ವಿಶ್ವಸಂಸ್ಥೆ:”ನಿಮ್ಮ ಸುಳ್ಳು ಮತ್ತು ದುರುದ್ದೇಶಪೂರಿತ ಹೇಳಿಕೆಗಳು ಪ್ರತಿಕ್ರಿಯೆಗೂ ಅರ್ಹವಾದುದಲ್ಲ.’
ಇದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಚರ್ಚೆಯಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪಿಸಿದ ಪಾಕಿಸ್ತಾನದ ವಿದೇಶಾಂಗ ಸಚಿವರನ್ನು ಭಾರತವು ತರಾಟೆಗೆ ತೆಗೆದುಕೊಂಡ ಪರಿ.
ಮಹಿಳೆಯರು, ಶಾಂತಿ ಮತ್ತು ಭದ್ರತೆ ಕುರಿತಾದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುವ ವೇಳೆ ಹಳೇ ಚಾಳಿಯನ್ನು ಮುಂದುವರಿಸಿದ್ದ ಪಾಕ್ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಭಾರತದ ಆಂತರಿಕ ವಿಚಾರವಾದ “ಜಮ್ಮು ಮತ್ತು ಕಾಶ್ಮೀರ’ವನ್ನು ಪ್ರಸ್ತಾಪಿಸಿದ್ದರು.
ಇದಕ್ಕೆ ಖಡಕ್ ತಿರುಗೇಟು ನೀಡಿದ ವಿಶ್ವಸಂಸ್ಥೆಯಲ್ಲಿರುವ ಭಾರತದ ಕಾಯಂ ರಾಯಭಾರಿ ರುಚಿರಾ ಕಂಬೋಜ್, “ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿ ಪಾಕಿಸ್ತಾನದ ಪ್ರತಿನಿಧಿ ಆಡಿರುವ ಕ್ಷುಲ್ಲಕ, ಆಧಾರರಹಿತ ಮತ್ತು ರಾಜಕೀಯಪ್ರೇರಿತ ಹೇಳಿಕೆಯನ್ನು ಮೊದಲು ನಾನು ತಳ್ಳಿಹಾಕುತ್ತೇನೆ.
ಇಂಥ ಸುಳ್ಳುಗಳು ಮತ್ತು ದುರುದ್ದೇಶಪೂರಿತ ಮಾತುಗಳು ನಮ್ಮ ಪ್ರತಿಕ್ರಿಯೆಗೂ ಅರ್ಹವಾದುದಲ್ಲ ಎಂದು ನಾವು ನಂಬಿದ್ದೇವೆ. ಸಕಾರಾತ್ಮಕ ಅಂಶಗಳ ಕಡೆಗೆ ಮಾತ್ರ ನಾವು ಗಮನ ಕೇಂದ್ರೀಕರಿಸುತ್ತೇವೆ’ ಎಂದಿದ್ದಾರೆ.