Advertisement
ಐದು ಸೇನಾ ನೆಲೆ ಧ್ವಂಸ: ಮತ್ತೂಂದೆಡೆ, ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ಪಾಕ್ ಸೇನೆಯ ಐದು ಪೋಸ್ಟ್ ಗಳನ್ನು ಭಾರತೀಯ ಸೇನೆ ಧ್ವಂಸ ಮಾಡಿದೆ. ಅಷ್ಟೇ ಅಲ್ಲ, ಪಾಕಿಸ್ತಾನದಲ್ಲಿ ಈ ಗುಂಡಿನ ದಾಳಿಯಿಂದಾಗಿ ಹಲವು ಸಾವುನೋವು ಸಂಭವಿಸಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಲೆ.ಕ ದೇವೇಂದರ್ ಆನಂದ್ ಹೇಳಿದ್ದಾರೆ. ಮಂಗಳವಾರ ಸಂಜೆಯಿಂದಲೇ ಗಡಿ ನಿಯಂತ್ರಣಾ ರೇಖೆಯ ಸುಮಾರು 12 ರಿಂದ 15 ಸ್ಥಳಗಳಲ್ಲಿ ಭಾರಿ ಶಸ್ತ್ರಾಸ್ತ್ರಗಳ ಮೂಲಕ ಗುಂಡಿನ ದಾಳಿ ಆರಂಭಿಸಿತ್ತು. ಮಾರ್ಟರ್ ಮತ್ತು ಕ್ಷಿಪಣಿಗಳನ್ನೂ ಪಾಕಿಸ್ತಾನ ಸೇನೆ ಬಳಸಿದೆ.
ಮತ್ತೂಂದೆಡೆ, ಐಎಎಫ್ಗೆ ಸೇರಿದ ವಿಮಾನವನ್ನು ಹೊಡೆದು ಉರುಳಿಸಿದ್ದು, ವಿಂಗ್ ಕಮಾಂಡರ್ ಅಭಿನಂದನ್ ಎಂಬುವರನ್ನೂ ಬಂಧಿಸಿರುವುದಾಗಿ ಪಾಕಿಸ್ತಾನ ಸೇನೆ ಹೇಳಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪಾಕ್ ಸೇನಾ ವಕ್ತಾರ ಮೇಜರ್ ಜನರಲ್ ಅಸಿಫ್ ಗಫೂರ್, ಮೊದಲು ನಮ್ಮ ಗುರಿ ಸೇನಾ ನೆಲೆ ಹಾಗೂ ಆಡಳಿತಾತ್ಮಕ ಕಚೇರಿಗಳಾಗಿದ್ದವು. ಆದರೆ ಸಾವುನೋವು ಸಂಭಾವ್ಯತೆ ಗಮನಿಸಿ ನಾವು ದಾಳಿ ನಡೆಸಲಿಲ್ಲ. ನಾವು ದಾಳಿ ನಡೆಸಲು ಉದ್ದೇಶಿಸಿದ್ದು ನಮ್ಮ ರಕ್ಷಣೆಗೆ ಮಾತ್ರ ಎಂದಿದ್ದಾರೆ. ಆದರೆ ವಿಮಾನಗಳು ಉರುಳಿರುವ ಕುರಿತು ಯಾವುದೇ ವೀಡಿಯೋ ಅಥವಾ ಫೋಟೋ ಸಾಕ್ಷ್ಯವನ್ನು ಪಾಕಿಸ್ತಾನ ನೀಡಿಲ್ಲ. ಬದಲಿಗೆ ಬಂಧಿತ ವಿಂಗ್ ಕಮಾಂಡರ್ ಅಭಿನಂದನ್ ವಿಡಿಯೋವನ್ನು ಬಿಡುಗಡೆ ಮಾಡಿದೆ. ಮೊದಲು ಅಭಿನಂದನ್‌ರನ್ನು ಥಳಿಸುತ್ತಿರುವ ವಿಡಿಯೋ ಬಿಡುಗಡೆ ಮಾಡಲಾಗಿತ್ತಾದರೂ, ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ, ಮತ್ತೂಂದು ವೀಡಿಯೋ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಪಾಕಿಸ್ತಾನ ಸೇನೆ ತನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದೆ ಎಂದು ಅಭಿನಂದನ್‌ರಿಂದ ಹೇಳಿಸಲಾಗಿದೆ.