ವಾಷಿಂಗ್ಟನ್:ಅಮೆರಿಕದ ವಿತ್ತ ಸಚಿವಾಲಯದ ಕರೆನ್ಸಿ ನಿರೀಕ್ಷಣಾ ಪಟ್ಟಿಯಿಂದ ಭಾರತದ ರೂಪಾಯಿ ಈಗ ಹೊರಗೆ ಬಂದಿದೆ. ತಾನು ವ್ಯಾಪಾರ ವಹಿವಾಟು ನಡೆಸುವ ಪ್ರಮುಖ ರಾಷ್ಟ್ರಗಳನ್ನು ಗುರಿಯಾಗಿ ಇರಿಸಿಕೊಂಡು ಅಮೆರಿಕ ಈ ನಿರ್ಧಾರ ಕೈಗೊಂಡಿದೆ. ಅಲ್ಲಿನ ವಿತ್ತ ಸಚಿವ ಜಾನೆಟ್ ಎಲ್ಲನ್ ನವದೆಹಲಿಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿರುವಂತೆಯೇ ಈ ಬೆಳವಣಿಗೆ ನಡೆದಿದೆ.
ಇಟಲಿ, ಮೆಕ್ಸಿಕೋ, ವಿಯೆಟ್ನಾಂ ಮತ್ತು ಥಾಯ್ಲೆಂಡ್ ಪಟ್ಟಿಯಿಂದ ಹೊರಬಂದ ಇತರ ರಾಷ್ಟ್ರಗಳು. ಅಮೆರಿಕ ಸರ್ಕಾರದ ಈ ಕ್ರಮದಿಂದ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಭಾರತಕ್ಕೆ ಅನುಕೂಲವೇ ಆಗಲಿದೆ.
ನಿರೀಕ್ಷಣಾ ಪಟ್ಟಿಯಿಂದ ರೂಪಾಯಿ ಹೊರಬರಬೇಕೆಂದರೆ, ಅಮೆರಿಕ- ಭಾರತ ನಡುವಿನ ವ್ಯಾಪಾರ ವಹಿವಾಟು 15 ಶತಕೋಟಿ ಡಾಲರ್ ಮೊತ್ತಕ್ಕಿಂತ ಹೆಚ್ಚಾಗಿರಬೇಕು. ಇದಲ್ಲದೆ ನಿಗದಿತ ದೇಶದ ಚಾಲ್ತಿ ಖಾತೆಯಲ್ಲಿ ತೃಪ್ತಿದಾಯಕವಾಗಿ ವ್ಯಾಪಾರ ವಹಿವಾಟು ನಡೆಯುತ್ತಿದ್ದು, ಅದರ ಪ್ರಮಾಣ ಜಿಡಿಪಿಯ ಶೇ.3ರಷ್ಟು ಇರಬೇಕಾಗುತ್ತದೆ.
ಅಮೆರಿಕ -ಭಾರತ ವಹಿವಾಟಿನಲ್ಲಿ ಎರಡೂ ಅಂಶಗಳೂ ತೃಪ್ತಿಕರವಾಗಿದೆ. ಅಮೆರಿಕದ ಸಂಸತ್‌ಗೆ ಅಲ್ಲಿನ ವಿತ್ತ ಸಚಿವಾಲಯ ಸಲ್ಲಿಸಿದ ಅರ್ಧ ವಾರ್ಷಿಕ ವರದಿ ಪ್ರಕಾರ, ಭಾರತದ ಅರ್ಥ ವ್ಯವಸ್ಥೆ ಮತ್ತು ವ್ಯಾಪಾರ ವಹಿವಾಟು ತೃಪ್ತಿಕರವಾಗಿದೆ. ಹೀಗಾಗಿ, ಭಾರತದ ರೂಪಾಯಿ ನಿರೀಕ್ಷಣಾ ಪಟ್ಟಿಯಲ್ಲಿರುವ ಅಗತ್ಯ ಇಲ್ಲ ಎಂಬ ಅಭಿಪ್ರಾಯಪಟ್ಟಿದೆ.
ಆದರೆ, ಚೀನ ವಿಚಾರದಲ್ಲಿ ಮಾತ್ರ ಅಂಥ ಒಲವು ಹೊಂದಿಲ್ಲ ಮತ್ತು ಆ ದೇಶದ ಕರೆನ್ಸಿ ಯುವಾನ್ ಅನ್ನು ನಿರೀಕ್ಷಣಾ ಪಟ್ಟಿಯಲ್ಲಿ ಮುಂದುವರಿಸಿದೆ. ಚೀನದ ವಿದೇಶಿ ವಿನಿಮಯ ನೀತಿಯಲ್ಲಿ ಪಾರದರ್ಶಕತೆ ಅನುಸರಿಸಲಾಗುತ್ತಿಲ್ಲ. ಜತೆಗೆ ವಿನಿಮಯ ದರವನ್ನು ನಿಗದಿ ಮಾಡುವಲ್ಲಿ ಅನುಸರಿಸುವ ಕ್ರಮಗಳನ್ನು ಪ್ರಕಟಿಸಲಾಗಿಲ್ಲ. ಹೀಗಾಗಿ, ಅದರ ಮೇಲೆ ನಿಗಾ ಇರಿಸುವುದನ್ನು ಮುಂದುವರಿಸಲಾಗಿದೆ ಎಂದು ಅಭಿಪ್ರಾಯಪಟ್ಟಿದೆ.