ನವದೆಹಲಿ: ಭಾರತದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಬುಲೆಟ್ ಪ್ರೂಫ್ ಜಾಕೆಟ್‌ಗಳು ತಯಾರಾಗುತ್ತಿದ್ದು, ಇವುಗಳನ್ನು ಯುರೋಪ್ ದೇಶಗಳೂ ಸೇರಿದಂತೆ 100ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಭಾರತದಲ್ಲಿ ತಯಾರಾಗುವ ಬುಲೆಟ್ ಪ್ರೂಫ್ ಜಾಕೆಟ್‌ಗಳಿಗೆ ಅಂತಾರಾಷ್ಟ್ರೀಯ ಮಾನದಂಡವನ್ನು ನಿಗದಿಸುವುದಕ್ಕಾಗಿ ಭಾರತೀಯ ಮಾನದಂಡಗಳ ಮಂಡಳಿಯನ್ನು (ಬಿಐಎಸ್) ಸ್ಥಾಪಿಸಲಾಗಿದೆ.
ಇದು ಭಾರತದಲ್ಲಿ ತಯಾರಾಗುವ ಬುಲೆಟ ಪ್ರೂಫ್ಗಳಿಗೆ ಮಾನದಂಡಗಳನ್ನು ನಿಗದಿಸಿದ್ದು, ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿದೆ ಎಂದು ಬಿಐಎಸ್ ಉಪನಿರ್ದೇಶಕ ರಾಜೇಶ್ ಬಜಾಜ್ ಹೇಳಿದ್ದಾರೆ.
ಸದ್ಯ ಭಾರತದಲ್ಲಿ ಎರಡು ಸರ್ಕಾರಿ ಸಂಸ್ಥೆಗಳಾದ ಮೆದಾನಿ ಮತ್ತು ಆರ್ಡಿನನ್ಸ್ ಫ್ಯಾಕ್ಟರಿಗಳಲ್ಲಿ ಬಿಐಎಸ್ ಬುಲೆಟ್ ಪ್ರೂಫ್ ಜಾಕೆಟ್‌ಗಳು ತಯಾರಾಗುತ್ತಿವೆ. ಅಲ್ಲದೆ, ಖಾಸಗಿ ಸಂಸ್ಥೆಗಳಾದ ಎಸ್‌ಎನ್‌ಪಿಪಿ, ಸ್ಟಾರ್‌ವೈರ್, ಮತ್ತು ಎಂಕೆಯು ಕೂಡ ಅಂತಾರಾಷ್ಟ್ರೀಯ ಗುಣಮಟ್ಟದ ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ತಯಾರಿಸುತ್ತಿದೆ. ಈಗಾಗಲೇ ಭಾರತದ ಸೇನೆಗಳಿಗೆ 1.86 ಲಕ್ಷ ಜಾಕೆಟ್‌ಗಳನ್ನು ಪೂರೈಸಿದ್ದು, ಮತ್ತೂಂದು ಸುತ್ತಿನ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ.
ಈ ಜಾಕೆಟ್‌ಗಳನ್ನು ಯೋಧರಿಗೆ ಹೊಂದುವಂತೆ ವಿವಿಧ ಗಾತ್ರದಲ್ಲಿ ತಯಾರಿಸಲಾಗುತ್ತಿದ್ದು, ಪ್ರತಿ ಸೆಕೆಂಡಿಗೆ 700 ಮೀ. ವೇಗದಲ್ಲಿ ಬರುವ ಬುಲೆಟ್‌ಗಳಿಂದಲೂ ರಕ್ಷಣೆಯನ್ನು ಒದಗಿಸುತ್ತದೆ. ಇದು ಅತ್ಯಂತ ಹಗುರವೂ ಆಗಿದ್ದು, ಯೋಧರು ಧರಿಸಲು ಅನುಕೂಲಕರವಾಗಿದೆ ಎಂದು ರಾಜೇಶ್ ಬಜಾಜ್ ಹೇಳಿದ್ದಾರೆ.