ಭಾರತ - ಪಾಕ್ ನಡುವೆ ಸೌಹಾರ್ದದ ಬಂಧ ಬೆಸೆಯಲು ಆರಂಭವಾಗಿದ್ದ ಸಂಜೋತಾ ಎಕ್ಸ್‌ಪ್ರೆಸ್ ರೈಲು ಸೇವೆ ಈಗಿನ ಉದ್ವಿಗ್ನ ಸ್ಥಿತಿ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದೆ. ವಾರಕ್ಕೆರಡು ಬಾರಿ (ಬುಧವಾರ ಮತ್ತು ರವಿವಾರ) ಈ ರೈಲು (ದಿಲ್ಲಿಯಿಂದ ಅಟ್ಟಾರಿವರೆಗೆ, ಅಟ್ಟಾರಿಯಿಂದ ಲಾಹೋರ್‌ವರೆಗೆ) ಸಾಗುತ್ತಿತ್ತು. ಭಾರತೀಯ ರೈಲ್ವೆ ಮಂಡಳಿ ದಿಲ್ಲಿ-ಅಟ್ಟಾರಿ ಎಕ್ಸ್‌ಪ್ರೆಸ್ ಅನ್ನು ಸ್ಥಗಿತಗೊಳಿಸಿದೆ.
ಅತ್ತ ಪಾಕಿಸ್ಥಾನ ಈಗಾಗಲೇ ರೈಲು ಸೇವೆಯನ್ನು (ಲಾಹೋರ್-ಅಟ್ಟಾರಿ) ಸ್ಥಗಿತಗೊಳಿಸಿದೆ. ಆರಂಭದಲ್ಲಿ ಪಾಕ್‌ನ ಲಾಹೋರ್‌ನಿಂದ ಭಾರತದ ಅಮೃತಸರದವರೆಗೆ ವಾರಕ್ಕೆ 2 ಬಾರಿ ಸಂಚರಿಸುತ್ತಿತ್ತು. ಬಳಿಕ ದಿಲ್ಲಿಯಿಂದ-ಅಟ್ಟಾರಿ ಮೂಲಕ ಪಾಕ್‌ನ ಲಾಹೋರ್‌ಗೆ ಅದರ ಪಥ ವಿಸ್ತರಿಸಲಾಯಿತು. ಉಭಯ ದೇಶಗಳಲ್ಲಿ ಪರಸ್ಪರ ಸ್ನೇಹ ಸಂಬಂಧ ಸುಧಾರಣೆಗೆ ಆರಂಭವಾದ ಇದನ್ನು “ಫ್ರೆಂಡ್‌ಶಿಪ್ ಎಕ್ಸ್‌ಪ್ರೆಸ್’ ಎಂದೂ ಕರೆಯಲಾಗುತ್ತಿತ್ತು.
ಗುರುವಾರ ಅಂತಿಮ ಸೇವೆ: ಬುಧವಾರವೇ ವಾಘ…ನಿಂದ ಲಾಹೋರ್‌ಗೆ ಪ್ರಯಾಣಿಸುತ್ತಿದ್ದ ರೈಲನ್ನು ಪಾಕ್ ಸ್ಥಗಿತಗೊಳಿಸಿತ್ತು. ಬುಧವಾರ ರಾತ್ರಿ 11. 20ಕ್ಕೆ 27 ಪ್ರಯಾಣಿಕರನ್ನು ಹೊತ್ತ ಸಂಜೋತಾ ಪಾಕ್‌ನತ್ತ ಸಂಚರಿಸಿತು. ಪಂಜಾಬ್‌ನ ಅಮೃತಸರ ಜಿಲ್ಲೆಯ ಅಟ್ಟಾರಿಯ (ಪಾಕ್‌ಗೆ 3 ಕಿ.ಮೀ. ದೂರ) ಮೂಲಕ ಸಂಜೋತಾ ಪಾಕ್‌ಗೆ ತೆರಳುವ ಮಾರ್ಗ ಇದಾಗಿದೆ. ಗುರುವಾರ ಬೆಳಗ್ಗೆ 7 ಗಂಟೆಗೆ ಅಟ್ಟಾರಿಗೆ ಆಗಮಿಸಿದ ರೈಲಲ್ಲಿ 24 ಭಾರತೀಯರು ಹಾಗೂ 3 ಪಾಕ್ ಪ್ರಜೆಗಳು ಸೇರಿದಂತೆ ಒಟ್ಟು 27 ಪ್ರಯಾಣಿಕರಿದ್ದರು. ಬಳಿಕ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಪಾಕ್ ರೈಲ್ವೇ, ಉಭಯ ದೇಶಗಳ ಮಧ್ಯೆ ತಲೆದೋರಿರುವ ಸನ್ನಿವೇಶ ಸಹಜ ಸ್ಥಿತಿಗೆ ಬಂದ ಬಳಿಕ ಸಂಜೋತಾ ಎಕ್ಸ್ ಪ್ರಸ್ ಮತ್ತೆ ಓಡಾಟ ನಡೆಸಬಹುದು ಎಂದಿದ್ದಾರೆ.
ಆರಂಭಗೊಂಡದ್ದು ಯಾವಾಗ?: ಈ ರೈಲು ಸೇವೆ ಆರಂಭವಾಗಿದ್ದು 1976ರ ಜುಲೈ 22ರಂದು. ಸಂಜೋತಾ ಎಂದರೆ ಒಪ್ಪಂದ, ಹೊಂದಾಣಿಕೆ.
ಇದೇನೂ ಮೊದಲಲ್ಲ: ಈ ಹಿಂದೆ ಹಲವು ಬಾರಿ ಸಂಜೋತಾ ಎಕ್ಸ್‌ಪ್ರೆಸ್ ಸೇವೆ ಸ್ಥಗಿತಗೊಳಿಸಲಾಗಿತ್ತು. 2001ರ ಡಿಸೆಂಬರ್ 13ರಂದು ಸಂಸತ್ತಿನ ಮೇಲೆ ಉಗ್ರರು ದಾಳಿ ನಡೆಸಿದ ಹಿನ್ನೆಲೆಯಲ್ಲಿ 2002ರ ಜನವರಿ ಒಂದರಿಂದ ಸಂಜೋತಾ ಸೇವೆ ರದ್ದಾಗಿತ್ತು. 2007ರ ಡಿ. 27ರಂದು ಪಾಕ್ ಮಾಜಿ ಪ್ರಧಾನಿ ಬೆನೆಝಿರ್ ಭುಟ್ಟೋ ಹತ್ಯೆ ಬಳಿಕ ಅಲ್ಲಿನ ಸೇನೆಯ ಒತ್ತಾಯಕ್ಕೆ ಉಭಯ ದೇಶಗಳ ಮಧ್ಯೆ ರೈಲು ಸೇವೆ ಸ್ಥಗಿತಗೊಂಡಿತ್ತು.
ಲಾಹೋರ್-ದಿಲ್ಲಿ ಬಸ್ ಅಬಾಧಿತ: ಲಾಹೋರ್ ನಗರದಿಂದ ದಿಲ್ಲಿಗೆ ಬಸ್ ಸೇವೆಯನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಪಾಕ್‌ನ ಅಂದಿನ ಪ್ರಧಾನಿ ನವಾಜ್ ಷರೀಫ್ 1999ರ ಫೆ.19ರಂದು ಆರಂಭಿಸಿದ್ದರು. ಮಾರ್ಚ್ 16ರಂದು ಸಂಚಾರ ನಡೆಸಿತ್ತು. ಆದರೆ 2001ರ ಸಂಸತ್ತಿನ ದಾಳಿ ಬಳಿಕ ಸೇವೆ ನಿಂತಿತ್ತು. ಇಂದು ಉಭಯ ರಾಷ್ಟ್ರಗಳ ಸಂಜೋತಾ ಎಕ್ಸ್‌ಪ್ರೆಸ್ ಸಂಚಾರ ನಿಂತಿದ್ದರೂ. ದಿಲ್ಲಿ-ಲಾಹೋರ್ ಬಸ್ ಸೇವೆಗೆ ಅಡ್ಡಿಯುಂಟಾಗಿಲ್ಲ.