Advertisement

2021 ವನಿತಾ ಏಕದಿನ ವಿಶ್ವಕಪ್‌ಗೆ ಭಾರತ ನೇರ ಪ್ರವೇಶ

11:12 AM Apr 17, 2020 | Sriram |

ಹೊಸದಿಲ್ಲಿ: ಕೊವೀಡ್‌-19 ವಿಶ್ವಾದ್ಯಂತ ವ್ಯಾಪಕ ವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕ್ರೀಡಾಲೋಕವೇ ಸ್ತಬ್ಧವಾಗಿದ್ದು, ಕ್ರಿಕೆಟ್‌ ಚಟುವಟಿಕೆಗಳಂತೂ ವೈರಸ್‌ ನಿಯಂತ್ರಣಕ್ಕೆ ಬಾರದೇ ಆರಂಭವಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

Advertisement

ಕಳೆದ ವರ್ಷ ಪಾಕಿಸ್ಥಾನ ವಿರುದ್ಧ ಐಸಿಸಿ ವನಿತಾ ಚಾಂಪಿಯನ್‌ಶಿಪ್‌ನ ಅಂಗವಾಗಿ ನಡೆಯಬೇಕಿದ್ದ ಸರಣಿ ಸರಕಾರದ ಅನುಮತಿ ಸಿಗದ ಹಿನ್ನೆಲೆಯಲ್ಲಿ ರದ್ದಾದ ಬಳಿಕ ಈ ಸರಣಿಯ ಲಭಿಸುವ ಅಂಕವನ್ನು ಸಮನಾಗಿ ಹಂಚಿಕೊಳ್ಳಲು ಇದೀಗ ಐಸಿಸಿ ತಾಂತ್ರಿಕ ಸಮಿತಿ ನಿರ್ಧರಿಸಿದ್ದರಿಂದ ಭಾರತವು ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಸಂಪಾದಿಸಿ 2021ರಲ್ಲಿ ನಡೆಯಲಿರುವ ಐಸಿಸಿ ಮಹಿಳಾ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ನೇರ ಅರ್ಹತೆ ಪಡೆದುಕೊಂಡಿದೆ.

ಕಿವೀಸ್‌ ಆತಿಥ್ಯದಲ್ಲಿ 2021ರ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿ ನಡೆಯಲಿದ್ದು, ಐಸಿಸಿ ಮಹಿಳಾ ಚಾಂಪಿಯನ್‌ಶಿಪ್‌ನಲ್ಲಿ ಅಗ್ರ ನಾಲ್ಕು ಸ್ಥಾನ ಪಡೆಯುವ ತಂಡಗಳು ನೇರ ಅರ್ಹತೆ ಪಡೆದುಕೊಳ್ಳುತ್ತವೆ. ಇನ್ನುಳಿದ ಸ್ಥಾನಗಳಿಗೆ ಉಳಿದ ತಂಡಗಳು ಅರ್ಹತಾ ಸುತ್ತಿನ ಟೂರ್ನಿಯಲ್ಲಿ ಆಡಬೇಕಿದೆ.

ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯ (37 ಅಂಕ), ಇಂಗ್ಲೆಂಡ್‌ (29), ದಕ್ಷಿಣ ಆಫ್ರಿಕಾ (25) ಮತ್ತು ಭಾರತ (23) ಅಂಕಗಳನ್ನು ಪಡೆದಿದ್ದು ವಿಶ್ವಕಪ್‌ ಟೂರ್ನಿಗೆ ನೇರ ಅರ್ಹತೆ ಪಡೆದುಕೊಂಡಿವೆ. ಉಳಿದಂತೆ ಪಾಕಿಸ್ಥಾನ (19), ಕಿವೀಸ್‌ (17), ವಿಂಡೀಸ್‌ (13) ಮತ್ತು ಶ್ರೀಲಂಕಾ (5) ತಂಡಗಳು ಅರ್ಹತಾ ಸುತ್ತಿನ ಟೂರ್ನಿಯಲ್ಲಿ ಆಡಬೇಕಿದೆ.

ಭಾರತ ಮತ್ತು ಪಾಕಿಸ್ಥಾನ ಮಹಿಳಾ ತಂಡಗಳ ನಡುವೆ 2019ರ ಜುಲೈ ಮತ್ತು ನವೆಂಬರ್‌ನಲ್ಲಿ 6 ಸುತ್ತಿನ ಪಂದ್ಯಗಳು ನಡೆಯಬೇಕಿತ್ತು. ಆದರೆ ಈ ಸರಣಿ ಆಯೋಜನೆ ಸಾಧ್ಯವಾಗಿಲ್ಲ. ಈ ಸರಣಿ ಆರಂಭವಾಗುವ ಮೊದಲು ಭಾರತ 20 ಮತ್ತು ಪಾಕಿಸ್ಥಾನ 16 ಅಂಕ ಹೊಂದಿತ್ತು. ಸರಣಿ ರದ್ದಾದ ಹಿನ್ನೆಲೆಯಲ್ಲಿ ಅಂಕವನ್ನು ಸಮನಾಗಿ ಹಂಚಿಕೊಂಡ ಬಳಿಕ ಭಾರತ 23 ಮತ್ತು ಪಾಕಿಸ್ಥಾನ 19 ಅಂಕ ಪಡೆದಿದೆ.

Advertisement

ಇದೀಗ ಪಾಕ್‌ ಅರ್ಹತಾ ಸುತ್ತಿನಲ್ಲಿ ಆಡಿ
ವಿಶ್ವಕಪ್‌ಗೆ ಪ್ರವೇಶ ಗಿಟ್ಟಿಸಬೇಕಿದೆ. ಅರ್ಹತಾ ಸುತ್ತಿನ ಪಂದ್ಯ ಜುಲೈ 3ರಿಂದ 19ರ ವರೆಗೆ ಶ್ರೀಲಂಕಾದಲ್ಲಿ ನಡೆಯಬೇಕಿದ್ದು ಆದರೆ ಕೊವೀಡ್‌-19  ವೈರಸ್‌ ಭೀತಿ ಹಿನ್ನೆಲೆಯಲ್ಲಿ ಈ ಟೂರ್ನಿ ರದ್ದಾಗುವ ಅಥವಾ ಮುಂದೂಡಲ್ಪಡುವ ಎಲ್ಲ ಸಾಧ್ಯತೆ ಇದೆ.

 

Advertisement

Udayavani is now on Telegram. Click here to join our channel and stay updated with the latest news.

Next