ಹೊಸದಿಲ್ಲಿ: ಚೀನ ಗಡಿಯಲ್ಲಿ ಭಾರತೀಯ ಸೇನೆ ಬಲವನ್ನು ಕುಗ್ಗಿಸುವುದಿಲ್ಲ. ಆದರೆ ಚೀನದೊಂದಿಗೆ ಶಾಂತಿ ಕಾಪಾಡಿಕೊಳ್ಳುತ್ತೇವೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ವುಹಾನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕೈಗೊಂಡ ನಿರ್ಧಾರಗಳಿಗೆ ಉಭಯ ದೇಶಗಳೂ ಬದ್ಧವಾಗಿರುತ್ತವೆ ಎಂದು ನಿರ್ಮಲಾ ಹೇಳಿದ್ದಾರೆ. ಇತ್ತೀಚೆಗಷ್ಟೇ ಚೀನ ರಕ್ಷಣಾ ಸಚಿವ ವೆಯ್ ಫೆಂಗೆ ಜೊತೆಗೆ ನಿರ್ಮಲಾ ಮಾತುಕತೆ ನಡೆಸಿದ್ದರು.
ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ. ಡೋಕ್ಲಾಂನಲ್ಲಿ ಎರಡು ತಿಂಗಳಿಗೂ ಹೆಚ್ಚು ಕಾಲ ನಡೆದ ಸಂಘರ್ಷದ ನಂತರ ಕಳೆದ ಎಪ್ರಿಲ್‌ನಲ್ಲಿ ಭೇಟಿ ಮಾಡಿದ್ದ ಮೋದಿ ಹಾಗೂ ಜಿನ್‌ಪಿಂಗ್, ಭಾರತ ಹಾಗೂ ಚೀನ ಗಡಿಯಲ್ಲಿ ಸಹಕಾರ ವೃದ್ಧಿಗೆ ಒತ್ತು ನೀಡುವ ಬಗ್ಗೆ ಮಾತುಕತೆ ನಡೆಸಿದ್ದರು. ಈ ಮಾತುಕತೆಯಲ್ಲಿ ಕೈಗೊಂಡ ನಿರ್ಧಾರಗಳು ಕೆಲಸ ಮಾಡುತ್ತಿವೆ ಎಂದು ನಿರ್ಮಲಾ ಹೇಳಿದ್ದಾರೆ.
ಜತೆಗೆ, ಮಾತುಕತೆ ಏನೇ ಆಗಿದ್ದರೂ, ಗಡಿ ರಕ್ಷಣಾ ಪಡೆಗಳನ್ನು ಅಲರ್ಟ್ ಆಗಿರಿಸುವುದು ನಮ್ಮ ಕರ್ತವ್ಯ. ಒಬ್ಬ ರಕ್ಷಣಾ ಮಂತ್ರಿಯಾಗಿ ನಮ್ಮ ಪಡೆಗಳು ಎಂಥ ಸ್ಥಿತಿಯಲ್ಲೂ ಸನ್ನದ್ಧರಾಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ ಎಂದೂ ನಿರ್ಮಲಾ ತಿಳಿಸಿದ್ದಾರೆ. ಇದೇ ವೇಳೆ, “ಭಾರತವು ಪಶ್ಚಿಮಕ್ಕಿಂತ ಉತ್ತರದ ಗಡಿ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ’ ಎಂಬ ಸೇನಾ ಮುಖ್ಯಸ್ಥ ಜ.ರಾವತ್ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ ಅದಕ್ಕೆ ಉತ್ತರಿಸಿದ ಸಚಿವೆ ನಿರ್ಮಲಾ, “ಗಡಿ ಎಂದರೆ ಗಡಿ ಅಷ್ಟೆ. ಹಾಗಾಗಿ, ಎಲ್ಲ ಗಡಿಗಳನ್ನೂ ನಾವು ಎಚ್ಚರವಾಗಿರಬೇಕಾಗುತ್ತದೆ. ಈ ವಿಷಯದಲ್ಲಿ ಸಮುದ್ರದ ಗಡಿಯೂ ಹೊರತಲ್ಲ’ ಎಂದಿದ್ದಾರೆ.
ಅಧಿಕಾರಿಗಳ ಮೇಲೆ ಕೋಪವಿಲ್ಲ: ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಗೆ ಸಂಬಂಧಿಸಿದ ಕೇಸುಗಳ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲೆಂದು ಸುಪ್ರೀಂ ಕೋರ್ಟ್ ಮೊರೆಹೋಗಿರುವ ಸೇನಾಧಿಕಾರಿಗಳ ಮೇಲೆ ನನಗೇನೂ ಕೋಪವಿಲ್ಲ ಎಂದು ಸಚಿವೆ ನಿರ್ಮಲಾ ತಿಳಿಸಿದ್ದಾರೆ. ಅವರ ಮನಸ್ಸಲ್ಲಿ ಕೆಲವೊಂದು ವಿಚಾರಗಳ ಕುರಿತು ಆತಂಕವಿದೆ. ಹಾಗಾಗಿ ಅವರು ಕೋರ್ಟ್‌ಗೆ ಹೋಗಿದ್ದಾರೆ ಎಂಬುದು ನನಗೆ ಅರ್ಥವಾಗುತ್ತದೆ ಎಂದಿದ್ದಾರೆ. ಕಾಯ್ದೆಯ ಕೆಲವು ನಿಬಂಧನೆಗಳನ್ನು ಸಡಿಲಗೊಳಿಸುವ ಪ್ರಸ್ತಾವವನ್ನು ವಿರೋಧಿಸಿ ಸುಮಾರು 70 ಮಂದಿ ಅಧಿಕಾರಿಗಳು ಇತ್ತೀಚೆಗೆ ಕೋರ್ಟ್ ಮೆಟ್ಟಿಲೇರಿದ್ದರು.
ಸ್ಮಾರ್ಟ್‌ಫೆನ್ಸ್ ಇಂದು ಉದ್ಘಾಟನೆ
ಕೇಂದ್ರ ಸರಕಾರ ಇದೇ ಮೊದಲ ಬಾರಿಗೆ ಸಿದ್ಧಪಡಿಸಿರುವ “ಸ್ಮಾರ್ಟ್ ಫೆನ್ಸ್’ ಸೋಮವಾರ ಗೃಹ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಲಿದ್ದಾರೆ. ಪ್ರಾಯೋಗಿಕವಾಗಿ ಅದನ್ನು ಭಾರತ ಮತ್ತು ಪಾಕಿಸ್ಥಾನ ಗಡಿಯಲ್ಲಿ 5 ಕಿಮೀ ವ್ಯಾಪ್ತಿಯಲ್ಲಿ ಅಳವಡಿಸಲಾಗುತ್ತದೆ. ಥರ್ಮಲ್ ಇಮೇಜರ್, ಭೂಗತ ಸೆನ್ಸರ್‌ಗಳು, ಫೈಬರ್ ಆಪ್ಟಿಕಲ್ ಸೆನ್ಸರ್‌ಗಳು, ರಾಡಾರ್‌ಗಳು ಹೊಸ ಮಾದರಿಯ ವ್ಯವಸ್ಥೆಯಲ್ಲಿ ಒಳಗೊಂಡಿವೆ.