Advertisement

ಏಶ್ಯನ್‌ ಚಾಂಪಿಯನ್‌ ಕತಾರ್‌ಗೆ ಭಾರತ ತಡೆ

01:04 AM Sep 12, 2019 | sudhir |

ದೋಹಾ (ಕತಾರ್‌): ಫಿಫಾ ವಿಶ್ವಕಪ್‌ ಫ‌ುಟ್ಬಾಲ್‌ ಪಂದ್ಯಾವಳಿಯ ಏಶ್ಯ ವಿಭಾಗದ ಅರ್ಹತಾ ಕೂಟದಲ್ಲಿ ಭಾರತ ಬಲಿಷ್ಠ ಕತಾರ್‌ ತಂಡವನ್ನು ಅವರದೇ ಅಂಗಳದಲ್ಲಿ ಹಿಡಿದು ನಿಲ್ಲಿಸಿದೆ. ಮಂಗಳವಾರ ರಾತ್ರಿ ದೋಹಾದ “ಜಾಸಿಮ್‌ ಬಿನ್‌ ಹಮದ್‌ ಸ್ಟೇಡಿಯಂ’ನಲ್ಲಿ ನಡೆದ ಈ ಪಂದ್ಯ ಯಾವುದೇ ಗೋಲಿಲ್ಲದೆ ಡ್ರಾಗೊಂಡಿದೆ.

Advertisement

ಭಾರತದ ಈ ಸಾಹಸಕ್ಕಾಗಿ ಕೋಚ್‌ ಐಗರ್‌ ಸ್ಟಿಮಾಕ್‌, ನಾಯಕ ಸುನೀಲ್‌ ಚೆಟ್ರಿ ಭಾರೀ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಕತಾರ್‌ ಕಳೆದ ಜನವರಿಯಲ್ಲಷ್ಟೇ ಏಶ್ಯನ್‌ ಫ‌ುಟ್ಬಾಲ್‌ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಭಾರತದೆದುರು ಗೆಲ್ಲುವ ನೆಚ್ಚಿನ ತಂಡವಾಗಿತ್ತು.

ಈ ಪಂದ್ಯದಲ್ಲಿ ಭಾರತ ಸುನೀಲ್‌ ಚೆಟ್ರಿ ಸೇವೆಯಿಂದ ವಂಚಿತವಾಗಿತ್ತು. ಜ್ವರದಿಂದಾಗಿ ಅವರು ಆಡಲಿಳಿದಿರಲಿಲ್ಲ. ಒಟ್ಟಾರೆಯಾಗಿ ಭಾರತ ಈ ಪಂದ್ಯಕ್ಕಾಗಿ 4 ಬದಲಾವಣೆ ಮಾಡಿತ್ತು.

ಎರಡಂಕಕ್ಕೆ ಶ್ರಮಿಸಬೇಕು
“ಕಳೆದ ಒಮಾನ್‌ ವಿರುದ್ಧದ ಸೋಲಿನ ಬಗ್ಗೆ ನಾನು ಚಿಂತಿಸುತ್ತ ಕೂರಲಿಲ್ಲ. ಅಷ್ಟು ಸಮಯವೂ ಇರಲಿಲ್ಲ. ಆದರೀಗ ಏಶ್ಯನ್‌ ಚಾಂಪಿಯನ್‌ ಕತಾರ್‌ ವಿರುದ್ಧ ಡ್ರಾ ಸಾಧಿಸಿದ್ದರಿಂದ ಬಹಳ ಖುಷಿಯಾಗಿದೆ. ಆದರೆ ನಾವು ವಿಶೇಷವಾಗಿ ಹಾರುವ ಅಗತ್ಯವಿಲ್ಲ. ಮುಂದಿನ ಪಂದ್ಯಗಳಲ್ಲಿ ಎರಡಂಕ ಪಡೆಯಲು ಶ್ರಮಿಸಬೇಕು’ ಎಂದು ಕೋಚ್‌ ಸ್ಟಿಮಾಕ್‌ ಹೇಳಿದರು.
“ಬಹಳಷ್ಟು ವಿಭಾಗಗಳಲ್ಲಿ ನಾವು ಸುಧಾರಿತ ಪ್ರದರ್ಶನ ನೀಡಬೇಕಿದೆ.

ಇಂದಿನ ಯಶಸ್ಸು ನಮ್ಮೆಲ್ಲ ಆಟಗಾರರಿಗೆ ಸಲ್ಲುತ್ತದೆ. ಇದಕ್ಕಾಗಿ ಹೆಮ್ಮೆಯಾಗುತ್ತಿದೆ. ಆದರೆ ನಾನು ತಂಡಕ್ಕೆ ನೀಡುವ ಸಂದೇಶ ಇಷ್ಟೇ, ಒಂದೇ ಅಂಕಕ್ಕೆ ತೃಪ್ತಿಪಡಬೇಡಿ. ಇದನ್ನು ಎರಡಕ್ಕೆ ಏರಿಸಲು ಪ್ರಯತ್ನಿಸಿ…’ ಎಂಬುದಾಗಿ ಸ್ಟಿಮಾಕ್‌ ಹೇಳಿದರು.

Advertisement

ನಡೆಯದ ಕತಾರ್‌ ಆಟ
ಈ ಪಂದ್ಯದಲ್ಲಿ ಕತಾರ್‌ಗೆ ಹೆಚ್ಚಿನ ಅವಕಾಶ ಲಭಿಸಿತ್ತು. ಆದರೆ ಭಾರತ ಇದೆಲ್ಲದಕ್ಕೂ ತಡೆಯೊಡ್ಡಿತು. ಹಾಗೆಯೇ ಭಾರತಕ್ಕೂ ಕೆಲವು ಅವಕಾಶಗಳು ಎದುರಾದವು. ಆದರೆ ಇದರಲ್ಲಿ ಯಶಸ್ಸು ಸಿಗಲಿಲ್ಲ. ಉಸ್ತುವಾರಿ ನಾಯಕನೂ ಆಗಿದ್ದ ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಕತಾರ್‌ ಆಕ್ರಮಣವನ್ನು ಯಶಸ್ವಿಯಾಗಿ ತಡೆದರು.

ಮೊದಲ 10 ನಿಮಿಷದಲ್ಲೇ ಕತಾರ್‌ 2 ಅವಕಾಶ ಪಡೆದು ಮುನ್ನುಗ್ಗಲು ಪ್ರಯತ್ನಿಸಿತ್ತು. ದ್ವಿತೀಯಾರ್ಧದಲ್ಲಿ ಭಾರತೀಯರ ಆಟ ಹೆಚ್ಚು ಚುರುಕುಗೊಂಡಿತು. ಆದರೆ ಇತ್ತಂಡಗಳಿಗೂ ಗೋಲಿನ ಖಾತೆ ತೆರೆಯಲಾಗಲಿಲ್ಲ.

ಮುಂದಿನ ಎದುರಾಳಿ ಬಾಂಗ್ಲಾ
ಭಾರತ ತನ್ನ ಮುಂದಿನ ವಿಶ್ವಕಪ್‌ ಅರ್ಹತಾ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಅ. 15ರಂದು ಬಾಂಗ್ಲಾದೇಶ ವಿರುದ್ಧ ಆಡಲಿದೆ. ಈ ಸ್ಪರ್ಧೆ ಕೋಲ್ಕತಾದಲ್ಲಿ ನಡೆಯಲಿದ್ದು, ತವರಿನ 80 ಸಾವಿರ ವೀಕ್ಷಕರ ಮುಂದೆ ಆಡುವುದನ್ನು ತಾನು ಕಾತರದಿಂದ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ ಐಗರ್‌ ಸ್ಟಿಮಾಕ್‌.

ಡಿಯರ್‌ ಇಂಡಿಯಾ, ಇದು ನನ್ನ ತಂಡ. ಇವರೆಲ್ಲ ನನ್ನ ಹುಡುಗರು. ಈ ಕ್ಷಣದಲ್ಲಿ ನನಗೆ ಅದೆಷ್ಟು ಹೆಮ್ಮೆಯಾಗಿದೆ ಎಂಬುದನ್ನು ಬಣ್ಣಿಸಲಾಗುತ್ತಿಲ್ಲ. ಅಂಕಿಅಂಶದಂತೆ ಇದೇನೂ ದೊಡ್ಡ ಫ‌ಲಿತಾಂಶವಲ್ಲ. ಆದರೆ ನಾವು ನೀಡಿದ ಭಾರೀ ಹೋರಾಟಕ್ಕೆ ಸಂದ ದೊಡ್ಡ ಯಶಸ್ಸು ಇದಾಗಿದೆ. ಇದರ ಶ್ರೇಯಸ್ಸು ಕೋಚಿಂಗ್‌ ಸಿಬಂದಿಗಳಿಗೆ ಸಲ್ಲಬೇಕು.
-ಸುನೀಲ್‌ ಚೆಟ್ರಿ

Advertisement

Udayavani is now on Telegram. Click here to join our channel and stay updated with the latest news.

Next