ಲಿಲ್ಲೆಹ್ಯಾಮರ್: ಭಾರತ-ನಾರ್ವೆ ಶುಕ್ರವಾರದಿಂದ ಡೇವಿಸ್ ಕಪ್ ವರ್ಲ್ಡ್ ಗ್ರೂಪ್ ಒಂದನೇ ಸುತ್ತಿನಲ್ಲಿ ಮುಖಾಮುಖಿಯಾಗಲಿವೆ. ಇಲ್ಲಿ ಪ್ರಜ್ನೇಶ್ ಗುಣೇಶ್ವರನ್ ಅವರಿಗೆ ಕಠಿನ ಸವಾಲು ಎದುರಾಗಿದ್ದು, ಮೊದಲ ಸಿಂಗಲ್ಸ್‌ನಲ್ಲಿ ಯುಎಸ್ ಓಪನ್ ರನ್ನರ್ಅಪ್ ಕ್ಯಾಸ್ಪರ್ ರೂಡ್ ವಿರುದ್ಧ ಆಡಲಿದ್ದಾರೆ. ರೂಡ್ ನಾರ್ವೆಯ ನಂ.1 ಹಾಗೂ ವಿಶ್ವದ ನಂ.2 ಆಟಗಾರನಾಗಿದ್ದಾರೆ.
ದಿನದ ಮತ್ತೂಂದು ಸಿಂಗಲ್ಸ್‌ನಲ್ಲಿ 276ನೇ ರ್‍ಯಾಂಕಿಂಗ್‌ನ ರಾಮ್‌ಕುಮಾರ್ ರಾಮನಾಥನ್ ಸವಾಲು ಸುಲಭದ್ದೆಂದು ಭಾವಿಸಲಾಗಿದೆ. ಇಲ್ಲಿ ಅವರ ಎದುರಾಳಿ 325ರಷ್ಟು ಕೆಳ ರ್‍ಯಾಂಕಿಂಗ್ ಆಟಗಾರನಾಗಿರುವ ವಿಕ್ಟರ್ ಡುರಸೋವಿಕ್.
ಯೂಕಿ ಭಾಂಬ್ರಿ-ಸಾಕೇತ್ ಮೈನೇನಿ ಶನಿವಾರದ ಡಬಲ್ಸ್ ನಲ್ಲಿ ಕಣಕ್ಕಿಳಿಯುವರು. ಈ ಪಂದ್ಯ ಭಾರತಕ್ಕೆ ನಿರ್ಣಾಯಕ ಎಂದು ಭಾವಿಸಲಾಗಿದೆ. ಆದರೆ ಸಿಂಗಲ್ಸ್ ಹಾಗೂ ರಿವರ್ಸ್ ಸಿಂಗಲ್ಸ್‌ನಲ್ಲಿ ಭಾರತ ಒಂದೊಂದು ಪಂದ್ಯವನ್ನು ಗೆಲ್ಲುವುದು ಮುಖ್ಯ. ರಿವರ್ಸ್ ಸಿಂಗಲ್ಸ್ ಪಂದ್ಯ ಕೂಡ ಶನಿವಾರವೇ ನಡೆಯಲಿದೆ.
ಹೊಸದಿಲ್ಲಿಯಲ್ಲಿ ನಡೆದ ಕಳೆದ ವರ್ಲ್ಡ್ ಗ್ರೂಪ್-1 ಪ್ಲೆ ಆಫ್ನಲ್ಲಿ ಭಾರತ ತಂಡ ಡೆನ್ಮಾರ್ಕ್ ವಿರುದ್ಧ 4-0 ಗೆಲುವು ಸಾಧಿಸಿತ್ತು.
ಭಾರತ ತಂಡ
ರೋಹಿತ್ ರಾಜ್‌ಪಾಲ್ (ಆಡದ ನಾಯಕ), ರಾಮ್‌ಕುಮಾರ್ ರಾಮನಾಥನ್, ಪ್ರಜ್ನೇಶ್ ಗುಣೇಶ್ವರನ್, ಸುಮಿತ್ ನಾಗಲ್, ಯೂಕಿ ಭಾಂಬ್ರಿ, ಸಾಕೇತ್ ಮೈನೇನಿ, ಮುಕುಂದ್ ಶಶಿಕುಮಾರ್.