಇದೆ. ಅಂದರೆ ಇದು ಅತ್ಯಂತ ವೇಗವಾಗಿ ಮೇಲಕ್ಕೆ ಹೋಗಿ ನಿಖರವಾದ ಸ್ಥಳದಲ್ಲೇ ಮೇಲಿನಿಂದ ಕೆಳಗೆ ಇಳಿಯು ತ್ತದೆ. ಅಂದರೆ ನಾವು ಚೆಂಡೊಂದನ್ನು ಎಸೆದಾಗ ಅದು ಮೇಲೆ ಹೋಗಿ, ಕೆಳಗೆ ಬಂದು ಬೀಳುವ ಹಾಗೆ. ಅಷ್ಟೇ ಅಲ್ಲ, ಇದರ ವೇಗವೂ ಹೆಚ್ಚಾಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next