Advertisement

ವಿಶ್ವ ಗೆದ್ದ ಭಾರತ ವಿಕಲಚೇತನರು

06:00 PM Aug 30, 2019 | Sriram |

ವಿಶ್ವಕಪ್‌ ಏಕದಿನ ಕ್ರಿಕೆಟ್‌ ಟ್ರೋಫಿ ಗೆಲ್ಲುವಲ್ಲಿ ಭಾರತ ವಿಫಲವಾಗಿರಬಹುದು. ಆದರೆ ಇಂಗ್ಲೆಂಡ್‌ನ‌ಲ್ಲಿ ನಡೆದ ವಿಕಲಚೇತನರ ವಿಶ್ವ ಕ್ರಿಕೆಟ್‌ ಕೂಟವನ್ನು ಭಾರತ ಗೆದ್ದು ಹೊಸ ಇತಿಹಾಸ ನಿರ್ಮಿಸಿದೆ. ಕೋಟ್ಯಂತರ ಅಭಿಮಾನಿಗಳ ಕನಸನ್ನು ನನಸಾಗಿಸಿದೆ.

Advertisement

ನಾಲ್ಕು ರಾಷ್ಟ್ರಗಳ ಕದನ:
ಇಂಗ್ಲೆಂಡ್‌, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಪಾಕಿಸ್ತಾನ ಕೂಟದಲ್ಲಿ ಪಾಲ್ಗೊಂಡಿದ್ದವು. ರೌಂಡ್‌ ರಾಬಿನ್‌ ಮಾದರಿಯ ಪಂದ್ಯಗಳಾಗಿದ್ದವು. ಆಡಿದ ಎಲ್ಲ ಪಂದ್ಯಗಳಲ್ಲೂ ಭಾರತ ಗೆದ್ದಿತು. ಅಜೇಯವಾಗಿ ಸರಣಿ ಕೊನೆಗೊಳಿಸಿತು.

ಹಲವು ದೇಶಗಳಲ್ಲಿ ಶೇ.18ರಷ್ಟು ದೈಹಿಕ ನ್ಯೂನತೆಗಳಿದ್ದರೆ ಅಂಥಹವರನ್ನು ಅಂಗವಿಕಲರೆಂದೇ ಪರಿಗಣಿಸಿ ವಿಕಲಚೇತನರ ತಂಡಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಆದರೆ ಭಾರತದಲ್ಲಿ ಶೇ.40ರಷ್ಟು ಅಂಗವಿಕಲತೆಯಿದ್ದರೆ ಮಾತ್ರ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಬಲಿಷ್ಠ ಸ್ಪರ್ಧೆ ಇದ್ದರೂ ಭಾರತ ಫೈನಲ್‌ನಲ್ಲಿ ಮಿಂಚಿನ ಪ್ರದರ್ಶನ ನೀಡಿತು. ಇಬ್ಬರು ಬ್ಲೇಡ್‌ ಕ್ರಿಕೆಟಿಗರನ್ನು ಹೊಂದಿದ್ದ ಇಂಗ್ಲೆಂಡ್‌ ತಂಡಕ್ಕೆ ಆಘಾತ ನೀಡಿತು.

ಯಾವ ರಾಜ್ಯದಿಂದ ಎಷ್ಟು ಆಟಗಾರರು?
ಭಾರತ ತಂಡಕ್ಕೆ ವಿವಿಧ ರಾಜ್ಯಗಳಿಂದ ಆಟಗಾರರನ್ನು ಆಯ್ಕೆ ಮಾಡಲಾಗಿತ್ತು. ಕರ್ನಾಟಕದಿಂದ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದರು. ಆಂಧ್ರಪ್ರದೇಶದಿಂದ ಇಬ್ಬರು, ಕೇರಳದಿಂದ ಒಬ್ಬರು, ಜಮ್ಮುಕಾಶ್ಮೀರದಿಂದ ಇಬ್ಬರು, ಮಹಾರಾಷ್ಟ್ರದಿಂದ ಮೂವರು, ಹರ್ಯಾಣ, ದಿಲ್ಲಿ ಹಾಗೂ ಪಂಜಾಬ್‌ನಿಂದ ತಲಾ ಒಬ್ಬ ಆಟಗಾರರು ಸ್ಥಾನ ಪಡೆದಿದ್ದರು. ಭಾರತ ತಂಡವನ್ನು ಮುಂಬೈನ ವಿಕ್ರಾಂತ ಖೇಣಿ ಮುನ್ನಡೆಸಿದ್ದರು.

ರಾಜ್ಯದ ಪ್ರತಿಭೆಗಳು ಆಕರ್ಷಣೆ:
ಚಿಕ್ಕೂಡಿಯ ನರೇಂದ್ರ ಮಂಗೋರೆ ತಮ್ಮ ಆಲ್‌ರೌಂಡರ್‌ ಆಟದ ಮೂಲಕ ಕೂಟದಲ್ಲಿ ಗಮನ ಸೆಳೆದರು. ಹುಬ್ಬಳ್ಳಿ ಪ್ರೀಮಿಯರ್‌ ಲೀಗ್‌ ಸ್ಥಳೀಯ ಪಂದ್ಯದಲ್ಲೂ ನರೇಂದ್ರ ಮಂಗೋರೆ ಮಿಂಚಿನ ಪ್ರದರ್ಶನ ನೀಡಿದ್ದರು. ಉಳಿದಂತೆ ಚಿಕ್ಕಬಳ್ಳಾಪುರದ ಜಿತೇಂದ್ರ ವಿ.ಎನ್‌. ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದರು. ಆಂಧ್ರಪ್ರದೇಶ ಆಟೋ ಚಾಲಕನ ಪುತ್ರನಾಗಿರುವ ರಮೇಶ್‌ ನಾಯ್ಡು ಶ್ರೇಷ್ಠ ನಿರ್ವಹಣೆ ಪ್ರದರ್ಶಿಸಿದರು. ಸುಲಕ್ಷಣ ಕುಲಕರ್ಣಿ ಮಾಜಿ ರಣಜಿ ಆಟಗಾರ ಭಾರತ ತಂಡದ ಕೋಚ್‌ ಆಗಿ ಕರ್ತವ್ಯ ನಿರ್ವಹಿಸಿದರು. ಶಿವಾನಂದ ಗುಂಜಾಳ ಟೀಮ್‌ ಮ್ಯಾನೇಜರ್‌ ಆಗಿದ್ದರು.

Advertisement

ಶಿಬಿರದಿಂದ ಆಟಗಾರರ ಆಯ್ಕೆ:
ಕೂಟಕ್ಕೂ ಮೊದಲು ವಿಕಲಚೇತನ ತಂಡಕ್ಕೆ ಆಯ್ಕೆ ನಡೆದಿತ್ತು. ದೇಶದ ವಿವಿಧ ರಾಜ್ಯದ ಸುಮಾರು 500ಕ್ಕೂ ಹೆಚ್ಚು ಆಸಕ್ತ ವಿಕಲಚೇತನ ಕ್ರಿಕೆಟ್‌ ಆಟಗಾರರು ಶಿಬಿರಕ್ಕೆ ಆಗಮಿಸಿದ್ದರು. ಹುಬ್ಬಳ್ಳಿಯಲ್ಲಿ ಸೇರಿೆ¤ ವಿವಿಧ ಕಡೆ ಕ್ಯಾಂಪ್‌ ಆಯೋಜಿಸಲಾಗಿತ್ತು. ತಂಡದ ಆಯ್ಕೆಯ ನಂತರ ಹಲವು ಅಭ್ಯಾಸ ಪಂದ್ಯಗಳನ್ನು ಆಡಿಸಲಾಯಿತು. ಸರಣಿ ಆರಂಭಕ್ಕೆ 8 ದಿನ ಮುನ್ನ ಇಂಗ್ಲೆಂಡ್‌ಗೆ ತೆರಳಿದ ತಂಡ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿತು. ಸರಣಿಯಲ್ಲಿ ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಅತ್ಯಂತ ರೋಚಕವಾಗಿ ಜಯಿಸಿತು. ಪಂದ್ಯಗಳು ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ (ಅಫ್ಘಾನಿಸ್ತಾನ 80) ಅಲ್ಪ ಮೊತ್ತಕ್ಕೆ ವಿಕೆಟ್‌ ಕಳೆದುಕೊಂಡು (8 ರನ್‌ಗಳಿಗೆ 4 ವಿಕೆಟ್‌) ಸೋಲುವ ಭೀತಿಯಲ್ಲಿದ್ದ ಭಾರತ ತಂಡವನ್ನು ನಾಯಕ ವಿಕ್ರಾಂತ ಖೇಣಿ ಹಾಗೂ ಅನೀಶ್‌ ರಾಜನ್‌ ಜೊತೆಯಾಟದಲ್ಲಿ 63 ರನ್‌ಗಳಿಸಿ ತಂಡವನ್ನು ಗೆಲುವಿನ ದಡಕ್ಕೆ ಮುಟ್ಟಿಸಿದರು.

ಇಂಗ್ಲೆಂಡ್‌ ತಂಡವನ್ನು ಮಣಿಸಿ ವಿಶ್ವ ಸರಣಿ ಜಯಿಸಿ ಮರಳಿದ ಭಾರತಕ್ಕೆ ಅದ್ಭುತ ಸ್ವಾಗತ ಸಿಕ್ಕಿದೆ. ಅಭಿಮಾನಿಗಳು ತಂಡದ ಆಟಗಾರರನ್ನು ಕೊಂಡಾಡಿದ್ದಾರೆ. ಆದರೆ ವಿಕಲಚೇತನ ಕ್ರಿಕೆಟನ್ನು ಇನ್ನಷ್ಟು ಪ್ರೋತ್ಸಾಹಿಸುವುದು ಅವಶ್ಯಕವಾಗಿದೆ. ತಂಡದ ಆಟಗಾರರಿಗೆ ಸರಕಾರ ಉದ್ಯೋಗಾವಕಾಶ ನೀಡಿದರೆ ಅನುಕೂಲವಾಗುತ್ತದೆ. ಅನುಕಂಪ ಬೇಡ ಪ್ರೋತ್ಸಾಹ ಬೇಕು ಎಂಬುದು ಅಂಗವಿಕಲ ಕ್ರಿಕೆಟಿಗರ ಆಗ್ರಹವಾಗಿದೆ.

ಅನೀಶ್‌ ಶ್ರೇಷ್ಠ ಬೌಲರ್‌
ಕೇರಳದ ಅನೀಶ್‌ ರಾಜನ್‌ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್‌ ಪಡೆದು ದಾಖಲೆ ನಿರ್ಮಿಸಿದರು. ಒಟ್ಟಾರೆ ಸರಣಿಯಲ್ಲಿ 12 ವಿಕೆಟ್‌ ಪಡೆದು ಅತ್ಯುತ್ತಮ ಬೌಲರ್‌ ಪ್ರಶಸ್ತಿ ಪಡೆದರು.

ವಿಲೀನದಿಂದ ಸಶಕ್ತ ತಂಡ
ವಿಕಲಚೇತನ ಕ್ರಿಕೆಟ್‌ನ ಮೂರು ಸಂಸ್ಥೆಗಳು ಅಜಿತ್‌ ವಾಡೇಕರ ಆರಂಭಿಸಿದ ಮುಂಬೈ ಅಂಗವಿಕಲರ ಸಂಸ್ಥೆಯಲ್ಲಿ ವಿಲೀನಗೊಂಡಿದ್ದರಿಂದ ಸದೃಢ ತಂಡ ಹೊರಹೊಮ್ಮಲು ಸಾಧ್ಯವಾಯಿತು.

ವಿದೇಶದಲ್ಲಿ ಕ್ರಿಕೆಟ್‌ ಆಡಿ ಟ್ರೋಫಿ ಗೆದ್ದಿದ್ದು ವಿಶಿಷ್ಟ ಅನುಭವ. ನಮ್ಮ ತಂಡ ಸಮತೋಲಿತ ತಂಡವಾಗಿತ್ತು. ಬೌಲಿಂಗ್‌, ಬ್ಯಾಟಿಂಗ್‌ ಹಾಗೂ ಫೀಲ್ಡಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ನಾವು ನಿರಂತರವಾಗಿ ಗೆಲ್ಲಲು ಸಾಧ್ಯವಾಯಿತು. ಬಿಸಿಸಿಐ ನಮ್ಮ ಸಾಧನೆಯನ್ನು ಶ್ಲಾಘಿಸಿದೆ. ಫೇಸ್‌ಬುಕ್‌ನಲ್ಲಿ ನಮ್ಮ ಸಾಧನೆಯ ಫೋಟೊಗಳನ್ನು ಪ್ರಕಟಿಸಿ ಖುಷಿ ಹಂಚಿಕೊಂಡಿದೆ. ಕ್ರಿಕೆಟ್‌ ಉತ್ತೇಜನಕ್ಕೆ ಆದ್ಯತೆ ನೀಡುವ ಸಿರಿವಂತ ಕ್ರಿಕೆಟ್‌ ಸಂಸ್ಥೆ ಬಿಸಿಸಿಐ, ಅಂಗವಿಕಲರ ಕ್ರಿಕೆಟ್‌ಗೆ ಪ್ರೋತ್ಸಾಹ ನೀಡುವ ವಿಶ್ವಾಸವಿದೆ. ತಂಡದ ಸ್ಥಿರ ಪ್ರದರ್ಶನಕ್ಕೆ, ಅಭ್ಯಾಸಕ್ಕಾಗಿ ಪ್ರಾಯೋಜಕರ ನೆರವು ಅಗತ್ಯವಾಗಿದೆ.
-ಜಿತೇಂದ್ರ , ವಿಕಲಚೇತನ ಕ್ರಿಕೆಟಿಗ

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯ ನಮಗೆ ಮುಖ್ಯವಾಗಿತ್ತು. ಹುಡುಗರು ಪಂದ್ಯದುದ್ದಕ್ಕು ಕ್ರಿಯಾಶೀಲರಾಗಿ ಆಡಿದರು. ಅಫ್ಘಾನಿಸ್ತಾನ ವಿರುದ್ಧದ ಪಂದ್ಯವನ್ನು ಹೊರತುಪಡಿಸಿದರೆ ಉಳಿದ ಪಂದ್ಯಗಳು ಒನ್‌ಸೈಡೆಡ್‌ ಪಂದ್ಯಗಳಾಗಿದ್ದವು. ತಂಡದ ಕೋಚ್‌, ಮ್ಯಾನೇಜರ್‌ ನಮ್ಮ ಸಾಮರ್ಥ್ಯವನ್ನು ಮನವರಿಕೆ ಮಾಡಿಕೊಟ್ಟು ಶಕ್ತಿಮೀರಿ ಆಡಲು ಪ್ರೇರೆಪಿಸಿದರು. ಟ್ರೋಫಿ ಗೆಲುವು ನಮ್ಮ ವೈಯಕ್ತಿಕ ಬದುಕಿನ ನೋವನ್ನು ಮರೆಮಾಚಿದೆ. ಇನ್ನಷ್ಟು ಸಾಧನೆ ಮಾಡಲು ಉತ್ಸಾಹ ತುಂಬಿದೆ.
-ನರೇಂದ್ರ ಮಂಗೋರೆ, ವಿಕಲಚೇತನ ಕ್ರಿಕೆಟಿಗ

ಹುಡುಗರು ಅಮೋಘ ಸಾಧನೆ ಮಾಡಿದ್ದಾರೆ. ವಿಶ್ವ ಸರಣಿ ಗೆಲ್ಲುವ ಮೂಲಕ ಇಂಗ್ಲೆಂಡ್‌ನ‌ಲ್ಲಿ ಭಾರತ ಧ್ವಜವನ್ನು ಹಾರಿಸಿದ್ದಾರೆ. ಅಂಗವಿಕಲರ ಕ್ರಿಕೆಟ್‌ ತಂಡದಲ್ಲಿ ಬಹುತೇಕ ಹುಡುಗರು ಬಡವರು. ಚಿಕ್ಕಬಳ್ಳಾಪುರದ ಹುಡುಗ ಜಿತೇಂದ್ರ ಸರಣಿಗಾಗಿ ಉದ್ಯೋಗಕ್ಕೆ ರಾಜಿನಾಮೆ ನೀಡಬೇಕಾಯಿತು. ಹುಡುಗರಿಗೆ ಸರಕಾರ ಉದ್ಯೋಗ ಕಲ್ಪಿಸಿಕೊಡಬೇಕು. ಕಾರ್ಪೋರೇಟ್‌ ಕಂಪನಿಗಳು ಪ್ರೋತ್ಸಾಹಿಸಬೇಕು. ಆಗ ಆಸಕ್ತ ವಿಕಲಚೇತನ ಆಟಗಾರರು ಕ್ರಿಕೆಟ್‌ ಆಡಲು ಆಸಕ್ತಿ ತೋರುತ್ತಾರೆ. ವಿಕಲಚೇತನರ ಕ್ರಿಕೆಟ್‌ಗೆ ಉತ್ತೇಜನ ನೀಡುವುದು ಅವಶ್ಯಕವಾಗಿದೆ.
-ಶಿವಾನಂದ ಗುಂಜಾಳ, ಭಾರತ ವಿಕಲಚೇತನ ಕ್ರಿಕೆಟ್‌ ತಂಡದ ವ್ಯವಸ್ಥಾಪಕ

-ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next