Advertisement

ಟ್ರಂಪ್‌ ಸ್ವಾಗತಕ್ಕೆ ಭಾರತ ಸಜ್ಜು

09:57 AM Feb 21, 2020 | mahesh |

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಫೆಬ್ರವರಿ 24ರಿಂದ ಎರಡು ದಿನ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಮೊದಲ ದಿನ ಅವರು ಗುಜರಾತ್‌ನ ಅತಿದೊಡ್ಡ ನಗರವಾದ ಅಹಮದಾಬಾದ್‌ಗೆ ಆಗಮಿಸಲಿದ್ದು ಸುಮಾರು 3 ಗಂಟೆ ಅಲ್ಲಿ ಕಳೆಯಲಿದ್ದಾರೆ. ಟ್ರಂಪ್‌ರ ಆಗಮನಕ್ಕಾಗಿ ಅಹಮದಾಬಾದ್‌ ಭರದಿಂದ ಸಜ್ಜಾಗುತ್ತಿದೆ.

Advertisement

12000ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನೇಮಿಸಲಾಗುತ್ತಿದ್ದು, ಅಮೆರಿಕ-ಭಾರತದ ಭದ್ರತಾ ತಂಡಗಳು ಸುರಕ್ಷತಾ ಕ್ರಮಗಳ ಸಂಪೂರ್ಣ ದೇಖರೇಖೀ ನೋಡಿಕೊಳ್ಳುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ಅಹಮದಾಬಾದ್‌ ಭೇಟಿಗೆ 100 ಕೋಟಿ ರೂಪಾಯಿ ಖರ್ಚಾಗಲಿದೆ. ಆದರೆ ಬಹುತೇಕ ಖರ್ಚು ಅಹಮದಾಬಾದ್‌ನ ಮೂಲಸೌಕರ್ಯಾಭಿವೃದ್ಧಿಗೆ ಆಗುತ್ತಿದೆ ಎನ್ನುತ್ತದೆ ಅಲ್ಲಿನ ನಗರಪಾಲಿಕೆ. ತಮ್ಮ ಭೇಟಿಯ ವೇಳೆ ಟ್ರಂಪ್‌, ಸಾಬರಮತಿ ಆಶ್ರಮದ ದರ್ಶನವನ್ನೂ ಪಡೆಯಲಿದ್ದಾರೆ.

ಮೋದಿ ಪ್ರಧಾನಿಯಾದ ನಂತರದಿಂದ ಇದುವರೆಗೆ ಚೀನ, ಜಪಾನ್‌, ಇಸ್ರೇಲ್‌ನ ಮುಖ್ಯಸ್ಥರು ಸಾಬರಮತಿ ಆಶ್ರಮಕ್ಕೆ ಭೇಟಿ ಕೊಟ್ಟಿದ್ದಾರೆ ಎಂಬುದು ವಿಶೇಷ. ಒಟ್ಟಲ್ಲಿ ಟ್ರಂಪ್‌ ಭೇಟಿ “ಹೌಡಿ ಮೋದಿ’ ಕಾರ್ಯಕ್ರಮದಂತೆ ಅದ್ದೂರಿಯಾಗಂತೂ ನಡೆಯಲಿದೆ ಎಂಬ ಸೂಚನೆ ನೀಡುತ್ತಿದೆ ಗುಜರಾತ್‌ನ ಆಡಳಿತ.

ಹೀಗಿದೆ ಟ್ರಂಪ್‌ ಕಾರ್ಯಸೂಚಿ
ಟ್ರಂಪ್‌ ಮತ್ತವರ ಪತ್ನಿ ಮೆಲಾನಿಯಾರನ್ನು ಸ್ವಾಗತಿಸಲು ಭಾರತ ಭರದ ತಯ್ನಾರಿ ನಡೆಸುತ್ತಿದ್ದು, ಎರಡು ದಿನಗಳ ಅಮೆರಿಕ ಅಧ್ಯಕ್ಷರ ಭೇಟಿ ಹಲವು ಕಾರ್ಯಕ್ರಮಗಳನ್ನು ಒಳಗೊಂಡಿದೆ.

ಫೆಬ್ರವರಿ 24
ಟ್ರಂಪ್‌ ಅಹಮದಾಬಾದ್‌ಗೆ ತಮ್ಮ ವಿಶೇಷ ವಿಮಾನದಲ್ಲಿ ಬಂದಿಳಿಯಲಿದ್ದಾರೆ.
ಅಹಮದಾಬಾದ್‌ನಾದ್ಯಂತ “ನಮಸ್ತೆ ಟ್ರಂಪ್‌’ ಪೋಸ್ಟರ್‌ಗಳು ಅವರನ್ನು ಎದುರುಗೊಳ್ಳಲಿವೆ.
ಟ್ರಂಪ್‌ ಮತ್ತು ಅವರ ಪತ್ನಿ, ಪ್ರಧಾನಿ ಮೋದಿಯವರೊಡಗೂಡಿ
ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ.
ಅಲ್ಲಿಂದ 22 ಕಿಲೋಮೀಟರ್‌ವರೆಗೆ ಟ್ರಂಪ್‌ ಮತ್ತು ಮೋದಿ ರೋಡ್‌ಶೋ ಕೈಗೊಳ್ಳಲಿದ್ದು, ಈ ರೋಡ್‌ಶೋ ನೂತನವಾಗಿ ನಿರ್ಮಿಸಲಾದ ಸರ್ದಾರ್‌ ಪಟೇಲ್‌ ಸ್ಟೇಡಿಯಂವರೆಗೂ ಇರಲಿದೆ. ರಸ್ತೆಯ ಇಕ್ಕೆಲಗಳಲ್ಲೂ ಲಕ್ಷಾಂತರ ಜನರು ಸ್ವಾಗತಿಸುವ ನಿರೀಕ್ಷೆಯಿದೆ.
ಟ್ರಂಪ್‌-ಮೋದಿ ಪ್ರಪಂಚದ ಅತಿದೊಡ್ಡ ಕ್ರಿಕೆಟ್‌ ಸ್ಟೇಡಿಯಂ ಎಂಬ ಗರಿಮೆಗೆ ಪಾತ್ರವಾಗಿರುವ ಮೊಟೆರಾ(ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಸ್ಟೇಡಿಯಂ) ಉದ್ಘಾಟಿಸಲಿದ್ದಾರೆ. 1,10000 ಪ್ರೇಕ್ಷಕರ ಸಾಮರ್ಥ್ಯವಿರುವ ಈ ಸ್ಟೇಡಿಯಂನಲ್ಲಿ ಅಂದು 1 ಲಕ್ಷಕ್ಕೂ ಅಧಿಕ ಜನ ಭಾಗವಹಿಸಲಿದ್ದಾರೆ. ಆರಂಭದಲ್ಲಿ ಈ ಕಾರ್ಯಕ್ರಮಕ್ಕೆ “ಕೇಮ್‌ ಛೋ ಟ್ರಂಪ್‌’ ಎಂದು ಹೆಸರಿಡಲು ನಿರ್ಧರಿಸಲಾಗಿತ್ತಾದರೂ, ಕೇವಲ ಗುಜರಾತ್‌ಗೆ ಸೀಮಿತವಾದಂತೆ ಕಾಣುತ್ತದೆ ಎಂಬ ಕಾರಣಕ್ಕಾಗಿ “ನಮಸ್ತೇ ಟ್ರಂಪ್‌’ ಎಂದು ಬದಲಾಯಿಸಲಾಗಿದೆ. ಸ್ಟೇಡಿಯಂನಲ್ಲಿ ಹಲವು ಕಾರ್ಯಕ್ರಮನಡೆಯಲಿದ್ದು, ಬಾಲಿವುಡ್‌ ನಟರೂ ಭಾಗವಹಿಸುತ್ತಾರೆ.
ಪ್ರಧಾನಿ ಮೋದಿ ಅಮೆರಿಕನ್‌ ನಿಯೋಗಕ್ಕೆ ಭೋಜನಕೂಟ ಏರ್ಪಡಿಸಿದ್ದು, ನಂತರ ಈ ತಂಡ 3.30ಕ್ಕೆ ಆಗ್ರಾಕ್ಕೆ ತೆರಳಲಿದೆ. ಆಗ್ರಾಕ್ಕೆ 5ಗಂಟೆಗೆ ತಲುಪುವ ನಿರೀಕ್ಷೆಯಿದೆ. ತಾಜ್‌ಮಹಲ್‌ ಹೊರಾಂಗಣ, ಒಳಾಂಗಣ ಸ್ವತ್ಛಗೊಳಿಸಲಾಗಿದ್ದು, ಅಂದು ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ತಾಜ್‌ಮಹಲ್‌ ವೀಕ್ಷಣೆಯ ನಂತರ ಟ್ರಂಪ್‌ ತಂಡ ದೆಹಲಿಗೆ ತೆರಳಲಿದೆ.

Advertisement

ಫೆಬ್ರವರಿ 25
ರಾಷ್ಟ್ರಪತಿ ಭವನಕ್ಕೆ ಆಗಮಿಸುವ ಟ್ರಂಪ್‌ರನ್ನು ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಮತ್ತವರ ಪತ್ನಿ ಸವಿತಾ ಕೋವಿಂದ್‌ ಸ್ವಾಗತಿಸಲಿದ್ದಾರೆ.
ನಂತರ ಟ್ರಂಪ್‌ ಮತ್ತು ಮೆಲಾನಿಯಾ ರಾಜ್‌ಘಾಟ್‌ಗೆ ತೆರಳಿ, ಗಾಂಧೀಜಿ ಸಮಾಧಿಗೆ ನಮನ
ಸಲ್ಲಿಸುತ್ತಾರೆ. ಗೆಸ್ಟ್‌ಬುಕ್‌ನಲ್ಲಿ ಸಹಿಮಾಡುತ್ತಾರೆ(ಈ ಪರಂಪರೆ ಮೊದಲಿನಿಂದ ಇದೆ)
ಅಲ್ಲಿಂದ ನೇರವಾಗಿ ಹೈದ್ರಾಬಾದ್‌ ಹೌಸ್‌ಗೆ ಟ್ರಂಪ್‌ ಮತ್ತವರ ನಿಯೋಗ ಆಗಮಿಸಿ, ಅಧಿಕೃತ ಚರ್ಚೆ ನಡೆಸಲು ತಯಾರಿ ಮಾಡಿಕೊಳ್ಳುತ್ತದೆ. ಆರಂಭದಲ್ಲಿ ಫೋಟೋತೆಗೆಸಿಕೊಂಡ ನಂತರ, ಪ್ರಧಾನಿ ಮೋದಿ, ಟ್ರಂಪ್‌ ಮತ್ತು ಎರಡೂ ಬದಿಯ ಉನ್ನತಾಧಿಕಾರಿಗಳ ನಡುವೆ ಮಾತುಕತೆ ನಡೆಯುತ್ತದೆ.
ಆ ಸಮಯದಲ್ಲಿ, ಅಮೆರಿಕದ ಫ‌ಸ್ಟ್‌ ಲೇಡಿ ಮೆಲಾನಿಯಾ ಟ್ರಂಪ್‌ ದೆಹಲಿಯ ಸರ್ಕಾರಿ ಶಾಲೆಗೆ ತೆರಳಿ ಮಕ್ಕಳೊಂದಿಗೆ ಸಂವಾದ ನಡೆಸಲಿದ್ದಾರೆ. ದೆಹಲಿಯ ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ ಅವರಿಗೆ ಪರಿಚಯ ಮಾಡಿಸಲಾಗುತ್ತದೆ. ಮೆಲಾನಿಯಾರ ಶಾಲಾ ಭೇಟಿಯ ವೇಳೆ ಅವರನ್ನು ಸ್ವಾಗತಿಸಲು ಕೇಂದ್ರ ಸರ್ಕಾರದ ಅಧಿಕಾರಿಗಳು-ನಾಯಕರು ಇರುತ್ತಾರೋ ಅಥವಾ ಆಮ್‌ ಆದ್ಮಿ ಪಾರ್ಟಿಯ ಸರ್ಕಾರವೋ ಎನ್ನುವ ಬಗ್ಗೆ ಇನ್ನೂ ಮಾಹಿತಿ ಇಲ್ಲ.
ಹೈದ್ರಾಬಾದ್‌ ಹೌಸ್‌ನಲ್ಲಿ ಮೋದಿ-ಟ್ರಂಪ್‌ ನಡುವೆ ಸಭೆ ಮುಕ್ತಾಯಗೊಂಡು, ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಲಿದ್ದಾರೆ. ಅಷ್ಟರಲ್ಲೇ ಮೆಲಾನಿಯಾ ಟ್ರಂಪ್‌ ಸರ್ಕಾರಿ ಶಾಲಾ ಭೇಟಿ ಮುಗಿಸಿ ಹೈದ್ರಾಬಾದ್‌ ಹೌಸ್‌ಗೆ ಹಿಂದಿರುಗಲಿದ್ದಾರೆ.
ಭೋಜನಕೂಟ
ಊಟದ ನಂತರ 3 ಗಂಟೆಗೆ ಟ್ರಂಪ್‌ ಮತ್ತವರ ನಿಯೋಗ ದೆಹಲಿಯಲ್ಲಿನ ಅಮೆರಿಕನ್‌ ರಾಯಭಾರ ಕಚೇರಿಗೆ ತೆರಳಲಿದ್ದು, ಅಲ್ಲಿ ಭಾರತದ ಉದ್ಯಮಿಗಳೊಂದಿಗೆ ದುಂಡುಮೇಜಿನ ಸಭೆ ನಡೆಸಲಿದ್ದಾರೆ.
ಸಭೆಯ ನಂತರ ಟ್ರಂಪ್‌ ಮತ್ತು ಮೆಲಾನಿಯಾ ಅಮೆರಿಕನ್‌ ರಾಯಭಾರ ಸಿಬ್ಬಂದಿಗಳೊಂದಿಗೆ ಮಾತನಾಡಲಿದ್ದು, ನಂತರ ಅಲ್ಲಿಂದ ರಾಷ್ಟ್ರಪತಿ ಭವನಕ್ಕೆ ತೆರಳುತ್ತಾರೆ. ರಾಷ್ಟ್ರಪತಿ ಕೋವಿಂದ್‌ರ
ಆತಿಥ್ಯದಲ್ಲಿ ರಾತ್ರಿ 8 ಗಂಟೆಗೆ ಭೋಜನ ಸವಿಯಲಿದ್ದಾರೆ.
ಊಟ ಮುಗಿಸಿ, ಟ್ರಂಪ್‌ ಮತ್ತು ನಿಯೋಗ ರಾತ್ರಿ 10 ಗಂಟೆಗೆ ವಿಮಾನ ನಿಲ್ದಾಣಕ್ಕೆ ತೆರಳಲಿದೆ. ಜರ್ಮನಿ ಮಾರ್ಗವಾಗಿ ಟ್ರಂಪ್‌ರ ವಿಮಾನ ಹಿಂದಿರುಗಲಿದೆ.

ಟ್ರಂಪ್‌ ಭೇಟಿಗೆ ಉತ್ಸುಕರಾದ ಉದ್ಯಮಿಗಳು
ತಮ್ಮ ಪ್ರವಾಸದ ಎರಡನೆಯ ದಿನದಂದು ಟ್ರಂಪ್‌ ನವದೆಹಲಿಯಲ್ಲಿ ದೇಶದ ಪ್ರಮುಖ ಉದ್ಯಮಿಗಳ ಜತೆ ಮಾತುಕತೆ ನಡೆಸಲಿದ್ದಾರೆ. ಈ ದುಂಡುಮೇಜಿನ ಸಭೆಯಲ್ಲಿ ರಿಲಯನ್ಸ್‌ ಉದ್ಯಮ ಸಮೂಹದ ಮುಖ್ಯಸ್ಥ ಮುಖೇಶ್‌ ಅಂಬಾನಿ, ಭಾರತಿ ಏರ್‌ಟೆಲ್‌ ಚೇರಮನ್‌ ಸುನಿಲ್‌ ಭಾರತಿ ಮಿತ್ತಲ್‌, ಟಾಟಾಸನ್ಸ್‌ ಚೇರ್‌ಮನ್‌ ಎನ್‌.ಚಂದ್ರಶೇಖರನ್‌, ಮಹೀಂದ್ರಾ ಸಮೂಹದ ಮುಖ್ಯಸ್ಥ ಆನಂದ ಮಹೀಂದ್ರಾ, ಲಾರ್ಸನ್‌ ಆ್ಯಂಡ್‌ ಟಬೋì ಚೇರ್‌ಮನ್‌ ಎ ಎಂ ನಾಯಕ್‌ ಮತ್ತು ಬಯೋಕಾನ್‌ನ ಸಿಎಂಟಿ ಕಿರಣ್‌ ಮಜುಂದಾರ್‌ ಶಾ ಸೇರಿದಂತೆ ಹಲವು ಖ್ಯಾತನಾಮರು ಭಾಗವಹಿಸಲಿದ್ದಾರೆ.

ಪಾನ್‌ ಶಾಪ್‌ ಮುಚ್ಚುವುದಿಲ್ಲ
ಟ್ರಂಪ್‌ ಭೇಟಿಯ ಹಿನ್ನೆಲೆಯಲ್ಲಿ ಅಹಮದಾಬಾದ್‌ನ ಪಾನ್‌ ಶಾಪ್‌ಗಳನ್ನೆಲ್ಲ ಬಂದ್‌ ಮಾಡಲಾಗುತ್ತಿದೆ ಎಂದು ಪ್ರಮುಖ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಅಹಮದಾಬಾದ್‌ನ ಪಾನ್‌ ಪ್ರಿಯರು ರಸ್ತೆಗಳನ್ನು ರಂಗು ರಂಗಾಗಿಸುವುದನ್ನು ತಡೆಯುವ ಕಾರಣಕ್ಕಾಗಿ ಈಗಾಗಲೇ ಅಂಗಡಿಗಳನ್ನು ತಾತ್ಕಾಲಿಕ ಮುಚ್ಚುವ ಕೆಲಸ ಆರಂಭವಾಗಿದ್ದು, ವಿಮಾನನಿಲ್ದಾಣ ಸನಿಹದ ಮೂರು ಅಂಗಡಿಗಳಿಗೆ ಬಾಗಿಲುಹಾಕಲಾಗಿದೆ ಎಂಬ ವರದಿಗಳು ಹರಿದಾಡುತ್ತಿವೆ. ಆದರೆ ನಗರಸಭೆ ಕಮಿಷನರ್‌ ವಿ.ನೆಹ್ರಾ, ಇದೆಲ್ಲ ಸುಳ್ಳು ಸುದ್ದಿ ಎಂದಿದ್ದಾರೆ. “”ನಗರದಲ್ಲಿ ಸಾವಿರಾರು ಪಾನ್‌ಶಾಪ್‌ಗಳಿದ್ದು, ಅವೆಲ್ಲವೂ ತೆರೆದಿವೆ. ಸುಮ್ಮನೇ ಮಸಿ ಬಳೆಯಲು ಈ ರೀತಿಯ ವದಂತಿಗಳನ್ನು ಹರಿಬಿಡಲಾಗುತ್ತಿದೆ” ಎನ್ನುತ್ತಾರವರು.

ಬೀದಿನಾಯಿಗಳ ಎತ್ತಂಗಡಿ
ಟ್ರಂಪ್‌ ಮೋಟರ್‌ಕೇಡ್‌ ಸಾಗುವ ಮಾರ್ಗದಲ್ಲಿ ಯಾವ ಪ್ರಾಣಿಗಳೂ ಅಡ್ಡಬರದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಬೀದಿನಾಯಿಗಳನ್ನೆಲ್ಲ ವಿವಿಐಪಿ ಮಾರ್ಗದಿಂದ ಹೊತ್ತೂಯ್ಯಲಾಗುತ್ತಿದೆ. 2015ರಲ್ಲಿ ಅಮೆರಿಕದ ಸೆಕ್ರೆಟರಿ ಜಾನ್‌ ಕೆರ್ರಿ ಗಾಂಧಿನಗರದಲ್ಲಿ ಆಯೋಜಿತವಾಗಿದ್ದ ವೈಬ್ರಂಟ್‌ ಗುಜರಾತ್‌ ಉದ್ಯಮ ಶೃಂಗದಲ್ಲಿ ಭಾಗವಹಿಸಿ ವಿಮಾನನಿಲ್ದಾಣಕ್ಕೆ ತೆರಳುತ್ತಿದ್ದಾಗ, ಅವರ ಭದ್ರತಾ ವಾಹನವೊಂದು ಬೀದಿನಾಯಿಗೆ ಢಿಕ್ಕಿಹೊಡೆದಿತ್ತು. ಇಂಥ ಮುಜುಗರತಡೆಯಲು ಮುನ್ಸಿಪಾಲ್ಟಿಯು ಬೀದಿನಾಯಿಗಳನ್ನೆಲ್ಲ ವಿವಿಐಪಿ ರಸ್ತೆಗಳಿಂದ 5 ದಿನ ದೂರವಿಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next