ಕಾನ್ಪುರ: ಟಿ20 ಸರಣಿ ವಿಜಯದ ಬಳಿಕ ಭಾರತ ತಂಡ ಟೆಸ್ಟ್ ಸರಣಿಗೆ ಸಿದ್ದವಾಗಿದೆ. ವಿಶ್ವ ಚಾಂಪಿಯನ್ ನ್ಯೂಜಿಲ್ಯಾಂಡ್ ವಿರುದ್ಧ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಸರಣಿಯ ಮೊದಲ ಟೆಸ್ಟ್ ಪಂದ್ಯ ಆರಂಭವಾಗಿದೆ. ಟಾಸ್ ಗೆದ್ದ ಅಜಿಂಕ್ಯ ರಹಾನೆ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.
ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸುತ್ತಿದ್ದಾರೆ. ಯುವ ಆಟಗಾರ ಶ್ರೇಯಸ್ ಅಯ್ಯರ್ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡುತ್ತಿದ್ದು, ದಿಗ್ಗಜ ಸುನೀಲ್ ಗಾವಸ್ಕರ್ ಅವರಿಂದ ಕ್ಯಾಪ್ ಪಡೆದರು.
ಕೆ.ಎಲ್. ರಾಹುಲ್ ಗಾಯಾಳಾಗಿ ಹೊರಗುಳಿದಿರುವುದರಿಂದ ಮಾಯಾಂಕ್ ಅಗರ್ವಾಲ್-ಶುಭಮನ್ ಗಿಲ್ ಜೋಡಿ ಇನ್ನಿಂಗ್ಸ್ ಆರಂಭಿಸಲಿದೆ. ಚೇತೇಶ್ವರ್ ಪೂಜಾರ ಎಂದಿನಂತೆ ಒನ್‌ಡೌನ್‌ನಲ್ಲಿ ಬರಲಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಬ್ಯಾಟ್ ಬೀಸಲಿದ್ದಾರೆ.
ಇದನ್ನೂ ಓದಿ:ಅಜಿಂಕ್ಯ ರಹಾನೆ ಬಳಗಕ್ಕೆ ಕಾದಿದೆ ಕಾನ್ಪುರ ಟೆಸ್ಟ್
ನ್ಯೂಜಿಲ್ಯಾಂಡ್ ಟೆಸ್ಟ್ ಸರಣಿಯ ಅಭ್ಯಾಸಕ್ಕೆಂದೇ ಟಿ20 ಸರಣಿಗೆ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿತು. ನಾಯಕ ಕೇನ್ ವಿಲಿಯಮ್ಸನ್ ಕೂಡ ಇವರಲ್ಲೊಬ್ಬರು. ಹಾಗೇಯೇ ವೇಗಿ ಕೈಲ್ ಜಾಮೀಸನ್ ಕೂಡ ಟಿ20 ಆಡಿರಲಿಲ್ಲ. ಇದೀಗ ವಿಲಿಯಮ್ಸನ್, ಜಾಮೀಸನ್ ಪುನರಾಗಮನ ಆಗುತ್ತಿದೆ. ಪ್ರವಾಸಿಗರ ಟೆಸ್ಟ್ ಟೀಮ್ ಹೆಚ್ಚು ಬಲಿಷ್ಠವಾಗಿ ಗೋಚರಿಸುತ್ತಿದೆ.
ತಂಡಗಳು:
ಭಾರತ: ಶುಭ್ಮನ್ ಗಿಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ(ನಾ), ಶ್ರೇಯಸ್ ಅಯ್ಯರ್, ವೃದ್ಧಿಮಾನ್ ಸಹಾ(ವಿ.ಕೀ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಉಮೇಶ್ ಯಾದವ್
ನ್ಯೂಜಿಲ್ಯಾಂಡ್: ಟಿಮ್ ಲ್ಯಾಥಮ್, ವಿಲ್ ಯಂಗ್, ಕೇನ್ ವಿಲಿಯಮ್ಸನ್ (ನಾ), ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡೆಲ್ (ವಿ.ಕೀ), ರಚಿನ್ ರವೀಂದ್ರ, ಟಿಮ್ ಸೌಥಿ, ಅಜಾಜ್ ಪಟೇಲ್, ಕೈಲ್ ಜೇಮಿಸನ್, ವಿಲಿಯಂ ಸೊಮರ್ವಿಲ್ಲೆ