ನವದೆಹಲಿ: ಬುಧವಾರದಿಂದ ಗುರುವಾರ(ಏಪ್ರಿಲ್ 15)ಕ್ಕೆ 24 ಗಂಟೆಗಳಲ್ಲಿ ದೇಶದಲ್ಲಿ ದಾಖಲೆಯ 2ಲಕ್ಷಕ್ಕೂ ಅಧಿಕ ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, 1038 ಜನರು ಸಾವಿಗೀಡಾಗಿದ್ದಾರೆ. ಒಂದೇ ದಿನ ಇಷ್ಟೊಂದು ಪ್ರಕರಣಗಳು ಪತ್ತೆಯಾಗಿದ್ದು ದೇಶದಲ್ಲಿ ಇದೇ ಮೊದಲು ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಬುಕಿಯಿಂದ ಬಿಟ್ ಕಾಯಿನ್, ಪತ್ನಿಗಾಗಿ ಐಫೋನ್ ಪಡೆದಿದ್ದ ಹೀತ್ ಸ್ಟ್ರೀಕ್ ಗೆ 8 ವರ್ಷ ನಿಷೇಧ!
ಭಾರತದಲ್ಲಿ ಒಂದೇ ದಿನ 2,00,739 ಕೋವಿಡ್ 19 ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ಕೋವಿಡ್ ಪ್ರಕರಣಗಳ ಸಂಖ್ಯೆ 1,40,74,564ಕ್ಕೆ ಏರಿಕೆಯಾಗಿದೆ ಎಂದು ಗುರುವಾರ ಬೆಳಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆಗೊಳಿಸಿರುವ ಅಂಕಿ-ಅಂಶದಲ್ಲಿ ಹೇಳಿದೆ.
ಸತತವಾಗಿ ಒಂಬತ್ತು ದಿನಗಳಿಂದ ಒಂದು ಲಕ್ಷಕ್ಕೂ ಅಧಿಕ ಕೋವಿಡ್ ಸೋಂಕು ಪತ್ತೆಯಾಗುತ್ತಿದ್ದು, 10ನೇ ದಿನಕ್ಕೆ ಇದೇ ಮೊದಲ ಬಾರಿಗೆ 2ಲಕ್ಷದ ಗಡಿ ದಾಟಿರುವುದಾಗಿ ವರದಿ ತಿಳಿಸಿದೆ. ದೇಶದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 1,06,173ಕ್ಕೆ ಹೆಚ್ಚಳವಾಗಿದೆ. ಕೋವಿಡ್ 19 ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 1,24,29,564ಕ್ಕೆ ಏರಿಕೆಯಾಗಿದೆ.
ಸತತ ಐದು ದಿನಗಳಿಂದ 1.5ಲಕ್ಷಕ್ಕೂ ಅಧಿಕ ಕೋವಿಡ್ ಸೋಂಕು ಪ್ರಕರಣ ವರದಿಯಾಗುತ್ತಿದ್ದು, ಕಳೆದ 24ಗಂಟೆಯಲ್ಲಿ 1,038 ಮಂದಿ ಕೋವಿಡ್ ಸೋಂಕಿನಿಂದ ಸಾವಿಗೀಡಾಗಿದ್ದಾರೆ. ದೇಶದಲ್ಲಿ ಒಟ್ಟು 1,73,123 ಮಂದಿ ಈವರೆಗೆ ಸಾವನ್ನಪ್ಪಿರುವುದಾಗಿ ಅಂಕಿ ಅಂಶ ವಿವರಿಸಿದೆ.
ಆರೋಗ್ಯ ಸಚಿವಾಲಯ ಬುಧವಾರ(ಏಪ್ರಿಲ್ 14) ಬಿಡುಗಡೆ ಮಾಡಿರುವ ಅಂಕಿಅಂಶದ ಪ್ರಕಾರ, ಮಹಾರಾಷ್ಟ್ರ, ಕರ್ನಾಟಕ, ಉತ್ತರಪ್ರದೇಶ, ಚತ್ತೀಸ್ ಗಢ ಮತ್ತು ಕೇರಳದಲ್ಲಿ ಕೋವಿಡ್ 19 ಸೋಂಕು ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.
ಮಹಾರಾಷ್ಟ್ರ, ಕರ್ನಾಟಕ, ರಾಜಸ್ಥಾನ, ಉತ್ತರಪ್ರದೇಶ, ಗುಜರಾತ್, ಪಶ್ಚಿಮಬಂಗಾಳ, ಮಧ್ಯಪ್ರದೇಶ ಮತ್ತು ಕೇರಳ ಸೇರಿದಂತೆ ಎಂಟು ರಾಜ್ಯಗಳಲ್ಲಿ ಈವರೆಗೆ ಶೇ.60.16ರಷ್ಟು ಕೋವ್ಯಾಕ್ಸಿನ್ ಡೋಸ್ ಗಳನ್ನು ನೀಡಲಾಗಿದೆ ಎಂದು ವರದಿ ತಿಳಿಸಿದೆ.