ಹೊಸದಿಲ್ಲಿ: ಎಚ್3ಎನ್2 ಭೀತಿಯ ಮಧ್ಯೆ ಭಾರತದಲ್ಲಿ ಭಾನುವಾರ ಒಂದು ಸಾವಿರಕ್ಕೂ ಹೆಚ್ಚು ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದೆ. 129 ದಿನಗಳ ನಂತರ ಭಾರತದಲ್ಲಿ ದೈನಂದಿಕ ಏರಿಕೆ ಸಾವಿರ ದಾಟಿದೆ.
ಬೆಳಿಗ್ಗೆ 8 ಗಂಟೆಗೆ ಅಪ್ಡೇಟ್ ಆದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಒಟ್ಟು 1,071 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ.
ಇದೇ ವೇಳೆ ಮೂರು ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 5,30,802 ಕ್ಕೆ ಏರಿದೆ. ಮೂರು ಸಾವು ಪ್ರಕರಣಗಳು ರಾಜಸ್ಥಾನ ಮತ್ತು ಮಹಾರಾಷ್ಟ್ರ ಮತ್ತು ಕೇರಳದಲ್ಲಿ ತಲಾ ಒಂದರಂತೆ ವರದಿಯಾಗಿದೆ.
ಭಾರತದಲ್ಲಿ ಸಕ್ರಿಯ ಕೋವಿಡ್ -19 ಪ್ರಕರಣಗಳ ಸಂಖ್ಯೆ 5,915 ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳು ಈಗ ಒಟ್ಟು ಪ್ರಕರಣಗಳಲ್ಲಿ 0.01 ಪ್ರತಿಶತವನ್ನು ಒಳಗೊಂಡಿವೆ, ರಾಷ್ಟ್ರೀಯ ಕೋವಿಡ್ ರಿಕವರಿ ರೇಟ್ 98.8 ಪ್ರತಿಶತದಷ್ಟು ದಾಖಲಾಗಿದೆ.
ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಸೋಂಕಿತರ ಸಂಖ್ಯೆ ಈಗ 4,46,95,420 ಆಗಿದೆ.
ಸಚಿವಾಲಯದ ವೆಬ್‌ಸೈಟ್ ಪ್ರಕಾರ, ರಾಷ್ಟ್ರವ್ಯಾಪಿ ಕೋವಿಡ್ ವೈರಸ್ ವ್ಯಾಕ್ಸಿನೇಷನ್ ಅಭಿಯಾನದಲ್ಲಿ ಇದುವರೆಗೆ ದೇಶದಲ್ಲಿ ಕೋವಿಡ್ -19 ಲಸಿಕೆಯ 220.65 ಕೋಟಿ ಡೋಸ್ ಗಳನ್ನು ನೀಡಲಾಗಿದೆ.