Advertisement

ಅಮೆರಿಕವನ್ನು ಮೀರಿಸುವ ಭಾರತ: ನಳಿನ್‌ ಕುಮಾರ್‌

03:14 PM Jun 12, 2018 | Harsha Rao |

ಉಡುಪಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಕಳೆದ 4 ವರ್ಷಗಳಲ್ಲಿ ಸ್ವತ್ಛ, ಸಮರ್ಥ ಆಡಳಿತ ನೀಡುವ ಮೂಲಕ ಅಭಿವೃದ್ಧಿಯಲ್ಲಿ ಅಮೆರಿಕವನ್ನೂ ಮೀರಿಸುವ ಮಟ್ಟಕ್ಕೆ ಬೆಳೆದಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಕೇಂದ್ರದ ಬಿಜೆಪಿ ಆಡಳಿತದ ನಾಲ್ಕು ವರ್ಷಗಳ ಸಾಧನೆಗಳ ಮಾಹಿತಿ ನೀಡಿದರು. ಮೋದಿ ಪ್ರಧಾನಿಯಾದ ಮೇಲೆ 150ಕ್ಕೂ ಹೆಚ್ಚು ದೇಶಗಳೊಂದಿಗೆ ಸ್ನೇಹ ಬಾಂಧವ್ಯ ವೃದ್ಧಿಯಾಗಿದೆ. ಸೈನಿಕ ಶಕ್ತಿ ಹೆಚ್ಚಳ, ಸರ್ಜಿಕಲ್‌ ಸ್ಟೈಕ್‌ನಂತಹ ಅಪೂರ್ವ ಕಾರ್ಯಕ್ರಮಗಳ ಮೂಲಕ ವಿಶ್ವಕ್ಕೆ ದೇಶದ ಮಿಲಿಟರಿ ಶಕ್ತಿಯನ್ನು ಪರಿಚಯಿಸುವ ಮೂಲಕ ಮೋದಿ ಜಾಗತಿಕ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಅಮೆರಿಕವನ್ನು ಮೀರಿಸುವ, ಪ್ರಬಲ ಪೈಪೋಟಿ ನೀಡುವ ಯಾವುದಾದರೂ ದೇಶವಿದ್ದರೆ ಅದು “ಭಾರತ’ ಎನ್ನುವ ಮಟ್ಟಕ್ಕೆ ವಿಶ್ವ ಭೂಪಟದಲ್ಲಿ ಮಿನುಗುವಂತೆ ಮಾಡಿದ್ದಾರೆ ಎಂದವರು ತಿಳಿಸಿದರು.

4 ವರ್ಷಗಳಲ್ಲಿ 18,500 ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ, ಸ್ವತ್ಛ ಭಾರತ್‌ ಆಂದೋಲನ, 7.50 ಕೋಟಿ ಶೌಚಾಲಯ ನಿರ್ಮಾಣ, 3.80 ಕೋ. ಬಿಪಿಎಲ್‌/ಅಂತ್ಯೋದಯ ಕಾರ್ಡ್‌ ಫಲಾನುಭವಿಗಳಿಗೆ ಉಜ್ವಲ ಗ್ಯಾಸ್‌ ಸಂಪರ್ಕ, 10 ಕೋಟಿ ಯುವಕರಿಗೆ ಮುದ್ರಾ ಯೋಜನೆಯಡಿ ಸಾಲ ವಿತರಣೆ, 31.61 ಕೋಟಿ ಜನಧನ್‌ ಅಕೌಂಟ್‌, 5 ಲ.ರೂ. ವೆಚ್ಚ ಭರಿಸುವ ಮೋದಿಕೇರ್‌ ಆರೋಗ್ಯ ವಿಮೆ, ರಾಜ್ಯಕ್ಕೆ 3 ಲ.ಕೋ.ರೂ. ಅನುದಾನ ಹೀಗೆ ಹಲವಾರು ಜನೋಪಯೋಗಿ ಕಾರ್ಯಕ್ರಮ ಜಾರಿಗೆ ತರುವ ಮೂಲಕ ಮೋದಿ ಸರಕಾರ ಜಾಗತಿಕವಾಗಿ ಗಮನ ಸೆಳೆದಿದೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಮಂಗಳೂರು ಪ್ರಭಾರಿ ಉದಯ ಕುಮಾರ್‌ ಶೆಟ್ಟಿ, ಶಾಸಕ ಕೆ.ರಘುಪತಿ ಭಟ್‌, ಜಿಲ್ಲಾ ವಕ್ತಾರ ಕಟಪಾಡಿ ಶಂಕರ ಪೂಜಾರಿ, ಪ್ರ.ಕಾರ್ಯದರ್ಶಿ ಸುರೇಶ್‌ ನಾಯಕ್‌ ಕುಯಿಲಾಡಿ, ನವೀನ್‌ ಶೆಟ್ಟಿ ಕುತ್ಯಾರು, ಆರ್‌ಎಸ್‌ಎಸ್‌ ಮಂಗಳೂರು ಪ್ರಭಾರಿ ಪ್ರತಾಪ್‌ಸಿಂಹ ನಾಯಕ್‌ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next