Advertisement

ಭಾರತ –ನೇಪಾಲದ್ದು ರೋಟಿ –ಬೇಟಿಯ ನಂಟು: ರಕ್ಷಣಾ ಸಚಿವ ರಾಜನಾಥ್‌ ಸಿಂಗ್

01:33 AM Jun 16, 2020 | Hari Prasad |

ಹೊಸದಿಲ್ಲಿ: ಭಾರತ- ನೇಪಾಲ ಸಂಬಂಧ ಸಾಮಾನ್ಯದ್ದಲ್ಲ. ನಮ್ಮದು ರೋಟಿ- ಬೇಟಿಯ (ರೊಟ್ಟಿ- ಮಗಳು) ಸಂಬಂಧ.

Advertisement

ವಿಶ್ವದ ಯಾವುದೇ ಶಕ್ತಿಯಿಂದಲೂ ಈ ಸಂಬಂಧವನ್ನು ಮುರಿಯಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸ್ಪಷ್ಟಪಡಿಸಿದ್ದಾರೆ.

ಈ ಮೂಲಕ ನೇಪಾಲದ ಬ್ರೈನ್‌ವಾಶ್‌ಗೆ ಮುಂದಾಗಿರುವ ಚೀನಕ್ಕೆ ರಾಜನಾಥ್‌ ಪರೋಕ್ಷವಾಗಿ ಕುಟುಕಿದ್ದಾರೆ.

‘ಭಾರತ ಮತ್ತು ನೇಪಾಲ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಇದ್ದರೆ ಅದನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ’ ಎಂದು ಅವರು ಉತ್ತರ ಖಂಡದ ಬಿಜೆಪಿ ವರ್ಚುವಲ್‌ ಜಾಥಾದಲ್ಲಿ ವೇಳೆ ತಿಳಿಸಿದ್ದಾರೆ.

ನಾವು ನಿರ್ಮಿಸಿರುವ ರಸ್ತೆಯಿಂದಾಗಿ ನೇಪಾಲಕ್ಕೆ ತಪ್ಪುಭಾವನೆ ಮೂಡಿದೆ. ಭಾರತೀಯ ಭೂಪ್ರದೇಶವೇ ಆಗಿರುವ ಲಿಪುಲೇಕ್‌ನಲ್ಲಿ ನಾವು ಗಡಿ ರಸ್ತೆ ಸಂಸ್ಥೆ (ಬಿಆರ್‌ಒ) ಮೂಲಕ ಈ ರಸ್ತೆ ನಿರ್ಮಿಸಿದ್ದೇವಷ್ಟೇ. ನಾವು ನೇಪಾಲದೊಂದಿಗೆ ಸಾಮಾಜಿಕ, ಭೌಗೋಳಿಕ, ಐತಿಹಾಸಿಕ, ಸಂಸ್ಕೃತಿ ಮತ್ತು ಅಧ್ಯಾತ್ಮಿಕ ನಂಟನ್ನು ಹೊಂದಿದ್ದೇವೆ. ನೇಪಾಲಕ್ಕೆ ಭಾರತೀಯರ ಮೇಲೆ ಯಾವುದೇ ಕಹಿಭಾವನೆ ಮೂಡಬಾರದು’ ಎಂದು ಹೇಳಿದರು. ಉತ್ತರಖಂಡದ ಲಿಪುಲೇಕ್‌ನಲ್ಲಿ ರಾಜ ನಾಥ್‌ ಸಿಂಗ್‌ ಮೇ ತಿಂಗಳಿನಲ್ಲಿ 80 ಕಿ.ಮೀ. ರಸ್ತೆ ಯೋಜನೆಗೆ ಚಾಲನೆ ನೀಡಿದ್ದರು. ಆ ಬಳಿಕ ನೇಪಾಳ ವಿವಾದಿತ ನಕ್ಷೆಯನ್ನು ಪ್ರಕಟಿಸಿತ್ತು.

Advertisement

‘ನೇಪಾಲದ ದುರ್ವರ್ತನೆ ಇದೇ ಮೊದಲು’: ‘ನೇಪಾಲ ಪೊಲೀಸರು ಒಂದು ಗಂಟೆಗೂ ಹೆಚ್ಚು ಕಾಲ 18-20 ಗುಂಡು ಗಳನ್ನು ಗಾಳಿಯಲ್ಲಿ ಹಾರಿಸಿದ್ದಾರೆ. ಗುಂಡಿನ ಮೊರೆತ ಈಗಲೂ ನಮ್ಮನ್ನು ಆಘಾತಕ್ಕೆ ತಳ್ಳಿದೆ’! ಕಳೆದ ವಾರ ನೇಪಾಲದ ಭದ್ರತಾ ಸಿಬ್ಬಂದಿಯ ದುರ್ವರ್ತನೆಯನ್ನು ಕಣ್ಣಾರೆ ಕಂಡ, ಬಿಹಾರದ ಗಡಿಯ ಜನರ ಆತಂಕದ ಮಾತಿದು.

“ಸೊಸೆಯ ಕುಟುಂಬಸ್ಥರನ್ನು ಭೇಟಿಯಾಗಲು ತೆರಳಿದ್ದಾಗ, ನೇಪಾಲ ಪೊಲೀಸರು ನಮ್ಮನ್ನು ಬಂಧಿಸಿದರು. ಅಕ್ರಮವಾಗಿ ಗಡಿ ನುಸುಳಿರುವುದಾಗಿ ಒಪ್ಪಿಕೊಳ್ಳುವಂತೆ ಬೆದರಿಕೆ ಹಾಕಿದ್ದರು’ ಎಂದು ಲಾಲ್‌ಬಂಡಿಯ ಲಗನ್‌ ಕಿಶೋರ್‌ ಆರೋಪಿಸಿದ್ದಾರೆ.

‘ಗುಂಡಿನ ದಾಳಿ ದುರದೃಷ್ಟಕರ. ಇಲ್ಲಿನ ಜನ ನೇಪಾ ಲದ ಹೊಲಗಳಿಗೆ ಕೆಲಸಕ್ಕೆ ಹೋಗುತ್ತಾರೆ. ಅಲ್ಲಿನವರು ಇಲ್ಲಿನ ಗದ್ದೆಗಳಿಗೆ ಬರುತ್ತಾರೆ. ನಮ್ಮ ಶೇ. 80 ರಷ್ಟು ಜನ ನೇಪಾಲಿಗರನ್ನು ಮದುವೆಯಾಗಿದ್ದಾರೆ. ನೇಪಾಲದ ದುರ್ವರ್ತನೆ ಇದೇ ಮೊದಲ ಬಾರಿಗೆ ನಡೆದಿದೆ’ ಎಂದು ಹೇಳಿದ್ದಾರೆ.

ನೇಪಾಲ ಗುಟುರು ಹಾಕಿದ್ದೇಕೆ?
ನೇಪಾಲದ ದೇಶೀಯ ರಾಜಕೀಯ ಗಲಾಟೆ, ಬೆಳೆಯಬೇಕೆಂಬ ಮಹತ್ವಾಕಾಂಕ್ಷೆ, ಚೀನದ ಆರ್ಥಿಕ ಬೆಂಬಲ- ಈ ಮೂರು ಅಂಶಗಳು ಭಾರತ ದೊಂದಿಗೆ ಜಗಳಕ್ಕೆ ಮುಂದಾಗಲು ನೇಪಾಲಕ್ಕೆ ಪ್ರೇರೇ ಪಣೆ ನೀಡಿವೆ ಎಂದು ರಾಜತಾಂತ್ರಿಕ ತಜ್ಞರು ವಿಶ್ಲೇಷಿಸಿದ್ದಾರೆ.

ನೇಪಾಲದಲ್ಲಿ ಈ ಹಿಂದೆ ಭಾರತೀಯ ರಾಯಭಾರಿ ಆಗಿದ್ದ ರಾಕೇಶ್‌ ಸೂದ್‌ “ಎರಡೂ ದೇಶಗಳು ತಮ್ಮ ಸಂಬಂಧವನ್ನು ಅತ್ಯಂತ ಅಪಾಯ ಕಾರಿ ಹಂತಕ್ಕೆ ತಂದು ನಿಲ್ಲಿಸಿವೆ. ಅದರಲ್ಲೂ ನೇಪಾಲ ತನ್ನ ಹೊಂಡವನ್ನು ತಾನೇ ತೋಡಿಕೊಂಡಿದೆ. ಇದರಿಂದ ಭವಿಷ್ಯದಲ್ಲಿ ಅದಕ್ಕೆ ಹೊರಬರಲು ಬಹಳ ಕಷ್ಟವಾಗಲಿದೆ’ ಎಂದು ಹೇಳಿದ್ದಾರೆ.

ನೇಪಾಲದಲ್ಲಿ ಸೇವೆ ಸಲ್ಲಿಸಿದ್ದ ಇನ್ನೊಬ್ಬರು ಮಾಜಿ ರಾಯಭಾರಿ, ‘ಚೀನದ ಬೆಂಬಲದೊಂದಿಗೆ ದೇಶೀಯ ರಾಜಕೀಯ ಗಲಾಟೆಗಳನ್ನು ನಿಯಂತ್ರಿಸಲು ಕೆ.ಪಿ. ಶರ್ಮಾ ಓಲಿ ನಕ್ಷೆ ತಿದ್ದುಪಡಿ ಮಾಡಿದ್ದಾರೆ. ಭಾರತ ವಿರೋಧಿ ಭಾವ ಈಗಾಗಲೇ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿದೆ. ಮುಂದೆಯೂ ಗೆಲ್ಲಿಸಲಿದೆ ಎಂಬ ನಂಬಿಕೆ ಅವರದ್ದು’ ಎಂದು ವಿಶ್ಲೇಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next