ಗೋಲ್ಡ್ ಕೋಸ್ಟ್: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಪದಕ ಬೇಟೆಯನ್ನು ಮುಂದುವರಿಸಿದೆ. ಜಿತು ರಾಯ್ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ದಾಖಲೆಯ ಚಿನ್ನದ ಪದಕ ಗೆದ್ದಿದ್ದಾರೆ. ಸೈನಾ, ಶ್ರೀಕಾಂತ್ ಒಳಗೊಂಡ ಭಾರತ ಬ್ಯಾಡ್ಮಿಂಟನ್ ಮಿಶ್ರ ತಂಡ ಚಿನ್ನದ ಪದಕ ಬಾಚಿದೆ. ಬೆನ್ನಲ್ಲೇ ಭಾರತ ಪುರುಷರ ಟೇಬಲ್ ಟೆನಿಸ್ ತಂಡವೂ ಚಿನ್ನದ ನಗು ಚೆಲ್ಲಿದೆ.
ವೇಟ್ ಲಿಫ್ಟಿಂಗ್‌ನಲ್ಲಿ ಪ್ರದೀಪ್ ಬೆಳ್ಳಿ ಪದಕ ಪಡೆದರೆ ಮಹಿಳಾ ವಿಭಾಗದ 10 ಮೀ. ಏರ್ ರೈಫಲ್‌ನಲ್ಲಿ ಮೆಹುಲಿ ಘೋಷ್ ಬೆಳ್ಳಿ ಪದಕ ಗೆದ್ದಿದ್ದಾರೆ. ಇನ್ನು ಮಿಥಾರ್ವಲ್, ಅಪೂರ್ವಿ ಕೂಡ ಶೂಟಿಂಗ್‌ನಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಸದ್ಯ ಭಾರತ ಸೋಮವಾರದ ಸ್ಪರ್ಧೆಗಳಲ್ಲಿ 3 ಚಿನ್ನ, 2 ಬೆಳ್ಳಿ ಹಾಗೂ 2 ಕಂಚಿನ ಪದಕ ಗೆದ್ದು ಬೀಗಿದೆ.
ಜಿತುಗೆ ಚಿನ್ನ, ಮಿಥಾರ್ವಲ್‌ಗೆ ಕಂಚು: ಕಾಮನ್‌ವೆಲ್ತ್ ಶೂಟಿಂಗ್‌ನ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಕೂಟ ದಾಖಲೆಯೊಂದಿಗೆ ಜಿತು ರಾಯ್ ಚಿನ್ನದ ಪದಕ ಗೆದ್ದಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಜಿತು ರಾಯ್ ಫೈನಲ್‌ನಲ್ಲಿ ಒಟ್ಟಾರೆ 235.1 ಅಂಕ ಪಡೆದರು. ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡರು.
ಸೋಮವಾರ ಬೆಲ್ಮಂಟ್ ಶೂಟಿಂಗ್ ಸೆಂಟರ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಇದೇ ವಿಭಾಗದಲ್ಲಿ ಭಾರತದ ಮಿರ್ಥಾವಲ್ ಕಂಚಿನ ಪದಕ ಪಡೆದುಕೊಂಡರು. ಅವರು ಅರ್ಹತಾ ಸುತ್ತಿನಲ್ಲಿ ದಾಖಲೆಯ 584 ಅಂಕಗಳನ್ನು ಕಲೆ ಹಾಕಿದರು. ಆದರೆ 8 ಮಂದಿ ಸ್ಪರ್ಧಿಗಳ ಫೈನಲ್‌ನಲ್ಲಿ ಕೊನೆಗೆ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ಇಬ್ಬರು ಕೂಡ ಸಮರ್ಥರು. ಅದರಲ್ಲೂ ಜಿತು ರಾಯ್ ಅನುಭವಿ. 4 ವರ್ಷಗಳ ಹಿಂದೆ ಗ್ಲಾಸೊY ಕಾಮನ್‌ವೆಲ್ತ್ 50 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಜಿತು ಚಿನ್ನದ ಪದಕ ಪಡೆದುಕೊಂಡಿದ್ದರು. ಇದೀಗ ಮತ್ತೂಂದು ಚಿನ್ನದ ಪದಕದೊಂದಿಗೆ ಸಾಧನೆಯ ಎತ್ತರಕ್ಕೆ ಏರಿದ್ದಾರೆ. 2017ರಲ್ಲಿ ನಡೆದಿದ್ದ ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್‌ನಲ್ಲಿ ಜಿತು 4 ಚಿನ್ನದ ಪದಕ, 1 ಕಂಚಿನ ಪದಕ ಪಡೆದಿದ್ದರು. ಕಾಮನ್‌ವೆಲ್ತ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 2 ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದರು.
ಮಿಶ್ರ ತಂಡ ಬ್ಯಾಡ್ಮಿಂಟನ್‌ನಲ್ಲಿ ದಾಖಲೆಯ ಚಿನ್ನ: ಮಲೇಷ್ಯಾವನ್ನು 3-1 ಅಂತರದಿಂದ ಮಣಿಸಿದ ಭಾರತ ಮಿಶ್ರ ತಂಡ ಬ್ಯಾಡ್ಮಿಂಟನ್‌ನಲ್ಲಿ ಐತಿಹಾಸಿಕ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. 2010ರಲ್ಲಿ ಭಾರತ ತಂಡ ತನ್ನದೇ ನೆಲದಲ್ಲಿ ಮಲೇಷ್ಯಾ ವಿರುದ್ಧ ಕಾಮನ್‌ವೆಲ್ತ್ ಗೇಮ್ಸ್ ಫೈನಲ್‌ನಲ್ಲಿ ಸೋಲು ಕಂಡಿತ್ತು. ಈ ಸೋಲಿಗೆ ಸೈನಾ, ಶ್ರೀಕಾಂತ್ ಒಳಗೊಂಡ ಭಾರತ ಈಗ ಸೇಡು ತೀರಿಸಿಕೊಂಡಿತು. ಸಿಂಗಲ್ಸ್‌ನಲ್ಲಿ ಶ್ರೀಕಾಂತ್, ಸೈನಾ ನೆಹ್ವಾಲ್ ಗೆಲುವುಗಳಿಸಿದರು. ಇನ್ನು ಮಿಶ್ರ ಡಬಲ್ಸ್‌ನಲ್ಲೂ ಭಾರತ ಗೆಲುವಿನ ಸಿಹಿ ಕಂಡಿದ್ದರಿಂದ ಭಾರತ ಚಿನ್ನದ ನಗು ಬೀರುವಂತಾಯಿತು.
ಟಿಟಿ ಪುರುಷರ ತಂಡಕ್ಕೂ ಚಿನ್ನ: ಟಿಟಿಯಲ್ಲಿ ಭಾರತ ಮಹಿಳೆಯರು ಮೊದಲ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಬೆನ್ನಲ್ಲೇ ಭಾರತ ಪುರುಷರ ತಂಡವೂ ಚಿನ್ನದ ಗೆಲುವು ಸಾಧಿಸಿದೆ. ಭಾರತ ಫೈನಲ್‌ನಲ್ಲಿ ನೈಜೀರಿಯಾವನ್ನು 3-0 ಅಂತರದಿಂದ ವಾಶ್‌ಔಟ್ ಮಾಡಿತು. ಭಾರತದ ಪರ ಅಚಂತಾ ಕಮಲ್, ಸಾಥಿಯಾನ್ ಗುಣಶೇಖರನ್, ಹರ್ಮಿತ್ ದೇಸಾಯಿ ಗೆಲುವಿನ ರೂವಾರಿಗಳಾದರು. ಇದಕ್ಕೂ ಮೊದಲು ಭಾರತ ಮಹಿಳೆಯರು ಸಿಂಗಾಪುರವನ್ನು ಸೋಲಿಸಿ ಟಿಟಿ ಪದಕ ಗೆದ್ದಿದ್ದನ್ನು ಸ್ಮರಿಸಬಹುದು.
ಮೆಹುಲಿಗೆ ಬೆಳ್ಳಿ , ಅಪೂರ್ವಿಗೆ ಕಂಚು: ಪುರುಷರ ವಿಭಾಗದ ಶೂಟಿಂಗ್‌ನಲ್ಲಿ ಪದಕ ಗೆದ್ದ ಬೆನ್ನಲ್ಲೇ ಭಾರತ ಮಹಿಳೆಯರು ಕೂಡ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಮಹಿಳಾ 10 ಮೀ. ಏರ್ ರೈಫಲ್ ವಿಭಾಗದಲ್ಲಿ ಮೆಹುಲಿ ಘೋಷ್ ಬೆಳ್ಳಿ ಪದಕ ಗೆದ್ದಿದ್ದಾರೆ. 17 ವರ್ಷದ ಘೋಷ್ 247.2 ಸರಾಸರಿ ಅಂಕದೊಂದಿಗೆ ಅಂತಿಮ ಸುತ್ತಿನಲ್ಲಿ ಪದಕ ಗೆದ್ದರು. ಇದೇ ವಿಭಾಗದಲ್ಲಿ ಅಪೂರ್ವಿ ಚಾಂಡೆಲ 225.3 ಅಂಕದೊಂದಿಗೆ ಕಂಚಿನ ಪದಕ ವಿಜೇತರಾದರು.
ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ; ವೇಟ್‌ಲಿಫ್ಟಿಂಗ್‌ನಲ್ಲಿ ಭಾರತೀಯರ ಪದಕ ಸಾಧನೆ ಮುಂದುವರಿದಿದೆ. 105 ಕೆ.ಜಿ ವಿಭಾಗದಲ್ಲಿ ಪ್ರದೀಪ್ ಸಿಂಗ್ ಒಟ್ಟಾರೆ 352 ಕೆ.ಜಿ ಎತ್ತಿ ಬೆಳ್ಳಿಯ ನಗು ಮೂಡಿಸಿದ್ದಾರೆ. ಅವರು ಕ್ರಮವಾಗಿ 152 ಮತ್ತು 200 ಕೆ.ಜಿ ಎತ್ತಿದರು. ಕಾಮನ್‌ವೆಲ್ತ್ ಗೇಮ್ಸ್ ದಾಖಲೆಯ 211 ಕೆ.ಜಿ ಎತ್ತುವ ಪ್ರಯತ್ನ ನಡೆಸಿದರು. ಅದು ಸಾಧ್ಯವಾಗಲಿಲ್ಲ. ಹೀಗಾಗಿ ದಾಖಲೆ ನಿರ್ಮಿಸುವ ಅವಕಾಶ ಕಳೆದುಕೊಳ್ಳಬೇಕಾಯಿತು.