Advertisement
ಗುವಾಹಾಟಿಯ ಮೊದಲ ಮುಖಾಮುಖೀ ಟಾಸ್ ಹಾರಿಸಲಷ್ಟೇ ಸೀಮಿತವಾಗಿ ಮಳೆಯಿಂದ ಕೊಚ್ಚಿಹೋದ ಬಳಿಕ ಮಂಗಳವಾರ ಇಂದೋರ್‌ನಲ್ಲಿ ಟೀಮ್ ಇಂಡಿಯಾ ಅಮೋಘ ಆಲ್‌ರೌಂಡ್ ಪ್ರದರ್ಶನ ನೀಡಿ ಲಂಕಾ ಮೇಲೆ ಸವಾರಿ ಮಾಡುವಲ್ಲಿ ಯಶಸ್ವಿಯಾಗಿತ್ತು. ಇದೇ ಜೋಶ್ ಕಾಯ್ದುಕೊಂಡರೆ ಪುಣೆಯಲ್ಲೂ ಭಾರತ ಗೆಲುವಿನ ಮಣೆ ಏರುವುದರಲ್ಲಿ ಅನುಮಾನವಿಲ್ಲ.
ಮುಂಬರುವ ಟಿ20 ವಿಶ್ವಕಪ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಎಲ್ಲ ತಂಡಗಳೂ ಚುಟುಕು ಕ್ರಿಕೆಟ್‌ನಲ್ಲಿ ಪ್ರಯೋಗಕ್ಕೆ ಮುಂದಾಗುತ್ತಿವೆ. ಸಶಕ್ತ ಆಡುವ ಬಳಗವೊಂದನ್ನು ಕಟ್ಟುವುದು ಎಲ್ಲ ತಂಡಗಳ ಪ್ರಮುಖ ಗುರಿ. ಇದಕ್ಕೆ ಭಾರತವೂ ಹೊರತಲ್ಲ. ಆದರೀಗ ಸರಣಿ ಗೆಲ್ಲಬೇಕಾದ ಯೋಜನೆ ಹಾಕಿಕೊಂಡಿರುವುದರಿಂದ ಪುಣೆಯಲ್ಲಿ ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಪ್ರಯೋಗದ ಸಂಭವ ಇಲ್ಲ ಎಂದೇ ಹೇಳಬೇಕು. ಇಂದೋರ್‌ನ ವಿಜಯೀ ಬಳಗವನ್ನೇ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚು. ಹೀಗಾಗಿ ಸಂಜು ಸ್ಯಾಮ್ಸನ್, ಮನೀಷ್ ಪಾಂಡೆ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದು ಅನುಮಾನ. ಆದರೂ ಇವರಿಬ್ಬರ ಆಟವನ್ನೊಮ್ಮೆ ನೋಡುವ ಕುತೂಹಲ ಎಲ್ಲರಲ್ಲೂ ಮೂಡಿರುವುದು ಸುಳ್ಳಲ್ಲ. ಇದೂ ಸೇರಿದಂತೆ ಕಳೆದ 3 ಟಿ20 ಸರಣಿಗಳಲ್ಲಿ ಮನೀಷ್ ಪಾಂಡೆಗೆ ಆಡಲು ಅವಕಾಶ ಸಿಕ್ಕಿದ್ದು ಒಂದು ಪಂದ್ಯದಲ್ಲಿ ಮಾತ್ರ. ಅದು ನವೆಂಬರ್‌ನಲ್ಲಿ ನಡೆದ ಬಾಂಗ್ಲಾದೇಶ ಎದುರಿನ ನಾಗ್ಪುರ ಮುಖಾಮುಖೀ. ಇದರಲ್ಲಿ ಪಾಂಡೆ ಅಜೇಯ 22 ರನ್ ಮಾಡಿದ್ದರು. ಇದೇ ಸರಣಿ ವೇಳೆ ಭಾರತ ತಂಡಕ್ಕೆ ಮರಳಿದ ಸಂಜು ಸ್ಯಾಮ್ಸನ್ ಇನ್ನೂ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿಲ್ಲ.
Related Articles
Advertisement
ಮಿಂಚಿದ ಬೌಲಿಂಗ್ಬ್ಯಾಟಿಂಗಿಗೆ ಪ್ರಶಸ್ತವಾಗಿದ್ದ ಇಂದೋರ್‌ನಲ್ಲಿ ಭಾರತದ ಪೇಸ್ ಬೌಲರ್‌ಗಳು ಭರ್ಜರಿ ಪ್ರದರ್ಶನ ನೀಡಿ ಲಂಕೆಯನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು. ಅದರಲ್ಲೂ ನವದೀಪ್ ಸೈನಿ, ಶಾದೂìಲ್ ಠಾಕೂರ್ ಅವರ ಸ್ಪೆಲ್ ಅತ್ಯಂತ ಘಾತಕವಾಗಿತ್ತು. 170ರ ತನಕ ವಿಸ್ತರಿಸಬಹುದಾಗಿದ್ದ ಸ್ಕೋರ್ 140ರ ಗಡಿಯಲ್ಲಿ ನಿಂತಿತ್ತು. ಕೊನೆಯಲ್ಲಿ ಬುಮ್ರಾ ಹ್ಯಾಟ್ರಿಕ್ ಬೌಂಡರಿ ಬಿಟ್ಟುಕೊಡದೇ ಹೋಗಿದ್ದರೆ ಈ ಮೊತ್ತ ಇನ್ನಷ್ಟು ಕಡಿಮೆ ಆಗುತ್ತಿತ್ತು. ಅಂದಹಾಗೆ ಅಂತಿಮ 3 ಎಸೆತ ಹೊರತುಪಡಿಸಿದರೆ ಬುಮ್ರಾ ಪುನರಾಗಮನ ಅತ್ಯಂತ ಪರಿಣಾಮಕಾರಿಯಾಗಿತ್ತು ಎಂಬುದನ್ನು ಮರೆಯುವಂತಿಲ್ಲ. ಶ್ರೀಲಂಕಾ ಸರದಿಯಲ್ಲಿ ಸಾಕಷ್ಟು ಮಂದಿ ಎಡಗೈ ಆಟಗಾರರಿರುವುದರಿಂದ ಕುಲದೀಪ್ ಮತ್ತು ಸುಂದರ್ ಸ್ಥಾನ ಉಳಿಸಿಕೊಳ್ಳುವುದು ಬಹುತೇಕ ಖಚಿತ. ಆಗ ಜಡೇಜ ಮತ್ತು ಚಹಲ್ ಮತ್ತೆ ಹೊರಗೆ ಉಳಿಯಬೇಕಾಗುತ್ತದೆ. ಭಾರತದ ಬ್ಯಾಟಿಂಗ್ ಕೂಡ ಭರ್ಜರಿ ಯಶಸ್ಸು ಕಂಡಿತ್ತು. ಅಗ್ರ ಕ್ರಮಾಂಕದ ಎಲ್ಲ ನಾಲ್ವರು ಮೂವತ್ತರ ಗಡಿ ದಾಟಿದ್ದೇ ಇದಕ್ಕೆ ಸಾಕ್ಷಿ. ರಾಹುಲ್ ಅವರಂತೂ ಸ್ಫೋಟಕ ಮೂಡ್‌ನಲ್ಲಿದ್ದರು. ಧವನ್ ಒತ್ತಡ ಮೀರಿ ನಿಲ್ಲಲು ಭಾರೀ ಪ್ರಯತ್ನಪಟ್ಟಿದ್ದು ಸ್ಪಷ್ಟ. ಒನ್‌ಡೌನ್‌ನಲ್ಲಿ ಪ್ರಯೋಗ ಮಾಡುತ್ತಲೇ ಇರುವ ಕೊಹ್ಲಿ, ಇಂದೋರ್‌ನಲ್ಲಿ ಅಯ್ಯರ್‌ಗೆ ಅವಕಾಶ ಕೊಟ್ಟು ಯಶಸ್ಸು ಕಂಡರು. ಪುಣೆಯಲ್ಲಿ ಈ ಜಾಗ ದುಬೆ ಪಾಲಾಗಲೂಬಹುದು. 11,000ಕ್ಕೆ ಇನ್ನೊಂದೇ ರನ್ ಸಾಕು
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂದೋರ್‌ನಲ್ಲಿ ಅತ್ಯಧಿಕ ಟಿ20 ರನ್ ಗಳಿಸಿದ ದಾಖಲೆ ಸ್ಥಾಪಿಸಿದ್ದರು. ಶುಕ್ರವಾರ ಪುಣೆಯಲ್ಲಿ ರನ್ ಖಾತೆ ತೆರೆದೊಡನೆ ಹೊಸ ಎತ್ತರ ತಲುಪಲಿದ್ದಾರೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 11 ಸಾವಿರ ರನ್ ಗಳಿಸಿದ ವಿಶ್ವದ 6ನೇ ಹಾಗೂ ಭಾರತದ 2ನೇ ನಾಯಕರೆನಿಸಲಿದ್ದಾರೆ. ಈ ಯಾದಿಯನ್ನು ಅಲಂಕರಿಸಿರುವ ಭಾರತದ ಕಪ್ತಾನನೆಂದರೆ ಮಹೇಂದ್ರ ಸಿಂಗ್ ಧೋನಿ. ಲಂಕಾ ಮುಂದೆ ಭಾರೀ ಸವಾಲು
ಸರಣಿಗೆ ಮರಳಬೇಕಾದರೆ ಶ್ರೀಲಂಕಾ ಭಾರೀ ಸಾಹಸ ಮಾಡಬೇಕಾದುದು ಅನಿವಾರ್ಯ. ಬ್ಯಾಟಿಂಗ್, ಬೌಲಿಂಗ್ ವಿಭಾಗಗಳೆರಡರಲ್ಲೂ ಅದು ಉನ್ನತ ಮಟ್ಟದ ಪ್ರದರ್ಶನ ನೀಡಬೇಕಿದೆ. ಆದರೆ ಆಲ್‌ರೌಂಡರ್ ಇಸುರು ಉದಾನ ಗಾಯಾಳಾಗಿ ಹೊರ ಬಿದ್ದಿರುವುದು ತಂಡಕ್ಕೆ ಎದುರಾಗಿರುವ ಭಾರೀ ಹೊಡೆತ. ಹೀಗಾಗಿ 16 ತಿಂಗಳ ಬಳಿಕ ಟಿ20ಗೆ ಮರಳಿದ ಏಂಜೆಲೊ ಮ್ಯಾಥ್ಯೂಸ್ ಈ ಸರಣಿ ಯಲ್ಲಿ ಮೊದಲ ಸಲ ಆಡಲಿಳಿಯುವ ಸಾಧ್ಯತೆ ಇದೆ.