ನವದೆಹಲಿ: ಭಾರತದಲ್ಲಿ ಶುಕ್ರವಾರ (05-06-2020) ಒಂದೇ ದಿನ ಕೋವಿಡ್ -19 ಸೋಂಕಿನಿಂದಾಗಿ 300 ಜನರು ಮೃತಪಟ್ಟಿದ್ದು, ವೈರಸ್ ಕಾಣಿಸಿಕೊಂಡಾಗಿನಿಂದ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ಸಾವು ಸಂಭವಿಸಿದೆ.
ದೇಶದಲ್ಲಿ ವೈರಸ್ ಆರ್ಭಟ ದಿನೇ ದಿನೇ ದ್ವಿಗುಣಗೊಳ್ಳುತ್ತಿದ್ದು ಈವರೆಗೂ 6,600 ಜನರು ಪ್ರಾಣ ತ್ಯೆಜಿಸಿದ್ದಾರೆ. ಅದಾಗ್ಯೂ ಭಾರತದಲ್ಲಿ ಕೋವಿಡ್ 19 ಸಾವಿನ ಪ್ರಮಾಣ (CFR) 2.8% ರಷ್ಟಿದ್ದು, ಜಾಗತಿಕವಾಗಿ 5.8% ರಷ್ಟಿದೆ.
ಕಳೆದ ಒಂದು ವಾರದಿಂದ ದೇಶದಲ್ಲಿ ಸೋಂಕಿಗೆ ತುತ್ತಾಗಿ ಸರಾಸರಿ 240 ಜನರು ಮೃತರಾಗುತ್ತಿದ್ದು, ಇದಕ್ಕೂ ಮೊದಲು 170-180 ಜನರು ವೈರಸ್ ಗೆ ಪ್ರತಿದಿನ ಬಲಿಯಾಗುತ್ತಿದ್ದರು. ಮಾತ್ರವಲ್ಲದೆ ಕಳೆದ 3-4 ದಿನಗಳಿಂದ ಸೋಂಕಿತರ ಪ್ರಮಾಣ ದಿನನಿತ್ಯ 10 ಸಾವಿರದ ಗಡಿ ತಲುಪುತ್ತಿದ್ದು, ಒಟ್ಟಾರೆಯಾಗಿ 2,36,037 ಜನರು ಈ ಮಹಾಮಾರಿ ಸೋಂಕಿಗೆ ಭಾದಿತರಾಗಿದ್ದಾರೆ. ಇದೀಗ ಭಾರತ ಇಟಲಿಯನ್ನು ಮೀರಿಸಿ ಕೋವಿಡ್ -19 ಹಾಟ್ ಸ್ಪಾಟ್ ಗಳಲ್ಲಿ 6ನೇ ಸ್ಥಾನ ಪಡೆದುಕೊಂಡಿದೆ.
ಇದುವರೆಗೂ ಭಾರತದಲ್ಲಿ 1.12 ಲಕ್ಷ ಸೋಂಕಿತರು ಗುಣಮುಖರಾಗಿದ್ದು, 1 ಲಕ್ಷ ಸಕ್ರೀಯ ಪ್ರಕರಣಗಳಿವೆ. ಮಹಾರಾಷ್ಟ್ರದಲ್ಲೇ ಅತೀ ಹೆಚ್ಚು ಸೋಂಕಿತರಿದ್ದು, ಈವರೆಗೂ 80,229 ಪ್ರಕರಣಗಳು ಪತ್ತೆಯಾಗಿವೆ.
ಮೊದಲ ಬಾರಿಗೆ ದೇಶದಲ್ಲಿ ಕಠಿಣ ಲಾಕ್ ಡೌನ್ ಜಾರಿಗೆ ಬಂದ ನಂತರ ಸೋಂಕಿಗೆ ತುತ್ತಾಗುವವರ ಸಂಖ್ಯೆ ಬಹಳ ಕಡಿಮೆಯಿತ್ತು, ಆದರೇ ಜೂನ್ ವೇಳೆಗೆ ಲಾಕ್ ಡೌನ್ ಸಡಿಲಿಸಿದ ನಂತರ ವೈರಸ್ ಹರಡುವ ಪ್ರಮಾಣ ದುಪ್ಪಟ್ಟಾಗುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.