Advertisement

ಭಾರತ “ಎ’ಗೆ 3-0ಯಿಂದ ಸರಣಿ

01:18 PM Dec 08, 2017 | |

ಹುಬ್ಬಳ್ಳಿ: ಭಾರತ ಮಹಿಳಾ “ಎ’ ತಂಡ ಮೂರನೇ ಪಂದ್ಯವನ್ನು ಗೆಲ್ಲುವ ಮೂಲಕ ಏಕದಿನ ಸರಣಿಯನ್ನು 3-0 ಅಂತರದಿಂದ
ಗೆದ್ದುಕೊಂಡಿದೆ. ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಬಾಂಗ್ಲಾ 
ದೇಶ ತಂಡವನ್ನು 9 ವಿಕೆಟ್‌ಗಳ ಅಂತರದಿಂದ ಮಣಿಸಿತು.

Advertisement

ಟಾಸ್‌ ಗೆದ್ದು ಭಾರತಕ್ಕೆ ಕ್ಷೇತ್ರರಕ್ಷಣೆ ಮಾಡಿದ ಬಾಂಗ್ಲಾದೇಶದ ಬ್ಯಾಟಿಂಗ್‌ ಪ್ರದರ್ಶನ ನೀರಸವಾಗಿತ್ತು. ಶಮೀಮಾ ಸುಲ್ತಾನಾ ಶೂನ್ಯ ಸಂಪಾದನೆಯೊಂದಿಗೆ ನಿರ್ಗಮಿಸಿದರೆ, ಮುರ್ಷಿದಾ ಖಾತೂನ್‌ 21 ರನ್‌ ಪೇರಿಸಿ ಪೆವಿಲಿಯನ್‌ಗೆ ಮರಳಿದರು. ರುಮಾನಾ
ಅಹ್ಮದ್‌ (42) ಹೊರತು ಪಡಿಸಿದರೆ ಬೇರೆ ಯಾವುದೇ ಬ್ಯಾಟ್ಸ್‌ವುಮನ್‌ಗಳು ಕ್ರೀಸ್‌ ಕಚ್ಚಿ ನಿಲ್ಲುವಲ್ಲಿ ವಿಫ‌ಲಗೊಂಡರು. 6ನೇ ವಿಕೆಟ್‌
ಜೊತೆಯಾಟದಲ್ಲಿ 45 ರನ್‌ಗಳು ಹರಿದು ಬಂದಿದ್ದು ಬಿಟ್ಟರೆ ಉಳಿದಂತೆ ಬಾಂಗ್ಲಾದ ಬ್ಯಾಟ್ಸ್‌ವುಮನ್‌ಗಳು ಬಂದಷ್ಟೇ ವೇಗದಿಂದ
ಪೆವಿಲಿಯನ್‌ಗೆ ಮರಳಿದರು. 

ಮೊದಲೆರಡು ಪಂದ್ಯಗಳಲ್ಲಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದ್ದ ಬಾಂಗ್ಲಾದೇಶ ಸರಣಿಯ ಅಂತಿಮ ಪಂದ್ಯದಲ್ಲಿ ನೂರರ ಗಡಿ ದಾಟಲು
ಪರದಾಡಿತು. 36ನೇ ಓವರ್‌ನಲ್ಲಿ 100 ರನ್‌ ದಾಖಲಿಸಿದ ತಂಡ 41.6 ಓವರ್‌ಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 2.76 ರನ್‌ ರೇಟ್‌ನಂತೆ 116 ರನ್‌ ಪೇರಿಸಿತು. ಭೋಜನ ವಿರಾಮಕ್ಕೆ ಅರ್ಧ ಗಂಟೆ ಇರುವಾಗಲೇ ಬಾಂಗ್ಲಾ ಇನಿಂಗ್ಸ್‌  ಮುಕ್ತಾಯವಾಯಿತು. ಭಾರತದ ಅನುಜಾ ಪಾಟೀಲ, ಪ್ರೀತಿ ಬೋಸ್‌, ಶಿವಾಂಗಿ ರಾಜ್‌, ಕವಿತಾ ತಲಾ 2 ವಿಕೆಟ್‌ ಪಡೆದರು.

117 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಎ ತಂಡ 32.3 ಓವರ್‌ಗಳಲ್ಲಿ ಕೇವಲ 1 ವಿಕೆಟ್‌ ಕಳೆದುಕೊಂಡು ಗೆಲುವು ಸಂಪಾದಿಸಿತು.
ಇನಿಂಗ್ಸ್‌ ಆರಂಭಿಸಿದ ತಿರುಷಕಾಮಿನಿ ಹಾಗೂ ಜೆಮಿಮಾ ರಾಡ್ರಿಗ್ಸ್‌ ಜೊತೆಯಾಟದಲ್ಲಿ 58 ರನ್‌ ಸಂಪಾದಿಸಿದರು. 13.2ನೇ ಓವರ್‌ನಲ್ಲಿ ತಿರುಷಕಾಮಿನಿ (26) ವಿಕೆಟ್‌ ಒಪ್ಪಿಸಿದ ನಂತರ ಜೆಮಿಮಾ ಹಾಗೂ ದೇವಿಕಾ ವೈದ್ಯ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು. ಜೆಮಿಮಾ ಭರ್ಜರಿ ಅಜೇಯ ಅರ್ಧ ಶತಕದ (56) ಮೂಲಕ ತಂಡಕ್ಕೆ ಅಮೂಲ್ಯ ಕೊಡುಗೆ ನೀಡಿದರು. ಜೆಮಿಮಾ ಹಾಗೂ ದೇವಿಕಾ ಜೊತೆಯಾಟದಲ್ಲಿ 60 ರನ್‌ಗಳು ಹರಿದು ಬಂದವು.

25.3ನೇ ಓವರ್‌ನಲ್ಲಿ 100 ರನ್‌ ಗಳಿಸಿದ ತಂಡ ನಿರಾಯಾಸವಾಗಿ ಜಯ ತನ್ನದಾಗಿಸಿಕೊಂಡಿತು. 32.3ನೇ ಓವರ್‌ನಲ್ಲಿ ತಂಡ ಗೆಲ್ಲಲು 5 ರನ್‌ಗಳ ಅವಶ್ಯಕತೆಯಿದ್ದಾಗ ಜೆಮಿಮಾ ಸಿಕ್ಸರ್‌ ಸಿಡಿಸುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು. ಭಾರತ 3.63 ರನ್‌ ರೇಟ್‌ನಂತೆ ರನ್‌ ದಾಖಲಿಸಿತು. 

Advertisement

ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾದೇಶ (42 ಓವರ್‌ 116 ಆಲೌಟ್‌, ರುಮಾನಾ ಅಹ್ಮದ್‌ 42, ಅನುಜಾ ಪಾಟೀಲ 11ಕ್ಕೆ 2) ಭಾರತ 32.3 ಓವರ್‌, 118/1 (ಜೆಮಿಮಾ ರಾಡ್ರಿಗ್ಸ್‌ 56, ದೇವಿಕಾ ವೈದ್ಯ 30). 

ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next