ಹೊಸದಿಲ್ಲಿ: ಕಳೆದ ಎರಡು ವರ್ಷಗಳಲ್ಲಿ ದೇಶದಲ್ಲಿ ಕಾಣೆಯಾಗುತ್ತಿರುವ ಮಕ್ಕಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಹೇಳಿದೆ.
ಈ ಅವಧಿಯಲ್ಲಿ ದೇಶಾದ್ಯಂತ ಕೊರೊನಾ ಹೆಚ್ಚಾಗಿದ್ದು, ಈ ಮಕ್ಕಳ ಮೇಲೆ ಸಾಮಾಜಿಕ ಪರಿಣಾಮಗಳು ಬೀರಿದ್ದರಿಂದ ಅವರು ವಾಪಸ್ ಬಂದಿಲ್ಲ ಎಂದು ಇದೇ ದಾಖಲೆ ಹೇಳಿದೆ. ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಪ್ರಕಾರ, 2020ರಲ್ಲಿ 59,262 ಮಕ್ಕಳು ಕಣ್ಮರೆಯಾಗಿದ್ದಾರೆ.
2019ರಲ್ಲಿ ಈ ಸಂಖ್ಯೆ 48,972 ಆಗಿತ್ತು. ಈ ಎರಡು ವರ್ಷಗಳಲ್ಲೇ ಒಟ್ಟಾರೆಯಾಗಿ 1,08,234 ಮಕ್ಕಳು ಕಣ್ಮರೆಯಾಗಿದ್ದಾರೆ ಎಂದಿದೆ. 2008ರಿಂದ 2020ರ ವರೆಗಿನ ಕಣ್ಮರೆಯಾದ ಮಕ್ಕಳ ಸಂಖ್ಯೆಗೆ ಹೋಲಿಕೆ ಮಾಡಿದರೆ, ಇದು 13 ಪಟ್ಟು ಹೆಚ್ಚಾಗಿದೆ ಎಂದು ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಹೇಳಿದೆ.
ಹಾಗೆಯೇ ಈ ಎರಡು ವರ್ಷಗಳಲ್ಲಿ ಬಚ್‌ಪನ್ ಬಚಾವೋ ಆಂದೋಲನ ಮತ್ತು ಕೈಲಾಶ್ ಸತ್ಯಾರ್ಥಿ ಫೌಂಡೇಶನ್‌ಗಳು ಸುಮಾರು 12 ಸಾವಿರಕ್ಕೂ ಹೆಚ್ಚು ಮಕ್ಕಳನ್ನು ಕಾಪಾಡಿವೆ.
ಹಾಗೆಯೇ, ಮಧ್ಯ ಪ್ರದೇಶದಲ್ಲಿ ಪ್ರತೀ ದಿನ 29 ಮತ್ತು ರಾಜಸ್ಥಾನದಲ್ಲಿ 14 ಮಕ್ಕಳು ಕಣ್ಮರೆಯಾಗುತ್ತಿವೆ ಎಂದು ಬೇರೊಂದು ಎನ್‌ಜಿಒ ಹೇಳಿದೆ. ಇದನ್ನು ತಡೆಯುವ ಸಲುವಾಗಿ ಗ್ರಾಮಗಳ ಮಟ್ಟದಲ್ಲಿ ಮಕ್ಕಳ ರಕ್ಷಣ ಪಡೆಗಳು, ಪೋಷಕರಿಗೆ ಅಗತ್ಯ ತರಬೇತಿ ಹಾಗೂ ಸರಕಾರಗಳು ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮಕ್ಕಳ ಹಕ್ಕುಗಳ ಪರವಾಗಿ ಕಾರ್ಯ ನಿರ್ವಹಿಸುವ ಎನ್‌ಜಿಒಗಳು ಒತ್ತಾಯಿಸಿವೆ.