Advertisement

ಏರುತ್ತಲೇ ಇದೆ ಸೋಂಕಿನ ಗ್ರಾಫ್; ಒಂದೇ ದಿನ 2.64 ಲಕ್ಷ ಮಂದಿಗೆ ಕೋವಿಡ್‌ ದೃಢ

09:03 PM Jan 14, 2022 | Team Udayavani |

ನವದೆಹಲಿ: ದೇಶದಲ್ಲಿ ಕೊರೊನಾ ಮೂರನೇ ಅಲೆಯು ಕ್ಷಿಪ್ರವಾಗಿ ವ್ಯಾಪಿಸುತ್ತಿದ್ದು, ಗುರುವಾರದಿಂದ ಶುಕ್ರವಾರಕ್ಕೆ ಒಂದೇ ದಿನ 2,64,202 ಮಂದಿಗೆ ಸೋಂಕು ದೃಢಪಟ್ಟಿದೆ. ಕಳೆದ 239 ದಿನಗಳಲ್ಲೇ ದಾಖಲಾದ ಗರಿಷ್ಠ ದೈನಂದಿನ ಪ್ರಕರಣ ಇದಾಗಿದೆ. ಅಲ್ಲದೇ, ಕೊರೊನಾ ಪಾಸಿಟಿವಿಟಿ ದರವು ಶೇ.14.78ಕ್ಕೇರಿಕೆಯಾಗಿದೆ.

Advertisement

ಇನ್ನು, ದೇಶದಲ್ಲಿ ಒಮಿಕ್ರಾನ್‌ ಪ್ರಕರಣಗಳ ಸಂಖ್ಯೆ ಶುಕ್ರವಾರ 5,753ಕ್ಕೇರಿದೆ. ಇದೇ ವೇಳೆ, ದೆಹಲಿಯಲ್ಲಿ ಶುಕ್ರವಾರ 24,383 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 34 ಮಂದಿ ಸಾವಿಗೀಡಾಗಿದ್ದಾರೆ. ಪಾಸಿಟಿವಿಟಿ ದರ ಶೇ.30.64ಕ್ಕೇರಿಕೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ 22,645 ಪ್ರಕರಣಗಳು ಪತ್ತೆಯಾಗಿದೆ.

ಕೊರೊನಾ ಸೋಂಕಿನ ಪ್ರಸ್ತುತ ಅಲೆಯಲ್ಲಿ ದೆಹಲಿಯಲ್ಲಿ ಸಾವಿಗೀಡಾದ ಸೋಂಕಿತರ ಪೈಕಿ ಶೇ.75ರಷ್ಟು ಮಂದಿ ಎರಡೂ ಡೋಸ್‌ ಲಸಿಕೆ ಪಡೆಯದವರು ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ಹೇಳಿದ್ದಾರೆ. ಜ.9ರಿಂದ 12ರ ಅವಧಿಯಲ್ಲಿ 97 ಮಂದಿ ಸಾವಿಗೀಡಾಗಿದ್ದು, ಆ ಪೈಕಿ 70 ಮಂದಿ ಲಸಿಕೆ ಪಡೆಯದವರು ಎಂದೂ ಅವರು ಮಾಹಿತಿ ನೀಡಿದ್ದಾರೆ.

ಶಾಲೆ ಬಂದ್‌:
ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಶುಕ್ರವಾರ ಕೇರಳ ಮತ್ತು ಮಧ್ಯಪ್ರದೇಶ ಸರ್ಕಾರಗಳು ಶಾಲೆಗಳನ್ನು ಬಂದ್‌ ಮಾಡಿ ಆದೇಶ ಹೊರಡಿಸಿವೆ. ಕೇರಳದಲ್ಲಿ ಜ.21ರವರೆಗೆ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕ್ಲಾಸ್‌ ಮಾತ್ರ ಇರಲಿವೆ.

ಇದನ್ನೂ ಓದಿ:ರಾಜ್ಯದಲ್ಲಿಂದು ದಾಖಲೆಯ ಕೋವಿಡ್ ಪರೀಕ್ಷೆ : 28,723 ಕೇಸ್, 14 ಸಾವು

Advertisement

ಸಾವಿನ ಸಂಖ್ಯೆ ಮುಚ್ಚಿಟ್ಟಿಲ್ಲ
ಕೊರೊನಾ ಮೊದಲ ಮತ್ತು 2ನೇ ಅಲೆಯಲ್ಲಿ ಕೊರೊನಾ ಸಾವಿನ ಸಂಖ್ಯೆಯನ್ನು ಮುಚ್ಚಿಡಲಾಗಿದೆ ಎಂಬ ಮಾಧ್ಯಮ ವರದಿಯನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಇದೊಂದು ಸುಳ್ಳು, ತಪ್ಪುಮಾಹಿತಿಯ ಹಾಗೂ ದುರುದ್ದೇಶದ ವರದಿ ಎಂದು ಹೇಳಿರುವ ಕೇಂದ್ರ ಆರೋಗ್ಯ ಸಚಿವಾಲಯ, ಜಾಗತಿಕ ಸ್ವೀಕಾರಾರ್ಹ ಮಾನದಂಡದ ಪ್ರಕಾರವೇ ಸಾವಿನ ಸಂಖ್ಯೆಯನ್ನು ಲೆಕ್ಕ ಹಾಕಲಾಗಿದೆ ಎಂದು ಸ್ಪಷ್ಟಪಡಿಸಿದೆ. ಮೊದಲೆರಡು ಅಲೆಯಲ್ಲಿ 30 ಲಕ್ಷಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು, ಸರ್ಕಾರ ಸರಿಯಾದ ಲೆಕ್ಕ ನೀಡಿಲ್ಲ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಕೊರೊನಾ ತೀವ್ರತೆ ಯಾರಿಗೆ ಹೆಚ್ಚು?
ಪೋಲೆಂಡ್‌ ವಿಜ್ಞಾನಿಗಳು ಮಹತ್ವದ ಸಂಶೋಧನೆ ಮಾಡಿದ್ದಾರೆ. ಅವರೊಂದು ವಂಶವಾಹಿಯನ್ನು ಪತ್ತೆಹಚ್ಚಿದ್ದಾರೆ. ಯಾವ ವ್ಯಕ್ತಿಗಳಲ್ಲಿ ಈ ವಂಶವಾಹಿಯಿರುತ್ತದೋ, ಅವರಿಗೆ ಕೊರೊನಾ ಸೋಂಕು ತೀವ್ರವಾಗಿ ಬಾಧಿಸುತ್ತದೆ ಎಂದಿದ್ದಾರೆ. ವ್ಯಕ್ತಿಯ ವಯಸ್ಸು, ತೂಕ, ಲಿಂಗದ ಬಳಿಕ ಇದೂ ಕೂಡ ಕೊರೊನಾ ತೀವ್ರತೆಯನ್ನು ಪತ್ತೆಹಚ್ಚಲು ನೆರವು ನೀಡುತ್ತದೆ ಎಂದಿದ್ದಾರೆ. ಸದ್ಯ ಪೋಲೆಂಡ್‌ನ‌ ಶೇ.14, ಭಾರತದ ಶೇ.27, ಯೂರೋಪ್‌ ಶೇ.8-9 ಜನಸಂಖ್ಯೆಯಲ್ಲಿ ಈ ವಂಶವಾಹಿ ಇದೆ ಎಂದು ಗೊತ್ತಾಗಿದೆ ಎಂದು ಪೋಲೆಂಡ್‌ನ‌ ಬಯಲಿಸ್ಟೋಕ್‌ನ ಮೆಡಿಕಲ್‌ ವಿವಿ ಸಂಶೋಧಕರು ಕಂಡುಕೊಂಡಿದ್ದಾರೆ. ಸದ್ಯ ಕೇಂದ್ರ ಮತ್ತು ಪೂರ್ವ ಯೂರೋಪ್‌ಗ್ಳಲ್ಲಿ ಕೊರೊನಾ ಲಸಿಕೆ ತೆಗೆದುಕೊಳ್ಳಲು ಭಾರೀ ಹಿಂಜರಿಕೆಯಿದೆ. ಈ ವಂಶವಾಹಿಯ ಮೂಲಕ ಗರಿಷ್ಠ ಅಪಾಯ ಹೊಂದಿರುವ ವ್ಯಕ್ತಿಗಳನ್ನು ಗುರ್ತಿಸಿ ತಕ್ಷಣ ಅವರು ಲಸಿಕೆ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಬಹುದು. ಹಾಗೆಯೇ ಹೆಚ್ಚಿನ ಮುತುವರ್ಜಿ ವಹಿಸಿ ಅವರಿಗೆ ಚಿಕಿತ್ಸೆ ನೀಡಲು ಯತ್ನಿಸಬಹುದು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next