ಪಣಜಿ : ‘ಮಹಾತ್ಮಾ ಗಾಂಧೀಜಿ ಇಷ್ಟಪಟ್ಟ ಹಾಗೆ ಜವಾಹರಲಾಲ್ ನೆಹರೂ ಬದಲು ಮುಹಮ್ಮದ್ ಅಲಿ ಜಿನ್ನಾ ಅವರು ಪ್ರಧಾನಿಯಾಗಿರುತ್ತಿದ್ದರೆ ಭಾರತ – ಪಾಕಿಸ್ಥಾನ ಒಂದಾಗಿ ಉಳಿಯುತ್ತಿತ್ತು; ಆದರೆ ನೆಹರೂ ಅವರು ಪ್ರಧಾನಿ ಪಟ್ಟ ತಮಗೇ ಬೇಕೆಂಬ ಹಟಕ್ಕೆ ನಿಂತು ಗಾಂಧೀಜಿಯವರ ಪ್ರಸ್ತಾವವನ್ನು ತಿರಸ್ಕರಿಸಿದರು’ ಎಂದು ಟಿಬೆಟ್ ಆಧ್ಯಾತ್ಮಿಕ ಗುರು ದಲಾಯಿ ಲಾಮಾ ಇಂದಿಲ್ಲಿ ಹೇಳಿದರು.
ಇಲ್ಲಿನ ಗೋವಾ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, “ಜಿನ್ನಾಗೆ ನಾಯಕತ್ವ ಕೊಡಬೇಕೆಂದು ಗಾಂಧೀಜಿ ಬಹುವಾಗಿ ಬಯಸಿದ್ದರು. ಆದರೆ ನೆಹರೂ ಅವರ ಸ್ವ ಕೇಂದ್ರಿತ ದೃಷ್ಟಿಕೋನದಿಂದಾಗಿ ಪ್ರಮಾದವಾಯಿತು. ನೆಹರೂ ಅವರು ತಾವೇ ಪ್ರಧಾನಿಯಾಗಬೇಕೆಂದು ಬಯಸಿದ್ದರು. ಒಂದೊಮ್ಮೆ ಗಾಂಧೀಜಿಯವರ ಅಪೇಕ್ಷೆಯ ಪ್ರಕಾರ ಜಿನ್ನಾ ಪ್ರಧಾನಿಯಾಗಿರುತ್ತಿದ್ದರೆ ಭಾರತ ಮತ್ತು ಪಾಕಿಸ್ಥಾನ ಒಂದಾಗಿ ಉಳಿಯಲು ಸಾಧ್ಯವಿತ್ತು” ಎಂದು ಹೇಳಿದರು.
ಇಸ್ಲಾಂ ಒಂದು ಶಾಂತಿ ಧರ್ಮ ಎಂದು ಹೇಳಿದ ದಲಾಯಿ ಲಾಮಾ, ಕೆಲವು ದೇಶಗಳಲ್ಲಿರುವ ಶಿಯಾ ಸುನ್ನಿ ಸಂಘರ್ಷವನ್ನು ಕಡಿಮೆ ಮಾಡಲು ಭಾರತದಲ್ಲಿರುವ ಮುಸ್ಲಿಮರು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
‘ಇಸ್ಲಾಂ ಸಾಮರಸ್ಯ ಮತ್ತು ಅನುಕಂಪವನ್ನು ಬೋಧಿಸುತ್ತದೆ. ಹಾಗಿದ್ದರೂ ಇಸ್ಲಾಂ ಧರ್ಮದೊಳಗಿನ ಪಂಥೀಯ ಭಿನ್ನಮತಗಳಿಂದಾಗಿ ರಕ್ತಪಾತವಾಗುತ್ತಿದೆ. ಇದನ್ನು ನಿವಾರಿಸುವ ಪ್ರಯತ್ನವಾಗಬೇಕು’ ಎಂದು ದಲಾಯಿ ಲಾಮಾ ಹೇಳಿದರು. ಅಂತಾರಾಷ್ಟ್ರೀಯ ಸಹೋದರತೆ ಮತ್ತು ಸಾಮರಸ್ಯಕ್ಕೆ ಅವರು ಕರೆ ನೀಡಿದರು.
‘ಭಾರತಕ್ಕೆ ಒಂದು ಸಾವಿರ ವರ್ಷಗಳ ಧಾರ್ಮಿಕ ಸಾಮರಸ್ಯದ ಇತಿಹಾಸವಿರುವ ಕಾರಣ ಆಧುನಿಕ ಭಾರತವು ಬಹುತೇಕ ಶಾಂತಿಯಿಂದಿದೆ’ ಎಂದು ದಲಾಯಿ ಲಾಮಾ ಅಭಿಪ್ರಾಯಪಟ್ಟರು.