Advertisement

ತೈವಾನ್‌ಗೆ ಸಿಕ್ಕಿತು ಭಾರತ ಬೆಂಬಲ ; ರಾಯಭಾರಿ ನೇಮಕಕ್ಕೆ ಶೀಘ್ರ ಆದೇಶ

02:36 AM Jul 13, 2020 | Hari Prasad |

ಹೊಸದಿಲ್ಲಿ: ಲಡಾಖ್‌ ಗಡಿಬಿಕ್ಕಟ್ಟಿನ ನಡುವೆಯೇ ಭಾರತ, ತೈವಾನ್‌ಗೆ ಪ್ರಮುಖ ರಾಜತಾಂತ್ರಿಕ ಅಧಿಕಾರಿಯನ್ನು ನೇಮಿಸುವ ಮೂಲಕ ಚೀನಕ್ಕೆ ದಿಟ್ಟ ಸಂದೇಶ ರವಾನಿಸಲು ಮುಂದಾಗಿದೆ.

Advertisement

ತೈವಾನ್‌ ತನ್ನ ಸುಪರ್ದಿಗೆ ಬರಬೇಕೆಂದು ತವಕಿಸುತ್ತಿರುವ ಕ್ಸಿ ಜಿನ್‌ಪಿಂಗ್‌ ಸರಕಾರಕ್ಕೆ ಇದು ಅತಿದೊಡ್ಡ ಆಘಾತ.

ಪ್ರಸ್ತುತ ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ (ಅಮೆರಿಕ) ಗೌರಂಗ ಲಾಲ್‌ ದಾಸ್‌ ತೈವಾನ್‌ಗೆ ಮುಂದಿನ ರಾಯಭಾರಿ ಎಂದು ತಿಳಿದುಬಂದಿದೆ.

ಈ ಮಹತ್ವದ ನೇಮಕ ಕುರಿತು ಸರಕಾರ ಶೀಘ್ರದಲ್ಲೇ ಪ್ರಕಟಣೆ ಹೊರಡಿಸಲಿದೆ.

ಮೊದಲ ಕಚೇರಿ: ಒನ್‌- ಚೀನ ನೀತಿಯಿಂದಾಗಿ ತೈವಾನ್‌ನಲ್ಲಿ ಭಾರತ ಇದುವರೆಗೆ ಯಾವುದೇ ರಾಯಭಾರ ಕಚೇರಿ ಹೊಂದಿರಲಿಲ್ಲ. ಈಗ ಭಾರತ- ತೈಪೆ ಅಸೋಸಿಯೇಶನ್‌ ಹೆಸರಿನಲ್ಲಿ ರಾಯಭಾರ ಕಚೇರಿ ತೆರೆಯಲು ಕೇಂದ್ರ ನಿರ್ಧರಿಸಿದ್ದು, ಈ ಅಸೋಸಿಯೇಶನ್‌ಗೆ ದಾಸ್‌ ಮಹಾನಿರ್ದೇಶಕರಾಗಲಿದ್ದಾರೆ. ಭಾರತದ ನಿರ್ಧಾರದಿಂದ ದಕ್ಷಿಣ ಚೀನ ಸಮುದ್ರ ವ್ಯಾಪ್ತಿಯಲ್ಲಿರುವ ತೈವಾನ್‌ಗೆ ಬಹು ದೊಡ್ಡ ರಾಜತಾಂತ್ರಿಕ ಬಲ ಸಿಕ್ಕಂತಾಗಿದೆ.

Advertisement

ಚೀನ ಹಲವೆಡೆ ಹಿಂದಕ್ಕೆ: ಈ ನಡುವೆ ಲಡಾಖ್‌ನ ಎಲ್‌ಎಸಿ ಪಶ್ಚಿಮ ವಲಯದ 1,597 ಕಿ.ಮೀ. ದೂರದ ಹಲವು ಸ್ಥಳಗ ಳಲ್ಲಿ ಚೀನದ ಪಿಎಲ್‌ಎ ಪಡೆ ಹಿಂದಕ್ಕೆ ಸರಿದಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.

ದೇಶದ ಗಡಿಗಳು ಸಂಪೂರ್ಣ ಸುರಕ್ಷಿತ
ಗಡಿಯಲ್ಲಿನ ಕೆಲವು ಭೂಭಾಗಗಳನ್ನು ಚೀನ ಪಡೆ ಆಕ್ರಮಿಸಿಕೊಂಡಿದೆ ಎಂದು ಟೀಕಿಸುತ್ತಿದ್ದವರ ಬಾಯಿಯನ್ನು ಭಾರತೀಯ ಸೇನೆ ಮುಚ್ಚಿಸಿದೆ. “ದೇಶದ ಎಲ್ಲ ಗಡಿಗಳೂ ನಮ್ಮ ಭದ್ರತಾಪಡೆಯ ಕೈಯಲ್ಲಿ ಸಂಪೂರ್ಣ ಸುರಕ್ಷಿತವಾಗಿವೆ’ ಎಂದು ಐಟಿಬಿಪಿ ಮುಖ್ಯಸ್ಥ ಎಸ್‌.ಎಸ್‌. ದೇಸ್ವಾಲ್‌ ಸ್ಪಷ್ಟಪಡಿಸಿದ್ದಾರೆ. ‘ಶತ್ರುಗಳ ಯಾವುದೇ ರೀತಿಯ ದಾಳಿಗೆ ಉತ್ತರ ಕೊಡಲು ನಮ್ಮ ವೀರ ಯೋಧರು ಸಮರ್ಥರಾಗಿದ್ದಾರೆ’ ಎಂದು ಹೇಳಿದ್ದಾರೆ.

ನೇಪಾಲದ ಓಲಿಗೆ ‘ಮಾಧೇಸಿ’ ಭಯ
ನೇಪಾಲದ ಓಲಿ ಸರಕಾರದ ಅಸ್ಥಿರತೆ ನಡುವೆ ಹೊಸದಾಗಿ ರಚಿಸಲ್ಪಟ್ಟ ಮಾಧೇಸಿ ಪಕ್ಷವನ್ನು (ಜೆಎಸ್ಪಿಎನ್‌) ಚುನಾವಣಾ ಆಯೋಗ ಅಂಗೀಕರಿಸಿದೆ. ಭಾರತೀಯ ಮೂಲದ ಮಾಧೇಸಿ ಜನಾಂಗದ ಮುಖಂಡರು ಈ ಪಕ್ಷದಲ್ಲಿ ಅಧಿಕ ಸಂಖ್ಯೆಯಲ್ಲಿರುವುದರಿಂದ ಓಲಿ ಸಹಜವಾಗಿ ಆತಂಕಗೊಂಡಿದ್ದಾರೆ.

ನೇಪಾಲದ ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಜನತಾ ಪಕ್ಷ ವಿಲೀನಗೊಂಡು ಎ.23ರಂದು ಜನತಾ ಸಮಾಜವಾದಿ ಪಕ್ಷ ನೇಪಾಲ (ಜೆಎಸ್‌ಪಿಎನ್‌) ರಚನೆಯಾಗಿತ್ತು. ಪ್ರಸ್ತುತ ಸಂಸತ್ತಿನ 275ರಲ್ಲಿ 32 ಸ್ಥಾನ ಬಲವನ್ನು ಈ ಪಕ್ಷ ಹೊಂದಿದೆ. ಓಲಿ ಸರಕಾರದ ವಿರುದ್ಧ ಗುಡುಗುವ 2ನೇ ಪ್ರಮುಖ ಪ್ರತಿಪಕ್ಷ ಇದಾಗಿದೆ.

ಎಲ್‌ಎಸಿಯ ಉದ್ದಕ್ಕೂ ಭಾರತ- ಚೀನ ಎರಡೂ ರಾಷ್ಟ್ರಗಳಿಂದ ಸೇನೆ ವಾಪಸ್‌ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ.
– ಎಸ್‌. ಜೈಶಂಕರ್‌, ವಿದೇಶಾಂಗ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next