ಹೊಸದಿಲ್ಲಿ: ದೇಶದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 22,842 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ಇದರಲ್ಲಿ 13,217 ಪ್ರಕರಣಗಳು ಕೇರಳ ರಾಜ್ಯವೊಂದರಲ್ಲೇ ಪತ್ತೆಯಾಗಿದೆ.
ಶನಿವಾರ ವರದಿಯಾದ ಪ್ರಕರಣಗಳ ಸಂಖ್ಯೆಗಿಂತ ಶೇ.6.2 ರಷ್ಟು ಕಡಿಮೆ ಪ್ರಕರಣಗಳು ರವಿವಾರ ವರದಿಯಾಗಿದೆ. ದೇಶದ ಒಟ್ಟು ಸೋಂಕಿತರ ಸಂಖ್ಯೆ 3,38,13,903ಕ್ಕೆ ಏರಿಕೆಯಾಗಿದೆ. ಶನಿವಾರ 24,354 ಪ್ರಕರಣಗಳು ವರದಿಯಾಗಿತ್ತು. ಇದು ಶುಕ್ರವಾರದಿಂದ ಶೇ.8.9 ರಷ್ಟು ಕಡಿಮೆಯಾಗಿತ್ತು.
ಕಳೆದ 24 ಗಂಟೆ ಅವಧಿಯಲ್ಲಿ ದೇಶದಲ್ಲಿ 244 ಮಂದಿ ಕೋವಿಡ್ 19 ಸೋಂಕಿತರು ಅಸುನೀಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ 4,48,817ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ವರದಿ ನೀಡಿದೆ.
ಇದನ್ನೂ ಓದಿ:ಶಾರುಖ್ ಖಾನ್ ಪುತ್ರನ ಮಾದಕ ನಂಟು: ಎನ್ ಸಿಬಿ ಬಲೆಗೆ ಬಿದ್ದ ಆರ್ಯನ್ ಖಾನ್
ದೇಶದ ಐದು ರಾಜ್ಯಗಳಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿದೆ. ಕೇರಳದಲ್ಲಿ 13,217 ಪ್ರಕರಣಗಳು, ಮಹಾರಾಷ್ಟ್ರದಲ್ಲಿ 2,696 ಪ್ರಕರಣಗಳು, ತಮಿಳುನಾಡಿನಲ್ಲಿ 1,578 ಪ್ರಕರಣಗಳು, ಮಿಜೋರಾಂನಲ್ಲಿ 1,276 ಪ್ರಕರಣಗಳು ಮತ್ತು ಆಂಧ್ರ ಪ್ರದೇಶ ರಾಜ್ಯದಲ್ಲಿ 865 ಹೊಸ ಕೋವಿಡ್ 19 ಸೋಂಕು ಪ್ರಕರಣಗಳು ಪತ್ತೆಯಾಗಿದೆ.
ಈ ಐದು ರಾಜ್ಯಗಳಿಂದ ಶೇಕಡಾ 85.95 ರಷ್ಟು ಹೊಸ ಪ್ರಕರಣಗಳು ವರದಿಯಾಗಿವೆ, ಹೊಸ ಪ್ರಕರಣಗಳಲ್ಲಿ ಕೇರಳವೊಂದೇ ಶೇ 57.86 ರಷ್ಟು ಸೋಂಕು ಪ್ರಕರಣಗಳಿಗೆ ಕಾರಣವಾಗಿದೆ.