Advertisement

ಭಾರತ ವಿಸ್ತರಣಾವಾದಿಯಲ್ಲ, ವಿಶ್ವ ಕಲ್ಯಾಣವನ್ನು ನಂಬುವ ರಾಷ್ಟ್ರ: ಗಡ್ಕರಿ

06:17 PM Nov 17, 2020 | mahesh |

ಪುಣೆ: ಭಾರತವು ವಿಸ್ತರಣಾವಾದಿ ರಾಷ್ಟ್ರವಲ್ಲ. ನಮ್ಮ ದೇಶವು ವಿಶ್ವದ ಕಲ್ಯಾಣವನ್ನು ಮಾತ್ರ ನಂಬುತ್ತದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಮಂಗಳವಾರ ಹೇಳಿದ್ದಾರೆ.

Advertisement

ಪುಣೆಯಲ್ಲಿ ಜರಗಿದ ಕಾರ್ಯಕ್ರಮವೊಂದನ್ನು ವಿಡಿಯೋ ಕಾನ್ಫರೆನ್ಸಿಂಗ್‌ ಮೂಲಕ ಉದ್ದೇಶಿಸಿ ಮಾತನಾಡಿದ ಗಡ್ಕರಿ, ಸ್ವಾವಲಂಬನೆ ಸಾಧಿಸಲು, ಜ್ಞಾನ, ಉದ್ಯಮಶೀಲತೆ, ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ ಮತ್ತು ಯಶಸ್ವಿ ಅಭ್ಯಾಸಗಳ ಅವಶ್ಯಕತೆಯಿದೆ…. ದೇಶವನ್ನು ಅಭಿವೃದ್ಧಿಯ ಹಾದಿಯಲ್ಲಿ ಸಾಗಿಸುವಾಗ, ನಾವು ವೈಜ್ಞಾನಿಕ ಪ್ರಗತಿಗೆ ಒತ್ತು ನೀಡಬೇಕಾಗಿದೆ. ನಮ್ಮ ದೇಶವನ್ನು ವಿಶ್ವಶಕ್ತಿಯನ್ನಾಗಿ ಮಾಡಲು ಜ್ಞಾನದ ಆಧಾರದ ಮೇಲೆ ಪ್ರಥಮ ಸ್ಥಾನವನ್ನು ಗಳಿಸಬೇಕಾಗಿದೆ ಎಂದರು.

ನಾವು ವಿಸ್ತರಣಾವಾದಿಗಳಲ್ಲ. ಕೆಲವು ದೇಶಗಳಿವೆ, ಅವು ವಿಸ್ತರಣಾವಾದಿ ಆಸೆಗಳಿಂದ ಪ್ರೇರಿತವಾಗಿವೆ, ಆದರೆ ನಾವು ವಿಶ್ವದ ಕಲ್ಯಾಣವನ್ನು ನಂಬುತ್ತೇವೆ. ನಾವು ವಸುದೇವ ಕುಟುಂಬಕಂ (ಜಗತ್ತು ಒಂದು ಕುಟುಂಬ) ಅನ್ನು ನಂಬುತ್ತೇವೆ ಎಂದು ಗಡ್ಕರಿ ಹೇಳಿದರು.

ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದ ಅವರು ಮಾಡಿದ ಭಾಷಣ ನಮ್ಮ ಪ್ರೇರಣೆಯಾಗಿದೆ ಎಂದರು. ಎಲ್ಲರಿಗೂ ಶಿಕ್ಷಣ ಲಭ್ಯವಾಗುವಂತೆ ಮಾಡುವ ಅಗತ್ಯವನ್ನು ಒತ್ತಿ ಹೇಳಿದ ಅವರು, ಶಿಕ್ಷಣವು ಕೊನೆಯ ವ್ಯಕ್ತಿಯನ್ನು ತಲುಪಬೇಕು. ಆದರೆ, ಅದೇ ಸಮಯದಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುವುದನ್ನೂ ನಾವು ಖಚಿತಪಡಿಸಿಕೊಳ್ಳಬೇಕು ಎಂದರು.

ಕೇವಲ ಜ್ಞಾನ-ಶಕ್ತಿ ನಮ್ಮ ಗುರಿಯಾಗಬಾರದು. ಆದರ್ಶ ನಾಗರಿಕರನ್ನು ಸೃಷ್ಟಿಸಲು ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವಲ್ಲಿ ಒತ್ತು ನೀಡಬೇಕು ಎಂದು ಗಡ್ಕರಿ ಹೇಳಿದರು.

Advertisement

ಆತ್ಮನಿರ್ಭರ (ಸ್ವಾವಲಂಬಿ) ಆಗಲು, ಆಮದನ್ನು ಕಡಿಮೆ ಮಾಡುವ ಮತ್ತು ರಫ್ತು ಹೆಚ್ಚಿಸುವ ಅವಶ್ಯಕತೆಯಿದೆ. ನನ್ನ ಇಲಾಖೆಯಲ್ಲಿ ನಾನು ಆಮದು ಮಾಡಿಕೊಳ್ಳುವ ವಸ್ತುಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇನೆ. ನಾವು ಆಮದು-ಬದಲಿ ವಸ್ತುಗಳನ್ನು ಉತ್ಪಾದಿಸಬೇಕು ಎಂದು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ ಎಂದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ಸಚಿವರಾಗಿರುವ ಗಡ್ಕರಿ ನುಡಿದರು.

ಶಿಕ್ಷಣದಲ್ಲಿ ಸ್ವಾವಲಂಬನೆ ಕುರಿತು ಮಾತನಾಡಿದ ಅವರು, ದೇಶದಲ್ಲಿರುವ ವಿಶ್ವವಿದ್ಯಾಲಯಗಳನ್ನು ಉನ್ನತೀಕರಣಗೊಳಿಸಬೇಕು. ಇದರಿಂದ ಜನರು ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವಂತಾಗುವುದಿಲ್ಲ. ವಿಶ್ವ ದರ್ಜೆಯ ವಿಶ್ವವಿದ್ಯಾಲಯಗಳನ್ನು ರಚಿಸಲು ನಮಗೆ ಎಲ್ಲ ಸಾಮರ್ಥ್ಯಗಳಿವೆ ಮತ್ತು ನಾವು ಅದನ್ನು ಮಾಡಬಹುದಾಗಿದೆ. ನಾವು ಕೇವಲ ಇಚ್ಛಾಶಕ್ತಿ ಮತ್ತು ಮಹತ್ವಾಕಾಂಕ್ಷೆಯನ್ನು ಹೊಂದಬೇಕಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next